Thursday, May 12, 2016

ಜನ-ಮನ : ಸರ್ಕಾರದಿಂದ ಜನಾಭಿಪ್ರಾಯ ಸಮಾವೇಶ !


ಬೆಂಗಳೂರು, ಮೇ 12 : ಪ್ರಸಕ್ತ ಸರ್ಕಾರವು ಅಭಿವೃದ್ಧಿ ಕಾರ್ಯಗಳ ಯಶಸ್ಸಿನ ಹಾದಿಯಲ್ಲಿ 3 ವರ್ಷಗಳನ್ನು ಪೂರ್ಣಗೊಳಿಸುತ್ತಿರುವ ಹಿನ್ನೆಲೆಯಲ್ಲಿ ರಾಜ್ಯ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯು ಮೇ 13 ರ ಶುಕ್ರವಾರ ಸಂಜೆ 4-00 ಗಂಟೆಗೆ ಬೆಂಗಳೂರಿನ ಬಳ್ಳಾರಿ ರಸ್ತೆಯಲ್ಲಿರುವ ಗಾಂಧೀ ಕೃಷಿ ವಿಜ್ಞಾನ ಕೇಂದ್ರ (ಜಿ.ಕೆ.ವಿ.ಕೆ.) ದಲ್ಲಿರುವ ಡಾ. ಬಾಬು ರಾಜೇಂದ್ರ ಪ್ರಸಾದ್ ಅಂತರ ರಾಷ್ಟ್ರೀಯ ಸಮಾವೇಶ ಭವನದಲ್ಲಿ "ಜನ-ಮನ" ಸರ್ಕಾರದಿಂದ ಜನಾಭಿಪ್ರಾಯ ಸಮಾವೇಶವನ್ನು ಹಮ್ಮಿಕೊಂಡಿದೆ.
ಪ್ರಸಕ್ತ ಸರ್ಕಾರವು ಅಧಿಕಾರಕ್ಕೆ ಬಂದ ಪ್ರಥಮ ದಿನವೇ ಘೋಷಣೆ ಮಾಡಿದ ಜನಪರ ಕಾರ್ಯಕ್ರಮಗಳನ್ನು ಪ್ರಥಮ ವರ್ಷವೇ ಅನುಷ್ಠಾನಗೊಳಿಸಿದ ಹೆಗ್ಗಳಿಕೆ ಹೊಂದಿದೆ. ಮೂರು ವರ್ಷಗಳ ಯಶಸ್ವಿ ಆಡಳಿತ ಪೂರೈಸಿ ನಾಲ್ಕನೇ ವರ್ಷದ ಹೊಸ್ತಿಲಿನಲ್ಲಿ ನಿಂತಿರುವ ಈ ಸುಸಂದರ್ಭದಲ್ಲಿ ಸರ್ಕಾರದ ಕಳೆದ ಮೂರು ವರ್ಷಗಳ ಕಾರ್ಯಕ್ರಮಗಳನ್ನು ಜನತೆಯ ಸಮ್ಮುಖದಲ್ಲಿ ಅವಲೋಕಿಸುವುದು, ಜನಾಭಿಪ್ರಾಯ ಪಡೆಯುವುದು ಈ ಜನಮನ-ಜನಾಭಿಪ್ರಾಯ ಸಮಾವೇಶದ ಆಶಯ. ಅನ್ನಭಾಗ್ಯ, ಕ್ಷೀರಭಾಗ್ಯ, ಋಣಮುಕ್ತಿ, ವಸತಿ ಭಾಗ್ಯ, ಆರೋಗ್ಯ ಭಾಗ್ಯಗಳಂತಹ ಪ್ರಮುಖ ಯೋಜನೆಗಳಲ್ಲದೆ ಗ್ರಾಮೀಣಾಭಿವೃದ್ಧಿ, ನಗರಾಭಿವೃದ್ಧಿ, ಕೈಗಾರಿಕೆ, ಸಮಾಜ ಕಲ್ಯಾಣ, ಆರೋಗ್ಯ ಕ್ಷೇತ್ರಗಳಲ್ಲಿ ಹಲವಾರು ಜನೋಪಯೋಗಿ ಕಾರ್ಯಕ್ರಮಗಳನ್ನು ಸರ್ಕಾರ ಬದ್ಧತೆಯಿಂದ ಜಾರಿಗೊಳಿಸಿದೆ.
ಅನ್ನಭಾಗ್ಯ, ಕ್ಷೀರಭಾಗ್ಯ ಕೇವಲ ಸಾಧಾರಣ ಸರ್ಕಾರಿ ಯೋಜನೆಗಳಲ್ಲ. ಅನ್ನಭಾಗ್ಯ-ಬರಗಾಲದ ಸಂಕಷ್ಟ ಪರಿಸ್ಥಿತಿಯಲ್ಲಿಯೂ ಬಡಜನರನ್ನು ಹಸಿವಿನಿಂದ ಮುಕ್ತಗೊಳಿಸಿ ರಕ್ಷಿಸಿದ ಯೋಜನೆ. ಅಂತೆಯೇ, ಕ್ಷೀರಭಾಗ್ಯ ಕೂಡ ನಮ್ಮ ಶಾಲಾ ಮಕ್ಕಳನ್ನು ಅಪೌಷ್ಠಿಕತೆಯಿಂದ ಕಾಪಾಡಿ ಪೌಷ್ಠ್ಟಿಕರವಾಗಿರಿಸಿದೆ. ಈ ಎರಡೂ ಯೋಜನೆಗಳು ರಾಜ್ಯದ ಬಡಜನತೆಯನ್ನು ಬರಗಾಲದ ತೀವ್ರತೆಯಿಂದ ಪಾರು ಮಾಡಿದ್ದು, ಸರ್ಕಾರದ ದೂರಗಾಮಿ ಹಾಗೂ ಶಾಶ್ವತ ಪರಿಹಾರದ ಯೋಜನೆಗಳಾಗಿ ಸಾಕ್ಷೀಕೃತಗೊಂಡಿವೆ.
ಜನಮನ – ಜನಾಭಿಪ್ರಾಯ ಸಮಾವೇಶ ಸರ್ಕಾರದ ಸಾಧನೆ ಮತ್ತು ಅದರ ಯೋಜನೆಗಳ ಅನುಷ್ಠಾನದಲ್ಲಿ ಆಗಿರುವ ಪ್ರಗತಿ ಹಾಗೂ ನ್ಯೂನತೆಗಳನ್ನು ಓರೆಗಲ್ಲಿಗೆ ಹಚ್ಚುವ ಪ್ರಯತ್ನ. ಇಲ್ಲಿ ವ್ಯಕ್ತವಾಗುವ ಅಭಿಪ್ರಾಯಗಳು ಆಡಳಿತ ಯಂತ್ರಕ್ಕೆ ಮಾರ್ಗದರ್ಶಿ ಸೂತ್ರಗಳಾಗಲಿವೆ.
ಈ ಸಮಾವೇಶಕ್ಕೆ ವಿಶೇಷ ಆಹ್ವಾನಿತರಾಗಿ ರಾಜ್ಯದ ಎಲ್ಲ ಜಿಲ್ಲೆಗಳಿಂದ ವಿವಿಧ ಯೋಜನೆಗಳ ಫಲಾನುಭವಿಗಳು ಆಗಮಿಸಿ. ಮಾನ್ಯ ಮುಖ್ಯಮಂತ್ರಿಗಳೊಂದಿಗೆ ತಮ್ಮ ಅಭಿಪ್ರಾಯವನ್ನು ಹಂಚಿಕೊಳ್ಳಲಿದ್ದಾರೆ. ಸಮಾಜದ ವಿವಿಧ ಸ್ಥರಗಳ ಜನಸಾಮಾನ್ಯರು, ಗಣ್ಯರ ಅಭಿಪ್ರಾಯಗಳನ್ನು ಮಾನ್ಯ ಮುಖ್ಯಮಂತ್ರಿಗಳ ಸಮ್ಮುಖದಲ್ಲಿ ಹಂಚಿಕೊಳ್ಳಲಾಗುವುದು. ಮಾನ್ಯ ಮೂಲಭೂತ ಸೌಲಭ್ಯ ಹಾಗೂ ವಾರ್ತಾ ಮತ್ತು ಹಜ್ ಸಚಿವ ಆರ್. ರೋಷನ್ ಬೇಗ್ ಅವರು ಸಮಾರಂಭದಲ್ಲಿ ಪ್ರಾಸ್ತಾವಿಕ ಭಾಷಣ ಮಾಡಲಿದ್ದಾರೆ. ಜನ-ಮನ ಜನಾಭಿಪ್ರಾಯ ಸಮಾವೇಶದಲ್ಲಿ ರಾಜ್ಯ ಸಚಿವ ಸಂಪುಟ ಸದಸ್ಯರುಗಳು ಭಾಗವಹಿಸಲಿದ್ದಾರೆ.
ಜನಾಭಿಪ್ರಾಯ ಮಂಡನೆಯ ಈ ಕಾರ್ಯಕ್ರಮದಲ್ಲಿ ಅನ್ನಭಾಗ್ಯ, ಕ್ಷೀರಭಾಗ್ಯ, ಕ್ಷೀರಧಾರೆ, ವಿದ್ಯಾಸಿರಿ, ನಮ್ಮ ಮೆಟ್ರೋ, ಕೃಷಿಭಾಗ್ಯ, ರಾಜೀವ್ ಆರೋಗ್ಯ ಭಾಗ್ಯ, ಶುದ್ಧನೀರು, ಋಣಮುಕ್ತ, ಮನಸ್ವಿನಿ, ಮೈತ್ರಿ, ನಿರ್ಮಲ ಭಾಗ್ಯ ಯೋಜನೆಯ ಫಲಾನುಭವಿಗಳು ಪಾಲ್ಗೊಳ್ಳುವರು.

No comments:

Post a Comment