Thursday, October 22, 2015

ಉಳಿತಾಯ ಬದುಕಿಗೆ ಸುರಕ್ಷೆಯ ಜೀವವಿಮೆ


ಳಿತಾಯ ಮಾಡಿದ ಹಣ ಗಳಿಸಿದಷ್ಟೇ ಮುಖ್ಯ ಹಾಗೂ ಇಂದಿನ ಉಳಿತಾಯ ನಾಳಿನ ಜೀವನಕ್ಕೆ ಭದ್ರ ಅಡಿಪಾಯ ಎಂಬುದು ಹಿರಿಯರ ಅನುಭವದ ಮಾತು.ಹಣ ಉಳಿಸುವುದರಲ್ಲೂ ಹಲವಾರು ವಿಧಾನಗಳು ಇವೆ. ಅದರಲ್ಲಿ ಜೀವ ವಿಮೆಯು ನಿರಂತರ ಉಳಿತಾಯ ಹಾಗೂ ಜೀವನಕ್ಕೆ ಆರ್ಥಿಕ ಭದ್ರತೆಯನ್ನು ಒದಗಿಸುವಂತಹ ಬಹುಬಗೆ ಪ್ರಯೋಜನ ಕಾರಿ ಯೋಜನೆಯಾಗಿದೆ. ಜತೆಗೆ, ಆದಾಯ ತೆರಿಗೆ ಪಾವತಿಸು ತ್ತಿರುವವರಿಗೆ ತೆರಿಗೆಯನ್ನೂ ಗಮನಾರ್ಹ ಪ್ರಮಾಣದಲ್ಲಿ ಉಳಿಸಿಕೊಡುವ ಉಪಾಯವೂ ಆಗಿದೆ.
       ಒಂದೇ ಕಲ್ಲಿನಲ್ಲಿ ಎರಡು ಮೂರು ಹಣ್ಣುಗಳನ್ನು ಮರದಿಂದ ಬೀಳಿಸಿದಂತೆಯೇ, ಜೀವ ವಿಮೆ ಎಂಬುದೂ ಸಹ ಒಂದೇ ಹೂಡಿಕೆಯಿಂದ ಹಲವಾರು ಅನುಕೂಲಗಳನ್ನು ತಂದುಕೊಡುವಂತಹುದೇ ಆಗಿದೆ.ಜೀವ ವಿಮೆಯಲ್ಲಿ ಅವಧಿಯ ಕೊನೆಗೆ ಸಿಗುವ ಹಣ ಹೂಡಿಕೆದಾರರು ಉಳಿತಾಯ ಮಾಡಿದ (ಪ್ರೀಮಿಯಂ) ಹಣ ಮಾತ್ರವಷ್ಟೇ ಆಗಿರುವುದಿಲ್ಲ. ಪಾಲಿಸಿಯ ಅವಧಿ ಪೂರ್ಣಗೊಂಡ ನಂತರ ಹೂಡಿಕೆ ಮಾಡಿದ ವ್ಯಕ್ತಿಯಾಗಲೀ, ಅವರನ್ನು ಅವಲಂಬಿಸಿದ ಕುಟುಂಬದ ಇತರೆ ಸದಸ್ಯರೇ ಆಗಲೀ ಪ್ರೀಮಿಯಂ ಮತ್ತು ಬೋನಸ್ ಸೇರಿಕೊಂಡು ದೊಡ್ಡದಾದ ಮೊತ್ತವನ್ನೇ ಪಡೆಯುತ್ತಾರೆ.  
       ದೀರ್ಘಾವಧಿ ಹೂಡಿಕೆ: ಮುಂದಿನ 15, 20, 25 ಅಥವಾ 30 ವರ್ಷಗಳಿಗೆ ಅಥವಾ ಮಕ್ಕಳ ಉನ್ನತ ವ್ಯಾಸಂಗ, ಮದುವೆ, ಸ್ವಂತಕ್ಕೊಂದು ಮನೆನಿರ್ಮಿಸಿಕೊಳ್ಳುವ ಹಂತದಲ್ಲಿ ಅಗತ್ಯವಾಗಿ ಬೇಕಾಗುವ ಹಣಕ್ಕೂ ಮುಂಚಿತವಾಗಿಯೇ ಯೋಜಿಸಿ ಹೂಡಿಕೆ ಮಾಡುವ ವ್ಯವಸ್ಥೆಯೂ ವಿಮಾ ಪಾಲಿಸಿಗಳಲ್ಲಿದೆ.ಜೀವ ವಿಮೆ ಮಾಡಿಸಿದ ವ್ಯಕ್ತಿ ಬದುಕಿರುವವರೆಗೆ ಅಥವಾ ಒಂದು ನಿಶ್ಚಿತ ಕಾಲಾವಧಿವರೆಗೆ ಮಾತ್ರ ವಿಮೆಗೆ ಕಂತಿನ ಹಣ ಕಟ್ಟಬೇಕಾಗುತ್ತದೆ. ಒಂದೊಮ್ಮೆ ಹೂಡಿಕೆ ಆರಂಭಿಸಿದ ವ್ಯಕ್ತಿ ದಿಢೀರ್‌ ಎಂದು ಬದುಕಿನಿಂದ ನಿರ್ಗಮಿಸಿದರೆ ಅವರನ್ನು ಅವಲಂಬಿಸಿದ ಕುಟುಂಬದ ಸದಸ್ಯರಿಗೆ ನಿಗದಿತ ಮೊತ್ತ ಸೇರುತ್ತದೆ. ಹಾಗೆ ಅವಲಂಬಿತರಿಗೆ ಸೇರಬೇಕಾದ ಮೊತ್ತಕ್ಕೆ ಹೂಡಿಕೆದಾರರ ಅಕಾಲಿಕ ನಿರ್ಗಮನದಿಂದ ಯಾವುದೇ ನಕಾರಾತ್ಮಕ ಪರಿಣಾಮವೂ ಆಗುವುದಿಲ್ಲ. ಹಾಗಾಗಿ ಇದು ಹಲವು ಬಗೆಯಲ್ಲಿ ಪ್ರಯೋಜನ ಕಾರಿಯಾದ ಉಳಿತಾಯ ಯೋಜನೆಯೂ ಆಗಿದೆ. ಒಂದೇ ಪ್ರಯತ್ನಕ್ಕೆ ಹಲವು ಅನುಕೂಲಗಳನ್ನು ಒದಗಿಸುವಂತಹ ಜೀವ ವಿಮೆಗೆ ಸರಿಸಾಟಿಯಾದ ಬೇರೊಂದು ಯೋಜನೆ ಇಲ್ಲ ಎಂದೇ ಹೇಳಬಹುದು. 
      ಆಸ್ತಿ ಪಾಸ್ತಿಗಳಿಗೆ ಹಣಕಾಸು ನೆರವು ನೀಡಿದ ಹಣಕಾಸು ಸಂಸ್ಥೆಗಳು ತಮ್ಮ ಹಣಕಾಸಿನ ನೆರವು ಸುರಕ್ಷಿತವಾಗಿರುವ ಸಲುವಾಗಿ ಕಡ್ಡಾಯವಾಗಿ ಸಾಮಾನ್ಯ ವಿಮೆಯನ್ನು ಮಾಡಿಸುತ್ತವೆ. ಹಾಗೂ ಒಂದು ನಿರ್ದಿಷ್ಟ ಹಾನಿಯನ್ನು ಅವಲಂಬಿಸಿ ಅಂದರೆ ಒಂದು ವಾಹನದ ಬೆಲೆ ರೂ. 75,000 ಇದ್ದರೆ, ಅದರ ಮೊತ್ತಕ್ಕೆ ಸಾಮಾನ್ಯ ವಿಮೆ (General Insurance) ಮಾಡಿಸುತ್ತಾರೆ.ಆದರೆ ಒಂದು ಕುಟುಂಬಕ್ಕೆ ಆಧಾರ ಸ್ಥಂಭದಂತಿರುವ ವ್ಯಕ್ತಿಯು ಭರವಸೆಯಿಂದ ಹಣ ತೊಡಗಿಸುವ ಜೀವ ವಿಮೆ ಎಂಬುದು ಬೆಲೆ ಕಟ್ಟಲಾಗದಂತಹುದು. ಅದರಲ್ಲಿ ಒಂದಿಡೀ ಕುಟುಂಬದ ಭವಿಷ್ಯ ಅಡಗಿರುತ್ತದೆ ಎಂಬುದನ್ನು ಗಮನಿಸಬೇಕಿದೆ. 
        ಒಂದು ಸರಳ ವಿಧಾನದಿಂದ ಈ ವಿಚಾರವನ್ನು ಮನದಟ್ಟು ಮಾಡಿಕೊಳ್ಳಬಹುದು. ಅದುವೇ ಮಾನವನ ಜೀವದ ಮೌಲ್ಯ (Human Life Value - HLV). ಇದು ಆ ವ್ಯಕ್ತಿಯ ಆದಾಯದ ಮೇಲೆ ಅವಲಂಬಿತವಾಗಿದೆ. ಆ ಕಾರಣದಿಂದ ಜೀವ ವಿಮೆಯನ್ನು ಸರ್ಕಾರ ಕಡ್ಡಾಯಗೊಳಿಸಿಲ್ಲ. ಪ್ರತಿ ವ್ಯಕ್ತಿ ಅಥವಾ ಕುಟುಂಬ ತಮ್ಮ ಆದಾಯಕ್ಕೆ ತಕ್ಕಂತೆ ಜೀವ ವಿಮೆ ಮಾಡಿಸುವುದನ್ನು ಸ್ವಂತ ನಿರ್ಧಾರಕ್ಕೇ ಬಿಡಲಾಗಿದೆ. ಹಾಗಾಗಿ ಪ್ರತಿ ಕುಟುಂಬವೂ ಅದರ ಆದಾಯಕ್ಕೆ ತಕ್ಕಂತೆ ಗರಿಷ್ಠ ಜೀವ ವಿಮಾ ಸುರಕ್ಷೆಯನ್ನು ಹೊಂದುವುದು ಅವಶ್ಯ. ಆದರೆ ವಾರ್ಷಿಕ ಆದಾಯದ ಶೇಕಡ 10, ಶೇ 15, ಶೇ 20 ಮತ್ತು ಶೇ 25ರಷ್ಟನ್ನು ಮಾಸಿಕ ಆದಾಯ ಬೆಳೆದಂತೆ ಅಥವಾ ಆದಾಯಕ್ಕೆ ತಕ್ಕಂತೆ ಶೇಕಡವಾರು ಪ್ರೀಮಿಯಂ ನಿಗದಿ ಪಡಿಸಿಕೊಂಡು ಜೀವ ವಿಮಾ ಯೋಜನೆಗಳಲ್ಲಿ ತೊಡಗಿಸುವುದು ಒಳ್ಳೆಯದು.  
      ಜೀವ ವಿಮೆಯ ಅನುಕೂಲ: ಜೀವ ವಿಮಾ ಪಾಲಿಸಿಯೂ ಒಂದು ಆಸ್ತಿಯೇ ಆಗಿದೆ. ಸ್ಥಿರ, ಚರ ಆಸ್ತಿಗಳಿಗೆ ಸಂಬಂಧಿಸಿದ ಒಡೆತನದ ಪತ್ರಕ್ಕೆ ಎಷ್ಟು ಪ್ರಾಮುಖ್ಯತೆ ಯಿದೆಯೋ ಅಷ್ಟೇ ಪ್ರಾಮುಖ್ಯಗೆ ವಿಮಾ ಪಾಲಿಸಿಯ ಬಾಂಡ್‌ಗೂ ಇರುತ್ತದೆ. ಮನೆಯಲ್ಲಿ ಚಿನ್ನ ಬೆಳ್ಳಿ ಆಭರಣವಿದ್ದರೆ ಆಪತ್ಕಾಲಕ್ಕೆ ಒದಗುತ್ತದೆ ಎಂಬುದು ನೂರಾರು ವರ್ಷಗಳಿಂದಲೂ ಭಾರತೀಯ ಕುಟುಂಬಗಳಲ್ಲಿ ಬೆಳೆದುಬಂದಿರುವ ನಂಬಿಕೆ. ಆಭರಣ ಎಂಬುದು ಮನೆಯ ಹೆಣ್ಣು ಮಕ್ಕಳು ಹಬ್ಬ ಮತ್ತು ಸಮಾರಂಭಗಳಲ್ಲಿ ತೊಟ್ಟುಕೊಂಡು ಆನಂದಿಸಲಷ್ಟೇ ಅಲ್ಲ, ತುರ್ತಾಗಿ ಹಣ ಬೇಕಾದರೆ ಆಭರಣವನ್ನು ಬ್ಯಾಂಕ್‌ನಲ್ಲಿ ಅಡವಿಟ್ಟು ಸಾಲವಾಗಿ ಹಣವನ್ನು ಪಡೆಯಬಹುದು. ಮತ್ತೆ ಹಣ ಒದಗಿಬಂದಾಗ ಅಸಲು ಬಡ್ಡಿ ಕಟ್ಟಿ ಆಭರಣವನ್ನು ಬಿಡಿಸಿಕೊಳ್ಳಬಹುದು.  
       ಇದೇ ರೀತಿಯಲ್ಲಿ ಜೀವ ವಿಮಾ ಪಾಲಿಸಿಯೂ ಸಹ ಅಪತ್ಕಾಲದಲ್ಲಿ, ತುರ್ತು ಸಂದರ್ಭಗಳಲ್ಲಿ ಒದಗುತ್ತದೆ. ಯಾವುದಕ್ಕಾದರೂ ತುರ್ತಾಗಿ ಹಣ ಬೇಕಾದರೆ ಜೀವ ವಿಮೆಯ ಬಾಂಡನ್ನು ಇತರೆ ಹಣಕಾಸು ಸಂಸ್ಥೆಗಳಲ್ಲಿ ಅಡವಿಟ್ಟು ಸಾಲ ಪಡೆಯಬಹುದು.ಹಾಗೆಂದು ಸಾಲ ನೀಡಿದವರು ವಿಮಾ ಹಣದ ಮೇಲೆ ಹಕ್ಕು ಸಾಧಿಸುವಂತಿಲ್ಲ. ಹಾಗೂ ನ್ಯಾಯಾಲಯಗಳ ಜಪ್ತಿ ಮುಂತಾದವುಗಳಿಂದ ವಿಮೆ ಮಾಡಿಸಿದವರಿಗೆ ರಕ್ಷಣೆಯೂ ಇರುತ್ತದೆ. ವಿಮೆಗೆ ತುಂಬುವ ಪ್ರೀಮಿಯಂ ಹಣಕ್ಕೆ ಪ್ರತಿ ಹಣಕಾಸು ವರ್ಷದಲ್ಲಿಯೂ ಆದಾಯ ತೆರಿಗೆ ಹೊರೆಯಿಂದ ವಿನಾಯಿತಿಯೂ ಇದೆ.
         ಕುಟುಂಬದ ಮುಖ್ಯಸ್ಥರು, ದುಡಿಮೆ ಮಾಡುವ ಮುಖ್ಯ ವ್ಯಕ್ತಿಯ ಸಾವಿಗೀಡಾದರೆ ಅವರನ್ನು ಅವಲಂಬಿಸಿದವರಿಗೆ ದಿಕ್ಕೇ ತೋಚದಂತಾಗುತ್ತದೆ. ‘ಮುಂದೇನು ಗತಿಯಪ್ಪಾ?’ ಎಂಬ ಚಿಂತೆ ಆವರಿಸುತ್ತದೆ. ಒಂದೊಮ್ಮೆ ಕುಟುಂಬದ ಆ ಮುಖ್ಯ ವ್ಯಕ್ತಿ ಜೀವ ವಿಮೆ ಮಾಡಿಸಿದ್ದರೆ ಆ ಹಣವು ಕುಟುಂಬದ ಸಂಕಷ್ಟಕ್ಕೆ ಒದಗುತ್ತದೆ.ಜೀವ ವಿಮೆ ಮಾಡಿಸಿದ್ದ ವ್ಯಕ್ತಿ ಅಸುನೀಗಿದರೆ ವಿಮಾ ಯೋಜನೆ ಇತ್ಯರ್ಥ ಈಗಂತೂ ಬಹಳ ಸರಳ. ನಾಮನಿರ್ದೇಶನ (ನಾಮಿನೇಷನ್) ಹಾಗೂ ವರ್ಗಪತ್ರ (ಅಸೈನ್‌ಮೆಂಟ್) ಸೌಲಭ್ಯವೂ ಇರುವುದರಿಂದ ಆ ವ್ಯಕ್ತಿಯ ವಾರಸುದಾರರು ವಿಮಾ ಸಂಸ್ಥೆಯಿಂದ ಬೇಗನೇ ಹಣವನ್ನು ಪಡೆದುಕೊಳ್ಳಬಹುದು. ಈಗ ಇಂತಹ ನಾಮನಿರ್ದೇಶನ, ವರ್ಗಪತ್ರ ಸೌಲಭ್ಯ ಭವಿಷ್ಯ ನಿಧಿ ಹಾಗೂ ಬ್ಯಾಂಕ್ ಖಾತೆಗಳಿಗೂ ಲಭ್ಯವಿದೆ. 
      ಜೀವ ವಿಮೆಗಾಗಿ ಪಾವತಿಸಿದ ಪ್ರೀಮಿಯಂ ಹಣವನ್ನು ವಿಮಾ ಕಂಪೆನಿಗಳು ಭಾರತೀಯ ವಿಮಾ ಕಾಯ್ದೆಯ 1938ರ ಸೆಕ್ಷನ್ 27(ಎ) ಪ್ರಕಾರ ಹೂಡಿಕೆ ಮಾಡಿ ಲಾಭ ಗಳಿಸುತ್ತವೆ. ಆ ಲಾಭದಿಂದಲೇ ವಿಮೆ ಮಾಡಿಸಿದ ವ್ಯಕ್ತಿ ಅಥವಾ ಆತನ ಕುಟುಂಬಕ್ಕೆ ಬೋನಸ್‌ ಅಥವಾ ಪರಿಹಾರ ಸೇರಿದಂತೆ ಒಟ್ಟು ವಿಮಾ ಮೊತ್ತವನ್ನು ಸಕಾಲದಲ್ಲಿ ಪಾವತಿಸುತ್ತವೆ.
      ಜೀವ ವಿಮೆಯನ್ನು ಕುಟುಂಬ ಅಥವಾ ವ್ಯಕ್ತಿಯ ಆದ್ಯತೆಗಳಿಗೆ ತಕ್ಕಂತೆ ಪಡೆಯಬೇಕು. ದೀರ್ಘಕಾಲದ ಉಳಿತಾಯವು ಸುದೀರ್ಘ ಅವಧಿಯ ಉದ್ದೇಶಗಳನ್ನೇ ಹೊಂದಿರುತ್ತದೆ. ಉದಾಹರಣೆಗೆ ಮಕ್ಕಳ ವಿದ್ಯಾಭ್ಯಾಸ ಹಾಗೂ ಮದುವೆಗೆ, ಸ್ವಂತ ಮನೆ ಹೊಂದುವ ಕನಸು ಈಡೇರಿಸಿಕೊಳ್ಳಲು, ವೃದ್ಧಾಪ್ಯದಲ್ಲಿನ ಮಾಸಿಕ ವೆಚ್ಚಕ್ಕೆ ಖಚಿತವಾಗಿ ಹಣ ಪಡೆಯುವ ಯೋಜನೆ, ಅನಾರೋಗ್ಯವಾದಾಗ ಅಗತ್ಯ ಚಿಕಿತ್ಸೆಗೆ... ಹೀಗೆ ವಿವಿಧ ಆದ್ಯತೆಗಳಿಗಾಗಿ ಜೀವ ವಿಮೆಯಲ್ಲಿ ನಿರಂತರ ಉಳಿತಾಯ ಸಹಕಾರಿ.ಮುಖ್ಯವಾದ ಇನ್ನೊಂದು ಸಂಗತಿ ಎಂದರೆ, ಜೀವ ವಿಮೆ ಮಾಡಿಸಿದ ವ್ಯಕ್ತಿ ಪಾಲಿಸಿಯನ್ನು ಆಧರಿಸಿ ಗೃಹ ಸಾಲವನ್ನೂ ಪಡೆಯಲು ಅವಕಾಶವಿರುತ್ತದೆ. 
       ಪ್ರತಿ ಕುಟುಂಬವೂ ಅದರ ಮಾಸಿಕ ಆದಾಯಕ್ಕೆ ತಕ್ಕಂತೆ ಜೀವವಿಮೆಯ ಪಾಲಿಸಿಗಳನ್ನು ಮಾಡಿಸಿಕೊಳ್ಳಬೇಕು. ಅಂದರೆ, ಇಲ್ಲಿ ದುಡಿಮೆಯನ್ನು ಆಧರಿಸಿಯೇ ವಿಮೆಯ ಅವಧಿ, ಪ್ರೀಮಿಯಂ ಮೊತ್ತವನ್ನು ನಿರ್ಧರಿಸುವುದು ಸೂಕ್ತ. 

No comments:

Post a Comment