Wednesday, September 30, 2015

' ಗ್ರೇಟ್ ಮಲೆನಾಡು ಚಾಲೆಂಜ್ 2015' ಸೈಕಲ್‍ ಯಾತ್ರೆಗೆ ಚಾಲನೆ

              -ಪಶ್ಚಿಮ ಘಟ್ಟಗಳ ಉದ್ದಕ್ಕೂ 700ಕಿ.ಮೀ ಸೈಕಲ್‍ ಯಾತ್ರೆಯಲ್ಲಿ ಭಾಗವಹಿಸಲು ಕರೆ

 ಬೆಂಗಳೂರು, ಸೆಪ್ಟೆಂಬರ್,30: ಪರಿಸರ ಮತ್ತು ಮಾನವನ ಆರೋಗ್ಯಕ್ಕೆ ಪೂರಕವಾದ ಸೈಕಲ್ ಬಳಕೆಯನ್ನು ಪ್ರೋತ್ಸಾಹ ನೀಡುತ್ತಿರುವ ಐಸೈಕಲ್, ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಸಹಯೋಗದಲ್ಲಿ 'ಗ್ರೇಟ್ ಮಲೆನಾಡು ಚಾಲೆಂಜ್-2015' ವಾರ್ಷಿಕ ಸಾಹಸಮಯ ಸೈಕಲ್ ಯಾತ್ರೆಗೆ ಬುಧವಾರ ಚಾಲನೆ ನೀಡಲಾಯಿತು.
 ಭಾರತದ ದೊಡ್ಡ ಸಾಹಸಮಯ ಸೈಕಲ್‍ ಯಾತ್ರೆಯಲ್ಲಿ ಭಾಗವಹಿಸಲು ದೇಶಾದ್ಯಂತ ಸೈಕ್ಲಿಂಗ್ ಉತ್ಸಾಹಿಗಳನ್ನು ಆಹ್ವಾನಿಸಲಾಗಿದೆ. ಈ ಕಾರ್ಯಕ್ರಮದ 6 ನೇ ಆವೃತ್ತಿಯಲ್ಲಿ ಪಾಲ್ಗೊಳ್ಳುವ ಸೈಕಲ್‍ ಸವಾರರು ಕರ್ನಾಟಕದ ಪಶ್ಚಿಮ ಘಟ್ಟಗಳ ಒರಟು ರಸ್ತೆಯ 700 ಕಿಲೋಮೀಟರ್ ದೂರವನ್ನು ಕ್ರಮಿಸಲಿದ್ದಾರೆ.
ಈ ರೇಸ್ ಮಡಿಕೇರಿ ಪಟ್ಟಣದಿಂದ ಪ್ರಾರಂಭವಾಗುತ್ತದೆ ಮತ್ತು ಉಡುಪಿ ಬಳಿ ಇರುವ ಮರವಂತೆಯಲ್ಲಿ ಕೊನೆಗೊಳ್ಳುತ್ತದೆ. ಅಕ್ಟೋಬರ್ 31ರಿಂದ ಆರಂಭವಾಗಲಿರುವ ಈ ರೇಸ್, ನವೆಂಬರ್ 7, 2015ರಂದು  ಪೂರ್ಣಗೊಳ್ಳಲಿದೆ.
ಕರ್ನಾಟಕದ ಪ್ರಾಕೃತಿಕ ಮತ್ತು ಆಕರ್ಷಕ ಪಶ್ಚಿಮ ಘಟ್ಟಗಳಲ್ಲಿ ಸೈಕ್ಲಿಂಗ್ ಮಹತ್ವವನ್ನು ಮತ್ತು ಪರಿಸರ ಪ್ರವಾಸೋದ್ಯಮದ ಅಗತ್ಯವನ್ನು ಪ್ರಚಾರ ಪಡಿಸುವುದು ಐಸೈಕಲ್ ಚಾಲೆಂಜ್‍ನ ಗುರಿಯಾಗಿದೆ.
ಎಸ್‍ಬಿಐ ಮುಖ್ಯ ಜನರಲ್ ಮ್ಯಾನೇಜರ್ ರಜನಿ ಮಿಶ್ರಾ, ಬೆಂಗಳೂರಿನ ಎಸ್‍ಬಿಐ ಕ್ಯಾಂಪಸ್‍ನಲ್ಲಿ ಈ ಉಪಕ್ರಮಕ್ಕೆ ಚಾಲನೆ ನೀಡಿದರು. ಇದೇ ಸಂದರ್ಭದಲ್ಲಿ ಅವರು ಜಿಎಂಸಿ ಸಂಸ್ಥಾಪಕ ಹಾಗೂ ಈ ಉಪಕ್ರಮಕ್ಕೆ ನಿರಂತರ ಪ್ರೋತ್ಸಾಹ ನೀಡುತ್ತ ಬಂದಿರುವ ಅಮೀತಾ ಬೈಂದೂರ್ ಹಾಗೂ 3 ಬಾರಿ ಜಿಎಂಸಿ ಚಾಂಪಿಯನ್ ಆಗಿ ಹೊರಹೊಮ್ಮಿದ ನವೀನ್ ಶಿವಣ್ಣ ಅವರಿಗೆ ಜರ್ಸಿಗಳನ್ನು ನೀಡಿದರು.
ನಂತರ ಈ ರೇಸ್ ಬಗ್ಗೆ ಮಾತನಾಡಿದ ರಜನಿ ಮಿಶ್ರಾ, `ಇದು ಐಸೈಕಲ್ ವತಿಯಿಂದ ಆಯೋಜಿಸುತ್ತಿರುವ ಒಂದು ಅತ್ಯುತ್ತಮ ಹಾಗೂ ಸಾಮಾಜಿಕ ಕ್ರೀಡಾ ಕಾರ್ಯಕ್ರಮವಾಗಿದೆ.   ರಾಜ್ಯದಲ್ಲಿ ಪರಿಸರ ಪ್ರವಾಸವನ್ನು ಉತ್ತೇಜಿಸುವ ಮತ್ತು ಸಾರಿಗೆಯ ಒಂದು ಅಂಗವಾಗಿ ಸೈಕಲ್ ಬಳಕೆಯನ್ನು ಪ್ರೋತ್ಸಾಹಿಸುವ ಒಂದು ಪ್ರಯತ್ನವಾಗಿದೆ. ಇಂತಹ ಒಂದು ಉದಾತ್ತ ಕಾರ್ಯಕ್ರಮದೊಂದಿಗೆ ಎಸ್‍ಬಿಐ ಗುರುತಿಸಿಕೊಳ್ಳುತ್ತಿರುವುದು ಹೆಮ್ಮೆ ತಂದಿದೆ. ಎಸ್‍ಬಿಐ ಈ ಕಾರ್ಯಕ್ರಮಕ್ಕೆ ಎರಡನೇ ಬಾರಿಗೆ ಬೆಂಬಲ ನೀಡುತ್ತಿದೆ' ಎಂದರು.
ಉಪಕ್ರಮಕ್ಕೆ ಚಾಲನೆ ನೀಡುವ ಈ ಸಂದರ್ಭದಲ್ಲಿ ಐಸೈಕಲ್ ಅಧ್ಯಕ್ಷ ಮಂಜೇಶ್ ಚಂದ್ರಶೇಖರನ್ ಹಾಜರಿದ್ದರು. `ಜನರಿಗೆ ಸೈಕ್ಲಿಂಗ್ ತೆಗೆದುಕೊಳ್ಳುವಂತೆ ಪ್ರೋತ್ಸಾಹಿಸುವ  ಜೊತೆಗೆ ಪರಿಸರ ಪ್ರವಾಸೋದ್ಯಮಕ್ಕೆ ಉತ್ತೇಜನ ನೀಡುವುದು ಈ ಸೈಕಲ್‍ ಯಾತ್ರೆಯ ಪ್ರಮುಖ ಉದ್ದೇಶವಾಗಿದೆ. ವರ್ಷದಿಂದ ವರ್ಷಕ್ಕೆ ಈ ಕಾರ್ಯಕ್ರಮದಲ್ಲಿ ಭಾಗವಹಿಸುವ ಸೈಕ್ಲಿಂಗ್ ಉತ್ಸಾಹಿಗಳ ಸಂಖ್ಯೆ ಹೆಚ್ಚುತ್ತಿರುವುದು ನಮಗೆ ಸಂತಸ ತಂದಿದೆ. ಜನರಲ್ಲಿ ಈ ಸೈಕ್ಲಿಂಗ್ ಪ್ರೀತಿಯನ್ನು ಇನ್ನೂ ಹೆಚ್ಚು ಹೆಚ್ಚು ಬೆಳೆಸುವುದು ನಮ್ಮ ಆಶಯವಾಗಿದೆ' ಎಂದರು.
ಸುಮಾರು 100 ಜನ ಸೈಕಲ್ ಉತ್ಸಾಹಿಗಳು ಈ ಸಾಹಸೋಪೇತ ಸೈಕ್ಲಿಂಗ್ ಚಾಲೆಂಜ್ ರೇಸ್‍ನಲ್ಲಿ ಭಾಗವಹಿಸುವ ನಿರೀಕ್ಷೆ ಇದೆ. ಅಲ್ಲದೇ, ಈ ರೇಸ್ ಆಸಕ್ತಿ ಇರುವ ಎಲ್ಲರಿಗೂ ಮುಕ್ತವಾಗಿರುತ್ತದೆ. ಭಾಗವಹಿಸುವವರು ಐಸೈಕಲ್  ಮೂಲಕ ಎಂಟಿಬಿ ಸೈಕಲ್‍ಗಳನ್ನು ಬಾಡಿಗೆ ಪಡೆದುಕೊಳ್ಳಲೂ ಅವಕಾಶವಿದೆ.

Sunday, September 27, 2015

ಗುಲಾಮಗಿರಿಗೆ ನೂಕಲಿರುವ ಡಿಜಿಟಲ್ ಇಂಡಿಯಾದ ದಡ್ಡತನ !

      ಮಕ್ಕಳೊಡನೆ ಒಂದು ಪಾರ್ಕ್ ಗೆ ಹೋಗುತ್ತೀರಿ. ಅದಕ್ಕೆ ಪ್ರವೇಶ ಶುಲ್ಕ ನೂರು ರೂಪಾಯಿ ಇರುತ್ತದೆ. ಒಳಗೆ ಹೋಗಿ ಜೋಕಾಲಿ ಆಡಲು ಬಯಸಿದರೆ ವಾಚ್ ಮನ್ ಬಂದು ಉಯ್ಯಾಲೆಗೆ ಬೇರೆಯಾಗಿಯೇ ಇಪ್ಪತ್ತು  ರೂಪಾಯಿ ಕೊಡಬೇಕೆಂದು ಕೇಳುತ್ತಾನೆ. ಸರಿ ಹಣ ಕೊಟ್ಟು ಉಯ್ಯಾಲೆ ಆಡತೊಡಗುತ್ತೀರಿ. ಉಯ್ಯಾಲೆ ನಿಧಾನವಾಗಿ ಜೀಕತೊಡಗುತ್ತದೆ. ಜೋರಾಗಿ ಜೀಕಲು ಯತ್ನಿಸಿದರೂ ಸಾಧ್ಯವಾಗುವುದಿಲ್ಲ. ಜೋರಾಗಿ ಜೀಕಲು ಮತ್ತೆ ಬೇರೆಯಾಗಿ ಹತ್ತು ರೂಪಾಯಿ ತೆರಬೇಕೆಂದು ಪಾರ್ಕ್ ನ ವಾಚ್ ಮನ್ ಹೇಳುತ್ತಾನೆ. ಇದೊಂದು ವಿಚಿತ್ರ ಸುಳಿಗೆ ಸಿಕ್ಕಿಕೊಂಡೆವು ಎನಿಸುವುದಿಲ್ಲವೇ? ಪಾರ್ಕ್ ಒಳಗೆ ಹೋದರೆ ಎಲ್ಲ ಆಟಗಳನ್ನೂ ಆಡಬಹುದು ಎಂದುಕೊಂಡವರಿಗೆ ಇದ್ದಕ್ಕಿದ್ದಂತೆ ಪ್ರತಿ ಹೆಜ್ಜೆಗೂ ಮತ್ತೆ ಮತ್ತೆ ಹಣ ತೆರಬೇಕಾಗಿ ಬಂದಾಗ ಈ ರೀತಿಯ ವ್ಯವಸ್ಥೆ ಶೋಷಣೆಗೊಳಗಾಗುವಂತೆ ಮಾಡುತ್ತದೆ. 
    ಇದನ್ನೇ ಇಂಟರ್ ನೆಟ್ ವಿಷಯದಲ್ಲಿ ನೋಡೋಣ. ನಿಮಗೆ ಅತ್ಯಂತ ವಿಶ್ವಾಸಾರ್ಹ ಸುದ್ದಿಯನ್ನು ಕೊಡುವ ಪತ್ರಿಕೆಯನ್ನೋದಲು ಇಷ್ಟ. ಇಂಟರ್ ನೆಟ್ ನಲ್ಲಿ ಈಗ ಲಾಗಿನ್ ಆಗಿ ನಿಮ್ಮಿಷ್ಟದ ಪತ್ರಿಕೆಯನ್ನು ಓದುತ್ತಿದ್ದೀರಿ. ಇನ್ನೊಂದು ಆರ್ಥಿಕವಾಗಿ ಬಲಾಢ್ಯವಾದ ಅಂತರರಾಷ್ಟ್ರೀಯ ಪತ್ರಿಕೆಯೊಂದು ನಿಮ್ಮ ಇಂಟರ್ ನೆಟ್ ಸೇವಾದಾರರಿಗೆ ಹಣ ನೀಡಿ ತಮ್ಮ ಪತ್ರಿಕೆಯನ್ನು ಮಾತ್ರ ತೋರಿಸಬೇಕೆಂದು ಬೇರೆ ಪತ್ರಿಕೆಗಳನ್ನು ತೋರಿಸಬಾರದೆಂದೂ ಅಥವಾ ನಿಧಾನವಾಗಿ ಲೋಡ್ ಆಗುವಂತೆ ಮಾಡಬೇಕೆಂದೂ ಒಪ್ಪಂದ ಮಾಡಿಕೊಳ್ಳುತ್ತವೆ. ಆಗ ನಿಮ್ಮಿಷ್ಟದ ಪತ್ರಿಕೆಯನ್ನು ಓದಲು ನಿಮಗೆ ತೊಂದರೆಯಾಗುತ್ತದೆ. ವೇಗವಾಗಿ ಲೋಡ್ ಆಗುವ ಪತ್ತಿಕೆಯನ್ನೇ ಓದತೊಡಗುತ್ತೀರಿ. ಆಗ ನಿಧಾನವಾಗಿ ಚಿಕ್ಕ ಪತ್ರಿಕೆಗಳ ಓದುಗರ ಸಂಖ್ಯೆ ಕಡಿಮೆಯಾಗಿ ಆ ಪತ್ರಿಕೆಗಳೆಲ್ಲ ಮುಚ್ಚಿಹೋಗುತ್ತವೆ. ಪತ್ರಿಕೆ ಒಂದು ಉದಾಹರಣೆಯಷ್ಟೇ! ಎಲ್ಲ ರೀತಿಯ ವೆಬ್ ಸೈಟ್ ಗಳನ್ನು ಈ ರೀತಿ ಬಲಾಢ್ಯ ಕಂಪನಿಗಳು ನಿಯಂತ್ರಣಕ್ಕೆ ತೆಗೆದುಕೊಳ್ಳಬಹುದು.    
   ಇದರ ಇನ್ನೊಂದು ಮುಖವನ್ನು ನೋಡುವುದಾದರೆ ಫೇಸ್ ಬುಕ್ ನ ಮಾಲಿಕ ಮಾರ್ಕ್ ಜುಕೆಂಬರ್ಗ್ ಭಾರತದಲ್ಲಿ ಪ್ರತಿ ವಿದ್ಯಾರ್ಥಿಯು ಇಂಟರ್ ನೆಟ್ ಮೂಲಕ ಜ್ಞಾನಾರ್ಜನೆ ಮಾಡಲು ಅನುಕೂಲವಾಗುವಂತೆ ಪ್ರಧಾನ ಮಂತ್ರಿಗಳ ಜೊತೆ ಒಪ್ಪಂದ ಮಾಡಿಕೊಂಡು internet.org ಎಂಬ ವೆಬ್ ಸೈಟ್ ಅನ್ನು ತೆರೆದಿದ್ದಾರೆ. ಈ internet.org ತಾಣವನ್ನು ತೆರೆಯಲು ಪ್ರಯತ್ನಿಸಿದ್ದೇ ಆದರೆ "ಇದು ರಿಲಯನ್ಸ್ ಇಂಟರ್ ನೆಟ್ ಅನ್ನು ಬಳಸುತ್ತಿರುವವರಿಗೆ ಮಾತ್ರ ಲಭ್ಯವಿದೆ" ಎಂಬ ಸಂದೇಶ ಬರುತ್ತದೆ. ಅಂದರೆ ಈ ಅಧಿಕೃತ ಜಾಲತಾಣದ ಮೂಲಕ ಜ್ಞಾನಾರ್ಜನೆ ಮಾಡಲು ಪ್ರತಿಯೊಬ್ಬ ವಿದ್ಯಾರ್ಥಿಯೂ ರಿಲಯನ್ ಸಂಸ್ಥೆಯ ಮೊರೆ ಹೋಗಬೇಕು! ಇದು ಮಾರುಕಟ್ಟೆಯಲ್ಲಿ ಆರೋಗ್ಯಕರ ಸ್ಪರ್ಧೆಯನ್ನು ತೊಡೆದು ಹಾಕಿ ರಿಲಯನ್ಸ್ ನಂತಹ ದೈತ್ಯರ ಏಕಸ್ವಾಮ್ಯವನ್ನು ಸ್ಥಾಪಿಸುತ್ತದೆ. ಆಮೇಲೆ ಅವರು ಕೊಟ್ಟಿದ್ದನ್ನೇ ನಾವು ಕೈಯೊಡ್ಡಿ ತೆಗೆದುಕೊಳ್ಳಬೇಕು. ಅವರು ಯಾವ ಯಾವ ಜಾಲತಾಣಕ್ಕೆ ಎಷ್ಟು ಹಣ ಕೇಳುತ್ತಾರೋ ಅಷ್ಟು ಹಣ ತೆತ್ತು ತೆಪ್ಪಗಿರಬೇಕು!ನೆಟ್ ನ್ಯೂಟ್ರಾಲಿಟಿಯು ವಿಶ್ವದ ತಾಂತ್ರಿಕ ಲೋಕದೆದುರಿಗೆ ತಲೆದೋರಿ ನಿಂತಿರುವ ಅತಿ ದೊಡ್ಡ ಸಮಸ್ಯೆ. "ನೆಟ್ ನ್ಯೂಟ್ರಾಲಿಟಿ" ಎಂದರೆ ಪ್ರತಿಯೊಬ್ಬರಿಗೂ ಪ್ರತೀ ಜಾಲತಾಣವೂ ಉಚಿತವಾಗಿ ದೊರಕಬೇಕು. ಸೇವಾದಾತರು ಕೇವಲ ಇಂಟರ್ ನೆಟ್ ಗೆ ಮಾತ್ರ ಹಣ ತೆಗೆದುಕೊಳ್ಳಬೇಕೇ ಹೊರತು ಪ್ರತೀ ಜಾಲತಾಣಕ್ಕಲ್ಲ. ಈ ರೀತಿಯ  ನೀತಿಯನ್ನು ಅಮೇರಿಕ ನೆದರ್ಲೆಂಡ್ ನಂತಹ ಅನೇಕ ದೇಶಗಳು ಈಗಾಗಲೇ ಅಳವಡಿಸಿಕೊಂಡಿವೆ. ಡಿಜಿಟಲ್ ಇಂಡಿಯಾ ಜಪ ಮಾಡುತ್ತಿರುವ ಕೇಂದ್ರ ಸರಕಾರವು ಇದಾಗಲೇ ದೈತ್ಯ ಕಂಪನಿಗಳ ಎದುರಿಗೆ ತಲೆಬಾಗುವ ಲಕ್ಷಣಗಳು ಕಾಣುತ್ತಿವೆ. 
    ಮೊದಲು ಈ ಮೇಲ್ ಮುಖಾಂತರ ಜನರ ಅಭಿಪ್ರಾಯಗಳನ್ನು ಆಲಿಸುತ್ತಿದ್ದ ಟೆಲಿಕಾಂ ರೆಗ್ಯುಲೇಟರಿ ಅಥಾರಿಟಿ ಈಗ ನೊಂದಾಯಿತರಿಗೆ ಮಾತ್ರ ಅಭಿಪ್ರಾಯ ದಾಕಲಿಸುವ ಸೌಲಭ್ಯ ಒದಗಿಸಿ ಬಹುರಾಷ್ಟ್ರೀಯ ಕಂಪನಿಗಳಿಗೆ ಅನುಕೂಲ ಮಾಡಿಕೊಟ್ಟಿದೆ. ಹೀಗೇಯೇ ಮುಂದುವರಿದಲ್ಲಿ ಪ್ರತೀ ಪ್ರಜೆಯು ಹಣದಾಹಿ ಕಾರ್ಪೊರೇಟ್ ಕಂಪನಿಗಳ ಇಂಟರ್ನೆಟ್ ಗುಲಾಮಗಿರಿಗೆ ಒಳಪಡುವುದರಲ್ಲಿ ಸಂಶಯವಿಲ್ಲ. ಈಗಾಗಲೇ ಪ್ರಜೆಗಳ ಅಭಿಪ್ರಾಯವನ್ನು ತೆಗೆದುಕೊಳ್ಳುವುದನ್ನು ಸರಕಾರವು ನಿಲ್ಲಿಸಿದೆಯಾದರೂ ಪ್ರಜೆಗಳ ಹಕ್ಕೊತ್ತಾ ಯದ ಮುಂದೆ ಯಾವ ಸರಕಾರವಾದರೂ ತಲೆಬಾಗಲೇ ಬೇಕು.
    ನಮ್ಮ ಇಂಟರ್ ನೆಟ್ ಸ್ವಾತಂತ್ರವನ್ನು ಉಳಿಸಿಕೊಳ್ಳಲು ನಾವು ಮಾಡಬೇಕಾದುದೆಂದರೆ mygov.in ಎಂಬ ಕೇಂದ್ರ ಸರಕಾರದ ಜಾಲತಾಣಕ್ಕೆ ಹೋಗಿ ನೊಂದಾಯಿಸಿಕೊಂಡು ಇಂಟರ್ ನೆಟ್ ಸ್ವಾತಂತ್ರದ ಬಗ್ಗೆ ನಮ್ಮ ಅಭಿಪ್ರಾಯ ದಾಖಲಿಸುವುದು. ಪ್ರಧಾನಿಗಳಿಗೆ ಟ್ವೀಟ್ ಮತ್ತು ಇ ಮೇಲ್ ಗಳ ಮುಖಾಂತರ ನಮಗೆ ಇಂಟರ್ ನೆಟ್ ಸ್ವಾತಂತ್ರ ಬೇಕೆಂದು ಒತ್ತಾಯ ಮಾಡಿ ಪತ್ರ ಬರೆಯುವುದು.  ಸರಕಾರಕ್ಕೆ ಹಕ್ಕೊತ್ತಾಯ ಮಾಡುವಾಗ ಸ್ಪಷ್ಟವಾಗಿ "ನಮಗೆ ಇಂಟರ್ ನೆಟ್ ಎಲ್ಲಾ ರೀತಿಯಲ್ಲೂ ಎಲ್ಲಾ ಮಾದರಿಯಲ್ಲೂ ಉಚಿತವಾಗಿ ಬೇಕು. ಇಂಟರ್ ನೆಟ್ ಸಂಪರ್ಕ ತೆಗೆದುಕೊಂಡವರಿಗೆ ಮತ್ತೆ ಯಾವುದೇ ಕಾರಣಕ್ಕೂ ಪ್ರತ್ಯೇಕ ದರ ವಿಧಿಸುವಂತಿಲ್ಲ. ಇದು ಇಂಟರ್ ನೆಟ್ ನ ಮುಖಾಂತರ ಉಚಿತವಾಗಿ ಕರೆ ಮಾಡಲೂ ಅನ್ವಯಿಸಬೇಕು" ಎಂದು ವಿವರವಾಗಿ ಬರೆಯೋಣ. ಈ ವಿಷಯವನ್ನು ಸಾಧ್ಯವಾದಷ್ಟು ಹೆಚ್ಚು ಬಳಕೆದಾರರಿಗೆ, ಸಹೋದ್ಯೋಗಿಗಳಿಗೆ, ಗೆಳೆಯರಿಗೆ, ಬಂಧುಗಳಿಗೆ ತಿಳಿಸಿ ಹೆಚ್ಚು ಹಕ್ಕೊತ್ತಾಯದ ಪತ್ರಗಳು ಸರಕಾರವನ್ನು ತಲುಪುವಂತೆ ಮಾಡೋಣ!
(ಕೃಪೆ:- ಶ್ರೀಹರ್ಷ ಸಾಲಿಮಠ, ತಂತ್ರಲೋಕ, ಕನ್ನಡಪ್ರಭ)

Saturday, September 26, 2015

ಜೀವವಿಮೆ ಅನಿವಾರ್ಯ ಯಾವಾಗ?

ಜೀವ ವಿಮೆ ಮಾಡಿಕೊಳ್ಳುವುದು ಕಡ್ಡಾಯವೇನೂ ಅಲ್ಲ. ಆದರೆ, ಜೀವನದ ಕೆಲವೊಂದು ಸಂದರ್ಭ ಮತ್ತು ಪರಿಸ್ಥಿತಿಗಳಲ್ಲಿ ಜೀವವಿಮೆ ಅನಿವಾರ್ಯವಾಗಿ ಬಿಡುತ್ತದೆ. ಆ ಕುರಿತು ಇಲ್ಲಿದೆ ಒಂದಷ್ಟು ಮಾಹಿತಿ.

 

ಪೋಷಕರು ಅವಲಂಬಿತರಾಗಿದ್ರೆ 
ಕುಟುಂಬದಲ್ಲಿ ದುಡಿಯುವವರು ನೀವೊಬ್ಬರೆ ಆಗಿದ್ದರೆ ಮತ್ತು ಹಣಕಾಸು ವಿಚಾರದಲ್ಲಿ ಪೋಷಕರು ನಿಮ್ಮ ಮೇಲೆಯೇ ಅವಲಂಬಿತರಾಗಿದ್ದರೆ ಜೀವ ವಿಮೆ ಮಾಡಿಸಿಕೊಳ್ಳುವ ಕುರಿತು ಯೋಚಿಸುವುದು ಒಳಿತು. ನಿಮ್ಮ ಜೀವಕ್ಕೆ ಎದುರಾಗುವ ಅನಿರೀಕ್ಷಿತ ಆಘಾತ ಪೋಷಕರನ್ನು ಮಾನಸಿಕವಾಗಿ ಅಷ್ಟೇ ಅಲ್ಲದೆ ಆರ್ಥಿಕವಾಗಿಯೂ ಕುಗ್ಗಿ ಹೋಗುವಂತೆ ಮಾಡಬಹುದು. ದೊಡ್ಡ ಮೊತ್ತದ ಜೀವ ವಿಮೆ ಮಾಡಿಸಿಕೊಂಡಿದ್ದರೆ ನಿಮ್ಮ ನಂತರವೂ ಅವರನ್ನು ಆರ್ಥಿಕ ಅಭದ್ರತೆ ಕಾಡದು.

ಹೊಸದಾಗಿ ಮದುವೆಯಾಗಿದ್ರೆ
ಮದುವೆ ಅನ್ನುವುದು ಒಂದು ಸುಂದರ ಬಂಧವಷ್ಟೇ ಅಲ್ಲ ಅದೊಂದು ಹೊಸ ಜವಾಬ್ದಾರಿ. ನಿಮ್ಮ ಪತ್ನಿಯನ್ನು ಭವಿಷ್ಯದಲ್ಲಿ ಹಣಕಾಸು ವಿಚಾರವಾಗಿ ಸುರಕ್ಷಿತವಾಗಿಡಬೇಕಾದರೆ ಜೀವವಿಮೆ ಮಾಡಿಕೊಳ್ಳುವುದು ಅತ್ಯಗತ್ಯ. ಮದುವೆಯ ನಿಶ್ಚಿತಾರ್ಥದ ದಿನದಿಂದಲೇ ಜೀವ ವಿಮೆ ಕುರಿತು ಯೋಚಿಸಿ.

ಮಕ್ಕಳಾದಾಗ
ಮಕ್ಕಳಾದಾಗಲೂ ಇನ್ಷೂರೆನ್ಸ್ ಮಾಡಿಸಿಕೊಳ್ಳಬಹುದು. ಮಕ್ಕಳ ಭವಿಷ್ಯವನ್ನು ಹಣಕಾಸು ವಿಚಾರದಲ್ಲಿ ಸುರಕ್ಷಿತವಾಗಿಡಲು ಇನ್ಛೂರೆನ್ಸ್ ಸೂಕ್ತ ಆಯ್ಕೆ. ನಿಮಗೇನಾದರೂ ತೊಂದರೆಯಾದರೂ ಮಕ್ಕಳ ಭವಿಷ್ಯಕ್ಕೆ ಯಾವುದೇ ಸಮಸ್ಯೆಯಾಗದಂತೆ ಇನ್ಷೂರೆನ್ಸ್ ರಕ್ಷಣೆ ನೀಡುತ್ತದೆ. ಈ ಕುರಿತು ನಿಮ್ಮ ಪತ್ನಿ ಗರ್ಭಿಣಿಯಾಗಿರುವಾಗಲೇ ನಿರ್ಧಾರಕ್ಕೆ ಬರುವುದು ಒಳಿತು.

ಹೊಸ ಮನೆಗೆ ಸಾಲ ಮಾಡಿದ್ರೆ
ಹೊಸದಾಗಿ ಮನೆ ಕೊಂಡು ಕೊಂಡಿರುತ್ತೀರಿ. ಅದಕ್ಕಾಗಿ ಮೈತುಂಬಾ ಸಾಲ ಬೇರಿ ಮಾಡಿಕೊಂಡಿರುತ್ತೀರಿ. ನಿಮ್ಮ ಜೀವಕ್ಕೇನಾದರೂ ತೊಂದರೆಯಾದರೆ ಈ ಸಾಲದ ಹೊರೆ ಕುಟುಂಬದ ಮೇಲೆಯೇ ಬೀಳುತ್ತದೆ. ನಿಮ್ಮ ಕಳೆದುಕೊಂಡ ನೋವಿನ ಜತೆಗೆ ಈ ಸಾಲ ತೀರಿಸುವ ಹೊಣೆಯೂ ಅವರ ಮೇಲೆ ಬೀಳುತ್ತದೆ. ಇಂಥ ಪರಿಸ್ಥಿತಿ ನಿಮ್ಮ ಕುಟುಂಬಕ್ಕೆ ಬರಬಾರದು ಅಂತಿದ್ದರೆ ಜೀವ ವಿಮೆ ಮಾಡಿಸಿಕೊಳ್ಳಿ. ನಿಮ್ಮ ನಂತರವೂ ಹೊಸ ಮನೆ ನಿಮ್ಮ ಕುಟುಂಬದ ಪಾಲಿಗೆ ನೆಮ್ಮದಿಯ ತಾಣವಾಗಿಯೇ ಉಳಿಯುವಂತೆ ನೋಡಿಕೊಳ್ಳಿ.

ಬಡ್ತಿ ಸಿಕ್ಕಾಗ 
ಕೆಲಸದಲ್ಲಿ ಬಡ್ತಿ ಸಿಕ್ಕಿತೆಂದರೆ ನಿಮ್ಮ ಆದಾಯವೂ ಹೆಚ್ಚಾಯಿತೆಂದೇ ಅರ್ಥ. ಅದರ ಜತೆಗೆ ನಿಮ್ಮ ಕುಟುಂಬದ ಜೀವನ ಶೈಲಿಯೂ ಬದಲಾಗುತ್ತದೆ. ಈ ಬದಲಾದ ಜೀವನ ಶೈಲಿ ನಿಮ್ಮ ನಂತರವೂ ಅದೇ ರೀತಿ ಮುಂದುವರಿಯಬೇಕು ಅನ್ನುವಂತಿದ್ದರೆ ಜೀವವಿಮೆಯ ಮೊತ್ತ ಹೆಚ್ಚಿಸಿಕೊಳ್ಳುವುದು ಒಳಿತು.

ಹೊಸದಾಗಿ ಸಾಲ ಮಾಡಿದಾಗ
ಕಾರು, ವೈಯಕ್ತಿಕ ಸಾಲ ಮಾಡಿದಾಗ ನಿಮ್ಮ ಮೇಲಿನ ಇನ್ಷೂರೆನ್ಸ್ ಕವರೇಜ್ ಕೂಡ ಹೆಚ್ಚಾಗಲಿ. ನಿಮ್ಮ ನಂತರ ಕುಟುಂಬಕ್ಕೆ ಆಸ್ತಿಯನ್ನು ಬಿಟ್ಟುಹೋಗುತ್ತಿದ್ದೀರಿಯೇ ಹೊರತು ಸಾಲವನ್ನಲ್ಲ ಎನ್ನುವುದು ನಿಮ್ಮ ಗಮನದಲ್ಲಿರಲಿ.Wednesday, September 23, 2015

ಲೇಖನ : ಜನಸ್ನೇಹಿ ಚಾಲಕದೇಶದ ಬೆಳವಣಿಗೆಯಲ್ಲಿ ಸಾರಿಗೆ ವ್ಯವಸ್ಥೆಯು ಮಹತ್ವದ ಪಾತ್ರವನ್ನು ವಹಿಸುತ್ತಿದೆ. ಅದರಲ್ಲಿ ಭೂ ಸಾರಿಗೆಯು ಅತ್ಯಂತ ಮುಖ್ಯವಾಗಿದ್ದು ಮೋಟಾರು ವಾಹನಗಳು ಅದರ ಪ್ರಮುಖ ಅಂಗವಾಗಿವೆ.ಈ ವಾಹನಗಳನ್ನು ಚಾಲನೆ ಮಾಡಲು ನಿಪುಣರಾದ ಚಾಲಕರ ಅಗತ್ಯ ಬಹಳಷ್ಟಿದೆ. ವಾಹನಗಳ ಸಂಖ್ಯೆ ಹೆಚ್ಚಿದಂತೆ ರಸ್ತೆ ಅಪಘಾತಗಳ ಸಂಖ್ಯೆಯೂ ಹೆಚ್ಚುತಿದ್ದು, ಅವುಗಳಿಂದ ಆಗುತ್ತಿರುವ ಜೀವ ಮತ್ತು ಆಸ್ತಿಹಾನಿಯಿಂದ ತೀವ್ರ ಹಿನ್ನೆಡೆಯಾಗುತ್ತಿದೆ. ಮೋಟಾರು ವಾಹನ ಕಾಯಿದೆ, ರಸ್ತೆ ಸುರಕ್ಷತಾ ನಿಯಮಗಳ ಕುರಿತು ಹೆಚ್ಚಿನ ಜ್ಞಾನಹೊಂದಿದ್ದು, ಅದನ್ನು ಅಳವಡಿಸಿಕೊಂಡು ಶಿಸ್ತುಬದ್ಧವಾಗಿ ಚಾಲನೆಮಾಡಿ ಅಪಘಾತಗಳನ್ನು ಸಾಧ್ಯವಾದಷ್ಟು ತಡೆಯ ಬೇಕಾಗಿರುವುದು ಚಾಲಕರ ಆದ್ಯ ಕರ್ತವ್ಯವಾಗಿದೆ.
ಮೊದಲೆಲ್ಲ ಚಾಲಕರಿಗೆ ವಾಹನವನ್ನು ನಡೆಸುವುದು ಮತ್ತು ನಿಯಂತ್ರಿಸುವುದು ತಿಳಿದಿದ್ದರೆ ಸಾಕಾಗುತ್ತಿತ್ತು. ಆದರೆ ಇಂದಿನ ದಿನಗಳಲ್ಲಿ ರಸ್ತೆ ಮೇಲೆ ವಾಹನಗಳ ದಟ್ಟಣೆ ಮತ್ತು ಅವುಗಳ ವೇಗ ಹೆಚ್ಚುತ್ತಿದ್ದು, ವಾಹನವು ಎಷ್ಟೇ ಸುರಕ್ಷಿತ ಮತ್ತು ವಿಶ್ವಾಸಾರ್ಹ ವಾಗಿದ್ದರೂ ಚಾಲಕನಾದವನಿಗೆ ಹೆಚ್ಚಿನ ಕುಶಲತೆ ಹೊಂದಿರ ಬೇಕಾಗಿರುವುದು ಅತ್ಯಗತ್ಯವಾಗಿರುತ್ತದೆ.
ಚಾಲಕರಿಗೆ ಕಾಲಕ್ರಮೇಣ ವಾಹನ ಚಲಿಸುವ ಅನುಭವ, ಕುಶಲತೆ ತಾನಾಗಿಯೇ ಕರಗತ ವಾಗುತ್ತವೆ.ಆದರೆ ಉತ್ತಮ ಚಾಲಕನಾಗಲು ಇನ್ನೂ ಹೆಚ್ಚಿನ ಗುಣಗಳನ್ನು ಹೊಂದಿರ ಬೇಕಾಗುತ್ತದೆ. ಚಾಲಕನಾದವನು ತನ್ನ ಮತ್ತು ತನ್ನ ವಾಹನದಲ್ಲಿರುವ ಪ್ರಯಾಣಿಕರ ಸುರಕ್ಷತೆಯ ಬಗ್ಗೆ ಮಾತ್ರ ಕಾಳಜಿ ಹೊಂದಿದ್ದರೆ ಸಾಲದು. ಪಾದಚಾರಿಗಳು ಸೇರಿದಂತೆ ರಸ್ತೆಯನ್ನು ಬಳಸುತ್ತಿರುವ ಪ್ರತಿಯೊಬ್ಬರ ಬಗ್ಗೆಯೂ ಅಷ್ಟೇ ಕಾಳಜಿಯನ್ನು ಹೊಂದಿರಬೇಕು. ಪ್ರತಿಯೊಂದು ಘಳಿಗೆಯೂ ಬದಲಾಗುತ್ತಿರುವ ಸಾರಿಗೆ ಪರಿಸ್ಥಿತಿಯ ಮೇಲೆ ಆತನು ಗಮನವಿಟ್ಟಿದ್ದಾಗ ಮಾತ್ರ ಅದು ಸಾಧ್ಯವಾಗುತ್ತದೆ. ತಾನೇನು ಮಾಡಬೇಕು ಎಂಬುದನ್ನು ಮುಂಚಿತವಾಗಿಯೇ ಯೋಚಿಸಿದರೆ ಇತರರಿಗೆ ತೊಂದರೆ ಅಥವಾ ಅಪಾಯ ವಾಗುವುದನ್ನು ತಪ್ಪಿಸಬಹುದಾಗಿದೆ. ಚಾಲಕರಿಗೆ ಏಕಾಗ್ರತೆ ಇರಬೇಕೆನ್ನುವುದು ಬಹುಮುಖ್ಯ ಅಂಶವಾಗಿರುತ್ತದೆ. ಆತನು ಒಂದು ಕ್ಷಣ ತನ್ನಗಮನವನ್ನು ಬೇರೆಕಡೆ ತಿರುಗಿಸಿದರೂ ಅನಾಹುತ ಸಾಧ್ಯತೆಯಿದೆ. ಆತನ ದೇಹದ ಆರೋಗ್ಯ ಸರಿಯಿಲ್ಲದಿದ್ದರೆ, ಕೆಲಸದ ಒತ್ತಡದಿಂದ ದಣಿದಿದ್ದರೆ, ಸರಿಯಾಗಿ ನಿದ್ದೆ ಮಾಡಿಲ್ಲದಿದ್ದರೆ, ಮಾನಸಿಕ ಒತ್ತಡ, ಉದ್ವೇಗ ಅಥವಾ ಖಿನ್ನತೆಯಿಂದ ಬಳಲುತ್ತಿದ್ದರೆ ಪ್ರತಿಕ್ರಿಯಿಸುವುದು ತಡವಾಗಿ ಅಪಾಯಕ್ಕೆ ದಾರಿಯಾದೀತು. ಅಂತಹ ಸಂದರ್ಭಗಳಲ್ಲಿ ಚಾಲನೆ ಮಾಡದಿರುವುದೇ ಒಳ್ಳೆಯದು.
ಚಾಲಕರು ತಾವು ಮಾತ್ರ ನಿಯಮಗಳನ್ನು ಪಾಲನೆ ಮಾಡಿ ಜಾಗರೂಕತೆಯಿಂದ ಚಾಲನೆ ಮಾಡಿದರಷ್ಟೇ ಸಾಲದು. ಇತರರು ಏನು ಮಾಡುತ್ತಿದ್ದಾರೆ ಎಂಬುದನ್ನು ಗಮನಿಸಿ ಅದಕ್ಕೆ ತಕ್ಕಂತೆ ತತ್ಕ್ಷಣ ತಮ್ಮ ಕಾರ್ಯವಿಧಾನವನ್ನು ಬದಲಾಯಿಸುವ ಅಗತ್ಯವಿರುತ್ತದೆ. ಅನುಭವ ಮತ್ತು ಮುಂದಾಲೋಚನೆ ಇದ್ದರೆ ಅಪಾಯ ವಾಗುವುದನ್ನು ಬಹಳಷ್ಟು ತಪ್ಪಿಸ ಬಹುದಾಗಿದೆ. ಇತರೆ ವಾಹನದ ಚಾಲಕರು ತಪ್ಪು ಮಾಡಿದಾಗ ಅಥವಾ ವಾಹನ ದಟ್ಟಣೆ ಉಂಟಾದಾಗ ತಾಳ್ಮೆ ಕಳೆದುಕೊಳ್ಳಬಾರದು. ಅವರೊಂದಿಗೆ ಜಗಳಕ್ಕಿಳಿಯುವುದು, ಚಾಲನೆಯಲ್ಲಿ ಪೈಪೋಟಿಗೆ ಇಳಿಯುವುದರಿಂದ ವಿವೇಚನೆ ತಪ್ಪಿ ಅಪಘಾತಕ್ಕೆ ದಾರಿ ಮಾಡಿಕೊಡಬಹುದು. ಎಂತಹ ನುರಿತ ಚಾಲಕನಿಗಾಗಲಿ ಅತಿಯಾದ ಆತ್ಮವಿಶ್ವಾಸ ತರವಲ್ಲ. ಅದರಿಂದ ಬೇಜವಾಬ್ದಾರಿಯುತ ಚಾಲನೆ ಮಾಡಿ ಅಪಾಯವನ್ನು ಎದುರಿಸ ಬೇಕಾದೀತು. ಚಾಲಕ ನಾದವನು ವಾಹನದ ಎಲ್ಲ ಜಟಿಲ ವಿವರಗಳನ್ನು ತಿಳಿದುಕೊಂಡಿರುವ ಅವಶ್ಯಕತೆಯಿಲ್ಲ. ಆದರೆ ವಾಹನದ ವಿವಿಧ ಭಾಗಗಳು ಹೇಗೆ ಕೆಲಸ ಮಾಡುತ್ತವೆ,  ಅವುಗಳನ್ನು ಬಳಸುವ ಮತ್ತು ನಿಯಂತ್ರಿಸುವ ಸಮರ್ಪಕ ವಿಧಾನವನ್ನು ಅರಿತು ಕೊಂಡಿರಬೇಕಾಗುತ್ತದೆ. ಹಾಗಿದ್ದಾಗ ಮಾತ್ರ ಕ್ಲಿಷ್ಟಕರ ಸನ್ನಿವೇಶಗಳನ್ನು ನಿಭಾಯಿಸುವುದಲ್ಲದೆ ಸಂಭವಿಸ ಬಹುದಾದ ಅಪಘಾತಗಳನ್ನು ತಡೆದು ಜನಸ್ನೇಹಿ ಚಾಲಕನಾಗಬಲ್ಲನು.
ಮೇಲಿನ ಎಲ್ಲ ಅಂಶಗಳು ಚಾಲನೆಯಲ್ಲಿ ಪ್ರಾರಂಭದಿಂದಲೇ ಉತ್ತಮ ಶಿಕ್ಷಣವನ್ನು ಪಡೆದಿರುವುದನ್ನು ಅವಲಂಬಿಸಿರುತ್ತವೆ .ಸಾಮಾನ್ಯವಾಗಿ ಬಂಧುಗಳಿಂದಲೋ, ಸ್ನೇಹಿತರಿಂದಲೋ ಅಥವಾ ವೃತಿಪರರಲ್ಲದ ತರಬೇತುದಾರರಿಂದಲೋ ಕಡಿಮೆ ಅವಧಿಯಲ್ಲಿಯೇ ವಾಹನ ಚಾಲನೆ ಕಲಿತು ರಸ್ತೆಗಿಳಿಯುವವರೇ ಹೆಚ್ಚಾಗಿ ಕಂಡು ಬರುತ್ತದೆ. ಆದರೆ ಉತ್ತಮ ಚಾಲಕರೆಲ್ಲರೂ ಉತ್ತಮ ಶಿಕ್ಷಕರಾಗ ಬೇಕೆಂದಿಲ್ಲ. ಅಂತಹವರಿಂದ ಚಾಲನೆ ಕಲಿತವರು ಕೆಲವೊಂದು ಅನಿರೀಕ್ಷಿತ ಸಂದರ್ಭಗಳನ್ನು ಹೇಗೆ ನಿಭಾಯಿಸ ಬೇಕೆಂದು ತಿಳಿಯದೆ ಆತ್ಮವಿಶ್ವಾಸ ಕಳೆದುಕೊಳ್ಳುವ ಸಾಧ್ಯತೆ ಹೆಚ್ಚಿರುತ್ತದೆ. ವೃತ್ತಿಪರರಲ್ಲದವರು ಕೊಡುವ ತರಬೇತಿ ಹೇಗಿರುತ್ತದೆಂದರೆ ಅವರು ನಡೆಯುವ ಮೊದಲೇ ಓಡುವುದನ್ನು ಕಲಿಸಿರುತ್ತಾರೆ. ಅದರಿಂದ ಭವಿಷ್ಯದಲ್ಲಿ ಸಂಕಷ್ಟವನ್ನು ಎದುರಿಸ ಬೇಕಾದೀತು. ಚಾಲನೆ ತರಬೇತಿ ಪಡೆಯುವ ಮುಂಚೆ ಈ ಅಂಶವನ್ನು ಗಮನದಲ್ಲಿ ಇರಿಸಿಕೊಳ್ಳುವುದು ಒಳ್ಳೆಯದು.

Tuesday, September 22, 2015

ವೈಜಯಂತಿ ಯೊಂದಿಗೆ ಯುವ ಕಲಾವಿದರ ಸೆಲ್ಫೀ!!

ಖ್ಯಾತ ಸಿನಿಮಾ ತಾರೆ, ನೃತ್ಯ ಕಲಾವಿದೆ ವೈಜಯಂತಿ ಮಾಲಾ ಅವರೊಂದಿಗೆ ಸೆಲ್ಫೀ ಚಿತ್ರ ತೆಗೆದುಕೊಳ್ಳಲು ಯುವ ಕಲಾವಿದರು ತೋರುತ್ತಿರುವ ಈ ಕಾತುರ ಬೆಂಗಳೂರಿನ ಮಲ್ಲೇಶ್ವರಂ ನಲ್ಲಿರುವ ಎಂಇಎಸ್‍ ವಿಜ್ಷಾನ ಮತ್ತು ವಾಣಿಜ್ಯ ಕಾಲೇಜಿನಲ್ಲಿ ಕಂಡದ್ದು.

ಕಸ ವಿಲೇವಾರಿ ಜೊತೆಗೆ ವಿದ್ಯುತ್‍ ಉತ್ಪಾದನೆ


ಅತ್ಯಾಧುನಿಕ ತಂತ್ರಜ್ಞಾನದಿಂದ ಕಸವನ್ನು ವಿಲೇವಾರಿ ಮಾಡುವುದರೊಂದಿಗೆ ವಿದ್ಯುತ್‍ ಉತ್ಪಾದನೆ ಮಾಡುವ ಪ್ರಸ್ತಾಪನೆಯನ್ನು ಖಾಸಗಿ ಕಂಪನಿಯೊಂದು ಸರ್ಕಾರದ ಮುಂದಿಟ್ಟಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೊಂದಿಗೆ ಕಂಪನಿ ಮುಖ್ಯಸ್ಥರು ಮಾತುಕತೆ ನಡೆಸಿ ಪ್ರಾತ್ಯಕ್ಷಿಕೆಯ ಮೂಲಕ ಯೋಜನೆಯ ರೂಪುರೇಷೆಗಳನ್ನು ವಿವರಿಸಿದರು. ಬೆಂಗಳೂರು ನಗರದಲ್ಲಿ ಸಂಗ್ರಹವಾಗುವ ಕಸವನ್ನು ಆಧುನಿಕ ಮತ್ತು ವೈಜ್ಞಾನಿಕ ತಂತ್ರಜ್ಞಾನದಲ್ಲಿ ವಿಲೇವಾರಿ ಮಾಡುವುದರ ಜೊತೆಗೆ ವಿದ್ಯುತ್ ಉತ್ಪಾದನೆ ಮಾಡಿ ಸರ್ಕಾರಕ್ಕೆ ಒದಗಿಸುವುದಾಗಿ ಅಮೆರಿಕ ಮೂಲದ ರುಷೆ ಇನ್‍ಫ್ರಾಟೆಕ್‍-ಓರಿಯನ್‍ ಎಂಟರ್‍ ಪ್ರೈಸಸ್‍ ಸಂಸ್ಥೆ ಹೇಳಿದೆ. ಈ ಕಂಪನಿಯು ಪ್ರಸ್ತುತ ವಿಯೆಟ್ನಾಂನಲ್ಲಿ ಕಸ ವಿಲೇವಾರಿ ಮಾಡುತ್ತಿರುವುದಾಗಿ ಹೇಳಿಕೊಂಡಿದೆ. ಬೆಂಗಳೂರಿನ ಕಸದ ವಿಲೇವಾರಿಗೆ 25ಎಕರೆ ಜಾಗ ಕೊಟ್ಟು ಉತ್ಪಾದನೆಯಾಗುವ ವಿದ್ಯುತ್ತನ್ನು ರವಾನೆ ಮಾಡಲು ಮಾರ್ಗ ಒದಗಿಸಿ ಎಂದು ಸರ್ಕಾರಕ್ಕೆ ಕಂಪನಿ ಪ್ರತಿನಿಧಿಗಳು ಮನವಿ ಮಾಡಿದ್ದಾರೆ. ಇದರಿಂದ ಸರ್ಕಾರಕ್ಕೆ ಯಾವುದೇ ಹೊರೆ ಆಗುವುದಿಲ್ಲ. ಜೊತೆಗೆ ಮಾಲಿನ್ಯ ಮತ್ತು ದುರ್ನಾತಕ್ಕೆ ಅವಕಾಶ ಇಲ್ಲದಂತೆ ಕಸದ ವಿಲೇವಾರಿ ಮಾಡಲಾಗುವುದು ಎಂದು ಸ್ಪಷ್ಟ ಪಡಿಸಿದ್ದಾರೆ. ನಗರದಲ್ಲಿ ಪ್ರತಿನಿತ್ಯ ಸುಮಾರು 4000ಟನ್‍ ಕಸ ಉತ್ಪಾದನೆ ಆಗುತ್ತಿದೆ. ಅದರಿಂದ 800 ಮೆಗಾವ್ಯಾಟ್‍ವರೆಗೆ ವಿದ್ಯುತ್‍ ಉತ್ಪಾದನೆ ಮಾಡಬಹುದು ಎಂದು ಹೇಳಿದ್ದಾರೆ. ಈ ಪ್ರಸ್ತಾವಕ್ಕೆ ಸಕಾರಾತ್ಮಕವಾಗಿ ಪ್ರತಿಕ್ರಿಯಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಮಂಡೂರು, ಬಿಂಗೀಪುರ ಮತ್ತು ಮಾವಳ್ಳಿಯಲ್ಲಿ ಈಗಾಗಲೆ ಭಾರೀ ಪ್ರಮಾಣದಲ್ಲಿ ಕಸ ಸಂಗ್ರಹವಾಗಿದೆ. ಈ ಪೈಕಿ ಮಂಡೂರಿನಲ್ಲಿ ಪ್ರಾಯೋಗಿಕವಾಗಿ ಮಂಡೂರಿನಲ್ಲಿ ಯೋಜನೆಯನ್ನು ಆರಂಭಿಸಿ. ಅದರ ಸಾಧಕ ಬಾಧಕಗಳನ್ನು ಪರಿಶೀಲಿಸಿದ ಬಳಿಕ ಒಪ್ಪಂದ ಮಾಡಿಕೊಳ್ಳಲಾಗುವುದು ಎಂದು ತಿಳಿಸಿದ್ದಾರೆ. ಕಸದಿಂದ ಉತ್ಪಾದನೆಯಾಗುವ ವಿದ್ಯತ್ತನ್ನು ಕರ್ನಾಟಕ ವಿದ್ಯುತ್‍ ನಿಯಂತ್ರಣ ಪ್ರಾಧಿಕಾರವು ನಿಗದಿ ಪಡಿಸಿದ ದರದಲ್ಲಿ ಖರೀದಿಸಲಾಗುವುದು ಎಂದು ಹೇಳಿದ್ದಾರೆ. ಬೆಂಗಳೂರಿನಲ್ಲಿ ಕಸ ವಿಲೇವಾರಿ ಭಾರೀ ಸಮಸ್ಯೆಯಾಗಿದೆ. ಅದರ ನಿವಾರಣೆಗೆ ಸಾಧ್ಯವಿರುವ ಎಲ್ಲಾ ಕ್ರಮಗಳನ್ನು ಕೈಗೊಳ್ಳುವುದಾಗಿ ಮುಖ್ಯಮಂತ್ರಿ ಭರವಸೆ ನೀಡಿದ್ದಾರೆ. ಸಚಿವರಾದ ರಾಮಲಿಂಗಾ ರೆಡ್ಡಿ, ಕೆ.ಜೆ.ಜಾರ್ಜ್‍, ಡಿ.ಕೆ.ಶಿವಕುಮಾರ್‍ ಮತ್ತಿತರರು ಈ ಸಭೆಯಲ್ಲಿ ಹಾಜರಿದ್ದರು.

Monday, September 21, 2015

'ಗಂಧದ ಗುಡಿ'ಗೆ ಸರ್ವರಿಗೂ ಸುಸ್ವಾಗತ...