ಬೆಂಗಳೂರು, ಮೇ 24 : ವಿಳಂಬ ದ್ರೋಹ ಎಸಗಿದ ಆರೋಪದ ಮೇರೆಗೆ ಬೆಂಗಳೂರು ಜಲ ಮಂಡಲಿಯ ಯೋಜನೆಗಳ ವಿಭಾಗದ ಮುಖ್ಯ ಅಭಿಯಂತರ ರುದ್ರಮೂರ್ತಿ ಅವರನ್ನು ಅಮಾನತ್ತು ಮಾಡಲು ಆದೇಶಿಸುವುದರೊಂದಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ನಗರ ಪ್ರದಕ್ಷಿಣೆ ಅಧಿಕಾರಿಗಳಿಗೆ ಚುರುಕು ಮುಟ್ಟಿಸಿತು.
ನಗರದ ಹೆಚ್ ಎಸ್ ಆರ್ ಬಡಾವಣೆಯಲ್ಲಿ 18 ಕೋಟಿ ರೂ ವೆಚ್ಚದ ಸರ್ವೀಸ್ ರಸ್ತೆ ಕಾಮಗಾರಿಗಳಿಗೆ ಚಾಲನೆ ನೀಡಿ ನಾಲ್ಕು ವರ್ಷಗಳೇ ಕಳೆದರೂ, ಕಾಮಗಾರಿಗಳು ಇನ್ನೂ ಪೂರ್ಣಗೊಳ್ಳದಿರುವ ಬಗ್ಗೆ ಬಂದ ದೂರಿನ ಹಿನ್ನೆಲೆಯಲ್ಲಿ ಪರಿಶೀಲನೆ ನಡೆಸಿದ ಮುಖ್ಯಮಂತ್ರಿಯವರು ಕರ್ತವ್ಯದಲ್ಲಿ ನಿರ್ಲಕ್ಷ್ಯ ಹಾಗೂ ಬೇಜವಾಬ್ದಾರಿತನ ತೋರಿದ ಅಧಿಕಾರಿಯನ್ನು ಅಮಾನತ್ತುಗೊಳಿಸಲು ಸ್ಥಳದಲ್ಲಿಯೇ ಆದೇಶಿಸಿದರು.
ಮಳೆಗಾಲ ಪ್ರಾರಂಭವಾಗುವ ಮುನ್ನವೇ ನಗರದ ನಾಗರೀಕರು ಮಳೆಯಿಂದ ಅನುಭವಿಸುವ ತೊಂದರೆಯನ್ನು ನಿವಾರಿಸುವ ಸಲುವಾಗಿ ಬೆಂಗಳೂರು ನಗರ ಪ್ರದಕ್ಷಿಣೆಗೆ ತಮ್ಮ ಗೃಹ ಕಚೇರಿ ಕೃಷ್ಣಾದಿಂದ ಮಂಗಳವಾರ ಬೆಳಿಗ್ಗೆ ಹೊರಟ ಸಿದ್ದರಾಮಯ್ಯ ಅವರು ಮೊದಲು ಕಿನೋ ಚಿತ್ರಮಂದಿರದ ಬಳಿಯ ಕೆಳ ಸೇತುವೆ ಪ್ರದೇಶಕ್ಕೆ ಭೇಟಿ ನೀಡಿ ಪರಿಶೀಲಿಸಿದರು. ಪ್ರತಿ ಬಾರಿ ಭಾರೀ ಮಳೆಗೆ ನೀರು ತುಂಬಿ ಬಸ್ ಕೂಡಾ ಮುಳುಗುವ ಈ ಪ್ರದೇಶದಲ್ಲಿ ಒಂದೂವರೆ ಕೋಟಿ ರೂ ವೆಚ್ಚದಲ್ಲಿ ಚರಂಡಿ ನಿರ್ಮಿಸಿ ನೀರು ನಿಲ್ಲದಂತೆ ಕ್ರಮ ಕೈಗೊಳ್ಳಲು ಅಧಿಕಾರಿಗಳಿಗೆ ಸೂಚಿಸಿದರು.
ಡಾಂಬರು ರಸ್ತೆ ಬದಲು ಕಾಂಕ್ರೀಟ್ ರಸ್ತೆ
ನಂತರ, ನಗರದ ವಿಠ್ಠಲ್ ಮಲ್ಯ ರಸ್ತೆಗೆ ತೆರಳಿ ವರುಣನ ಅಬ್ಬರಕ್ಕೆ ತತ್ತರಿಸುವ ಶ್ರೀ ಕಂಠೀರವ ಹೊರಾಂಗಣ ಕ್ರೀಡಾಂಗಣಕ್ಕೆ ಭೇಟಿ ಇತ್ತ ಮುಖ್ಯಮಂತ್ರಿ ಅಲ್ಲಿನ ಹೊಸ ಚರಂಡಿ ಕಾಮಗಾರಿಗಳನ್ನು ವೀಕ್ಷಿಸಿದರು. ಅಲ್ಲಿಂದ ರೆಸಿಡೆನ್ಸಿ ರಸ್ತೆಯ ಟೆಂಡರ್ ಶ್ಯೂರ್ ರಸ್ತೆ ಕಾಮಗಾರಿಗಳನ್ನು ಪರಿಶೀಲಿಸಿದ ಸಿದ್ದರಾಮಯ್ಯ ಅವರು ಇನ್ನು ಮುಂದೆ ಡಾಂಬರು ರಸ್ತೆಗಳಿಗೆ ಬದಲಾಗಿ ಕಾಂಕ್ರೀಟ್ ರಸ್ತೆಗಳನ್ನು ನಿರ್ಮಿಸಲು ಯೋಜನೆ ರೂಪಿಸಿ. ಸ್ವಲ್ಪ ಹಣ ಹೆಚ್ಚು ವೆಚ್ಚವಾದರೂ ರಸ್ತೆಗಳು ದೀರ್ಘಕಾಲ ಬಾಳಿಕೆಗೆ ಬರುತ್ತವೆ. ಹಂತ ಹಂತವಾಗಿ ಸಂಪನ್ಮೂಲಗಳನ್ನು ಕ್ರೋಢೀಕರಿಸಿಕೊಂಡು ಈ ನಿಟ್ಟಿನಲ್ಲಿ ಮುನ್ನಡೆಯುವುದು ಸೂಕ್ತ ಎಂದು ಸ್ಥಳದಲ್ಲಿಯೇ ಹಾಜರಿದ್ದ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ ಆಯುಕ್ತ ಎನ್. ಮಂಜುನಾಥ ಪ್ರಸಾದ್ ಅವರಿಗೆ ತಿಳಿಸಿದರು.
ಸಂತೆ ವ್ಯಾಪಾರಿಗಳಿಗೆ ಮಾರುಕಟ್ಟೆ !
ನಗರದ ಮಡಿವಾಳದ ಸಂತೆ ಪ್ರದೇಶದಲ್ಲಿ ಮಾರುಕಟ್ಟೆ ನಿರ್ಮಿಸಿ ಸಂತೆಯ ಸಂದರ್ಭದಲ್ಲಿ ವ್ಯಾಪಾರ ನಡೆಸುತ್ತಿದ್ದ 440 ವ್ಯಾಪಾರಿಗಳಿಗೆ ಮಳಿಗೆಗಳನ್ನು ನಿರ್ಮಿಸಿ ಪುನರ್ವಸತಿ ಕಲ್ಪಿಸುವ ಕಾಮಗಾರಿಗಳ ಪ್ರಗತಿಯನ್ನು ಮುಖ್ಯಮಂತ್ರಿ ಪರಿಶೀಲಿಸಿದರು. ಮಡಿವಾಳ ಸಂತೆ ಪ್ರದೇಶದ ರಸ್ತೆಯ ಒಂದು ಬದಿಯಲ್ಲಿ ಮಾರುಕಟ್ಟೆ ಮೈದೇಳಿದರೆ ಮತ್ತೊಂದು ಬದಿಯಲ್ಲಿ 15 ಕೋಟಿ ರೂ ವೆಚ್ಚದಲ್ಲಿ 840 ಮೀಟರ್ ಚತುಷ್ಪಥ ಕಾಂಕ್ರೀಟ್ ರಸ್ತೆ ಸಜ್ಜುಗೊಳ್ಳಲಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದರು.
ರಿಮ್ಯಾಂಡ್ ಹೋಮ್‍ಗೆ ಹಠಾತ್ ಭೇಟಿ
ಅದೇ ರಸ್ತೆಯಲ್ಲಿದ್ದ ವೀಕ್ಷಣಾಲಯಕ್ಕೆ ಹಠಾತ್ ಭೇಟಿ ನೀಡಿದ ಸಿದ್ದರಾಮಯ್ಯ ಅವರು ಕಳ್ಳತನ, ಕೊಲೆಯೂ ಒಳಗೊಂಡಂತೆ ಗಂಭೀರ ಆರೋಪಗಳನ್ನು ಎದುರಿಸುತ್ತಿರುವ ಬಾಲಾಪರಾಧಿಗಳ ಸ್ಥಿತಿಗತಿಯನ್ನು ಪರಿಶೀಲಿಸಿದರು. ವೀಕ್ಷಣಾಲಯದಲ್ಲಿದ್ದ ಎಲ್ಲಾ 43 ಬಾಲಾಪರಾಧಿಗಳತ್ತಲೂ ಗಮನಹರಿಸಿದ ಮುಖ್ಯಮಂತ್ರಿಯವರು, ವಾರ್ಡ್‍ನ್ ನಿಮಗೆ ಹೋಡೀತಾರಾ ? ನಿಮಗೆ ಕೊಡುವ ಊಟ ಚೆನ್ನಾಗಿರುತ್ತಾ ? ಎಂದು ಮಾತಿಗೆ ಇಳಿದರಲ್ಲದೆ ಗೊತ್ತಿದ್ದೋ ಗೊತ್ತಿಲ್ಲದೆಯೋ ತಪ್ಪು ಮಾಡಿದ್ದೀರಿ. ಇನ್ನು ಮುಂದೆಯಾದರೂ ತಪ್ಪು ಮಾಡಲ್ಲ ಎಂದು ಶಪಥ ಮಾಡಿ, ಒಳ್ಳೆಯವರಾಗಿ ಬದುಕಿ ಎಂದು ಕಿವಿಮಾತು ಹೇಳಿದರು.
ಅಲ್ಲಿಂದ ಕೇಂದ್ರ ರೇಷ್ಮೆ ಮಂಡಳಿ ತೆರಳುವಾಗ ಸಂಚಾರ ದಟ್ಟಣೆಯನ್ನು ಕಡಿತಗೊಳಿಸಲು ಸಂಕೇತ-ಮುಕ್ತ ಮೇಲು ಸೇತುವೆ ನಿರ್ಮಾಣ ಕುರಿತಂತೆ ಅಧಿಕಾರಿಗಳೊಂದಿಗೆ ಚರ್ಚಿಸಿದ ಸಿದ್ದರಾಮಯ್ಯ ಅವರು 300 ಕೋಟಿ ರೂ ವೆಚ್ಚದಲ್ಲಿ ತಲೆ ಎತ್ತಲಿರುವ ಈ ಮೇಲು ಸೇತುವೆಗೆ 200 ಕೋಟಿ ರೂ ಒದಗಿಸುವಂತೆ ಬೆಂಗಳೂರು ಮೆಟ್ರೋ ರೈಲು ನಿಗಮದ ವ್ಯವಸ್ಥಾಪಕ ನಿರ್ದೇಶಕ ಪ್ರದೀಪ್ ಸಿಂಗ್ ಖರೋಲಾ ಅವರಿಗೆ ಹಾಗೂ 100 ಕೋಟಿ ರೂ ಒದಗಿಸುವಂತೆ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ ಆಯುಕ್ತ ಟಿ ಶ್ಯಾಮ್ ಭಟ್ ಅವರಿಗೆ ತಾಕೀತು ಮಾಡಿದರು.
ಉದ್ಯಾನ ನಿರ್ಮಾಣ
ಹೆಚ್ ಎಸ್ ಆರ್ ಬಡಾವಣೆಯಲ್ಲಿ ಗುಡಿಸಲು ನಿವಾಸಿಗಳಿಂದ ಒತ್ತುವರಿಯಾಗಿದ್ದ ಎಂಟು ಎಕರೆ ಸರ್ಕಾರಿ ಭೂಮಿಯಲ್ಲಿ ಸ್ಥಳೀಯ ನಿವಾಸಿ ಹಾಗೂ ಶಾಸಕ ವಿ. ಎಸ್. ಉಗ್ರಪ್ಪ ಅವರ ನೇತೃತ್ವದಲ್ಲಿ ಅಲ್ಲಿನ ನಿವಾಸಿಗಳು ನಿರ್ಮಿಸಿರುವ ಉದ್ಯಾನದ ಅಭಿವೃದ್ಧಿಗೆ ಸರ್ಕಾರದ ವತಿಯಿಂದಲೂ ನೆರವು ಒದಗಿಸುವ ಭರವಸೆ ನೀಡಿದರು. ಉದ್ಯಾನದ ಜಮೀನನ್ನು ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರಕ್ಕೆ ಹಸ್ತಾಂತರಿಸುವಂತೆ ಬೆಂಗಳೂರು ನಗರ ಜಿಲ್ಲಾಧಿಕಾರಿಗೆ ಮುಖ್ಯಮಂತ್ರಿ ಸೂಚಿಸಿದರು.
ಕೆರೆ ಒತ್ತುವರಿ ತೆರವುಗೊಳಿಸಲು ಸೂಚನೆ
ನಂತರ, ಇಬ್ಬಲೂರು ಕೆರೆಗೆ ಭೇಟಿ ನೀಡಿದ ಮುಖ್ಯಮಂತ್ರಿಯವರು 18.6 ಎಕರೆ ಪ್ರದೇಶದ ಈ ಕೆರೆಯಲ್ಲಿ ಒಂಭತ್ತು ಎಕರೆ ಪ್ರದೇಶವು ಒತ್ತುವರಿಯಾಗಿರುವ ಬಗ್ಗೆ ಕಳವಳ ವ್ಯಕ್ತಪಡಿಸಿ, ಒತ್ತುವರಿ ತೆರವುಗೊಳಿಸುವಂತೆ ಬೆಂಗಳೂರು ನಗರ ಜಿಲ್ಲಾಧಿಕಾರಿ ವಿ ಶಂಕರ್ ಅವರಿಗೆ ನಿರ್ದೇಶನ ನೀಡಿದರು.
ಬೆಂಗಳೂರಿನಲ್ಲಿ 837 ಕೆರೆಗಳಿವೆ. ಅದರಲ್ಲಿ ಒತ್ತುವರಿಯಾಗಿರುವ ಕೆರೆ ಪ್ರದೇಶದ ವಿಸ್ತೀರ್ಣ 4232 ಎಕರೆ. ಈ ಬಗ್ಗೆ ವಿವರಣೆ ಪಡೆಯಲಾಗುತ್ತಿದೆ ಎಂದರು.
ರೈಲ್ವೇ ಮೇಲು ಸೇತುವೆ
ತದನಂತರ, ಕಗ್ಗದಾಸಪುರದಲ್ಲಿ 27 ಕೋಟಿ ರೂ ವೆಚ್ಚದಲ್ಲಿ ಪ್ರಾರಂಭವಾಗಲಿರುವ ರೈಲ್ವೇ ಮೇಲು ಸೇತುವೆ ಪ್ರದೇಶಕ್ಕೆ ಭೇಟಿ ಇತ್ತ ಸಿದ್ದರಾಮಯ್ಯ ಅವರು 650 ಕೋಟಿ ರೂ ವೆಚ್ಚದ ಮೇಲು ಸೇತುವೆ ನಿರ್ಮಾಣಕ್ಕೆ ಸಾರ್ವಜನಿಕರಿಂದ ಬೇಡಿಕೆ ಬಂದಿರುವ ಕೃಷ್ಣರಾಜಪುರ ಪ್ರದೇಶದ ಪರಿಶೀಲನೆ ನಡೆಸಿದರು. ಈ ಪ್ರಸ್ತಾವನೆ ಕುರಿತಂತೆ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ ಹಾಗೂ ರಾಜ್ಯ ಸರ್ಕಾರದ ಪಾಲುದಾರಿಕೆ ಅಗತ್ಯವಿದೆ ಎಂದು ಅಭಿಪ್ರಾಯಪಟ್ಟರು.
ಮೆಟ್ರೋ ರೈಲಿನಲ್ಲಿ ಪ್ರಯಾಣ
ನಾಲ್ಕು ತಾಸುಗಳ ತಮ್ಮ ನಗರ ಪ್ರದಕ್ಷಿಣೆಯ ಕೊನೆಯ ಭಾಗವಾಗಿ ಬೈಯ್ಯಪ್ಪನಹಳ್ಳಿಯಿಂದ ವಿಧಾನಸೌಧದವರೆಗೆ ನಮ್ಮ ಮೆಟ್ರೋ ರೈಲಿನಲ್ಲಿ ಪ್ರಯಾಣಿಸಿದ ಸಿದ್ದರಾಮಯ್ಯ ಅವರು ತಮ್ಮ ಗೃಹ ಕಚೇರಿ ಕೃಷ್ಣಾದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದರು. ರಾಜಕಾಲುವೆಗಳ ಸರ್ವೇಕ್ಷಣೆ
ಬೆಂಗಳೂರಿನಲ್ಲಿ ಎಲ್ಲಾ ರಾಜಕಾಲುವೆಗಳ ಸರ್ವೇಕ್ಷಣೆ ನಡೆಸಲು ಸೂಚಿಸಿರುವುದಾಗಿ ತಿಳಿಸಿದ ಸಿದ್ದರಾಮಯ್ಯ ಅವರು ರಾಜಕಾಲುವೆಗಳ ಒತ್ತುವರಿ ತೆರವುಗೊಳಿಸಲಾಗುವುದು ಎಂದರು.
ಅಂತೆಯೇ, ತಿಂಗಳಿಗೆ ಒಮ್ಮೆ ಬೆಂಗಳೂರು ನಗರ ಪ್ರದಕ್ಷಿಣೆ ಮಾಡಲು ಯೋಜಿಸಿರುವುದಾಗಿ ಮುಖ್ಯಮಂತ್ರಿ ಹೇಳಿದರು.
ಪ್ರಸಕ್ತ ಸಾಲಿನ ರಾಜ್ಯ ಆಯವ್ಯಯದಲ್ಲಿ ಬಸವೇಶ್ವರ ವೃತ್ತದಿಂದ ಹೆಬ್ಬಾಳದವರೆಗೆ 1500 ಕೋಟಿ ರೂ ವೆಚ್ಚದಲ್ಲಿ ನಿರ್ಮಿಸಲು ಉದ್ದೇಶಿಸಿರುವ ಮೇಲು ರಸ್ತೆ ತಮ್ಮ ನಗರ ಪ್ರದಕ್ಷಿಣೆಯ ಫಲಶೃತಿಯೇ ಎಂದು ಸಿದ್ದರಾಮಯ್ಯ ಸಮರ್ಥಿಸಿಕೊಂಡರು.
ಬೆಂಗಳೂರು ನಗರ ಜಿಲ್ಲಾ ಉಸ್ತುವಾರಿ ಸಚಿವರೂ ಆದ ಬೆಂಗಳೂರು ಅಭಿವೃದ್ಧಿ ಹಾಗೂ ನಗರ ಯೋಜನಾ ಸಚಿವ ಕೆ ಜೆ ಜಾರ್ಜ್, ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ, ಆಹಾರ, ನಾಗರೀಕ ಸರಬರಾಜು ಹಾಗೂ ಗ್ರಾಹಕ ವ್ಯವಹಾರಗಳ ಸಚಿವ ದಿನೇಶ್ ಗುಂಡೂರಾವ್, ಶಾಸಕರಾದ ಎಂ. ಕೃಷ್ಣಪ್ಪ, ಬಿ. ಎ. ಬಸವರಾಜ್, ಎಸ್. ಟಿ. ಸೋಮಶೇಖರ್, ಮುನಿರತ್ನ, ವಿನಿಷಾ ನೀರೋ, ಬೆಂಗಳೂರು ಮಹಾಪೌರ ಬಿ. ಎನ್. ಮಂಜುನಾಥ ರೆಡ್ಡಿ, ನಗರಾಭಿವೃದ್ಧಿ ಇಲಾಖೆಯ ಅಪರ ಮುಖ್ಯ ಕಾರ್ಯದರ್ಶಿ ಮಹೇಂದ್ರ ಜೈನ್ ಅವರೂ ಸೇರಿದಂತೆ ಹಲವು ಗಣ್ಯರು ನಗರ ಪ್ರದಕ್ಷಿಣೆಯ ಸಂದರ್ಭದಲ್ಲಿ ಮುಖ್ಯಮಂತ್ರಿಯವರ ಜೊತೆಗಿದ್ದರು.