Tuesday, September 22, 2015

ಕಸ ವಿಲೇವಾರಿ ಜೊತೆಗೆ ವಿದ್ಯುತ್‍ ಉತ್ಪಾದನೆ


ಅತ್ಯಾಧುನಿಕ ತಂತ್ರಜ್ಞಾನದಿಂದ ಕಸವನ್ನು ವಿಲೇವಾರಿ ಮಾಡುವುದರೊಂದಿಗೆ ವಿದ್ಯುತ್‍ ಉತ್ಪಾದನೆ ಮಾಡುವ ಪ್ರಸ್ತಾಪನೆಯನ್ನು ಖಾಸಗಿ ಕಂಪನಿಯೊಂದು ಸರ್ಕಾರದ ಮುಂದಿಟ್ಟಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೊಂದಿಗೆ ಕಂಪನಿ ಮುಖ್ಯಸ್ಥರು ಮಾತುಕತೆ ನಡೆಸಿ ಪ್ರಾತ್ಯಕ್ಷಿಕೆಯ ಮೂಲಕ ಯೋಜನೆಯ ರೂಪುರೇಷೆಗಳನ್ನು ವಿವರಿಸಿದರು. ಬೆಂಗಳೂರು ನಗರದಲ್ಲಿ ಸಂಗ್ರಹವಾಗುವ ಕಸವನ್ನು ಆಧುನಿಕ ಮತ್ತು ವೈಜ್ಞಾನಿಕ ತಂತ್ರಜ್ಞಾನದಲ್ಲಿ ವಿಲೇವಾರಿ ಮಾಡುವುದರ ಜೊತೆಗೆ ವಿದ್ಯುತ್ ಉತ್ಪಾದನೆ ಮಾಡಿ ಸರ್ಕಾರಕ್ಕೆ ಒದಗಿಸುವುದಾಗಿ ಅಮೆರಿಕ ಮೂಲದ ರುಷೆ ಇನ್‍ಫ್ರಾಟೆಕ್‍-ಓರಿಯನ್‍ ಎಂಟರ್‍ ಪ್ರೈಸಸ್‍ ಸಂಸ್ಥೆ ಹೇಳಿದೆ. ಈ ಕಂಪನಿಯು ಪ್ರಸ್ತುತ ವಿಯೆಟ್ನಾಂನಲ್ಲಿ ಕಸ ವಿಲೇವಾರಿ ಮಾಡುತ್ತಿರುವುದಾಗಿ ಹೇಳಿಕೊಂಡಿದೆ. ಬೆಂಗಳೂರಿನ ಕಸದ ವಿಲೇವಾರಿಗೆ 25ಎಕರೆ ಜಾಗ ಕೊಟ್ಟು ಉತ್ಪಾದನೆಯಾಗುವ ವಿದ್ಯುತ್ತನ್ನು ರವಾನೆ ಮಾಡಲು ಮಾರ್ಗ ಒದಗಿಸಿ ಎಂದು ಸರ್ಕಾರಕ್ಕೆ ಕಂಪನಿ ಪ್ರತಿನಿಧಿಗಳು ಮನವಿ ಮಾಡಿದ್ದಾರೆ. ಇದರಿಂದ ಸರ್ಕಾರಕ್ಕೆ ಯಾವುದೇ ಹೊರೆ ಆಗುವುದಿಲ್ಲ. ಜೊತೆಗೆ ಮಾಲಿನ್ಯ ಮತ್ತು ದುರ್ನಾತಕ್ಕೆ ಅವಕಾಶ ಇಲ್ಲದಂತೆ ಕಸದ ವಿಲೇವಾರಿ ಮಾಡಲಾಗುವುದು ಎಂದು ಸ್ಪಷ್ಟ ಪಡಿಸಿದ್ದಾರೆ. ನಗರದಲ್ಲಿ ಪ್ರತಿನಿತ್ಯ ಸುಮಾರು 4000ಟನ್‍ ಕಸ ಉತ್ಪಾದನೆ ಆಗುತ್ತಿದೆ. ಅದರಿಂದ 800 ಮೆಗಾವ್ಯಾಟ್‍ವರೆಗೆ ವಿದ್ಯುತ್‍ ಉತ್ಪಾದನೆ ಮಾಡಬಹುದು ಎಂದು ಹೇಳಿದ್ದಾರೆ. ಈ ಪ್ರಸ್ತಾವಕ್ಕೆ ಸಕಾರಾತ್ಮಕವಾಗಿ ಪ್ರತಿಕ್ರಿಯಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಮಂಡೂರು, ಬಿಂಗೀಪುರ ಮತ್ತು ಮಾವಳ್ಳಿಯಲ್ಲಿ ಈಗಾಗಲೆ ಭಾರೀ ಪ್ರಮಾಣದಲ್ಲಿ ಕಸ ಸಂಗ್ರಹವಾಗಿದೆ. ಈ ಪೈಕಿ ಮಂಡೂರಿನಲ್ಲಿ ಪ್ರಾಯೋಗಿಕವಾಗಿ ಮಂಡೂರಿನಲ್ಲಿ ಯೋಜನೆಯನ್ನು ಆರಂಭಿಸಿ. ಅದರ ಸಾಧಕ ಬಾಧಕಗಳನ್ನು ಪರಿಶೀಲಿಸಿದ ಬಳಿಕ ಒಪ್ಪಂದ ಮಾಡಿಕೊಳ್ಳಲಾಗುವುದು ಎಂದು ತಿಳಿಸಿದ್ದಾರೆ. ಕಸದಿಂದ ಉತ್ಪಾದನೆಯಾಗುವ ವಿದ್ಯತ್ತನ್ನು ಕರ್ನಾಟಕ ವಿದ್ಯುತ್‍ ನಿಯಂತ್ರಣ ಪ್ರಾಧಿಕಾರವು ನಿಗದಿ ಪಡಿಸಿದ ದರದಲ್ಲಿ ಖರೀದಿಸಲಾಗುವುದು ಎಂದು ಹೇಳಿದ್ದಾರೆ. ಬೆಂಗಳೂರಿನಲ್ಲಿ ಕಸ ವಿಲೇವಾರಿ ಭಾರೀ ಸಮಸ್ಯೆಯಾಗಿದೆ. ಅದರ ನಿವಾರಣೆಗೆ ಸಾಧ್ಯವಿರುವ ಎಲ್ಲಾ ಕ್ರಮಗಳನ್ನು ಕೈಗೊಳ್ಳುವುದಾಗಿ ಮುಖ್ಯಮಂತ್ರಿ ಭರವಸೆ ನೀಡಿದ್ದಾರೆ. ಸಚಿವರಾದ ರಾಮಲಿಂಗಾ ರೆಡ್ಡಿ, ಕೆ.ಜೆ.ಜಾರ್ಜ್‍, ಡಿ.ಕೆ.ಶಿವಕುಮಾರ್‍ ಮತ್ತಿತರರು ಈ ಸಭೆಯಲ್ಲಿ ಹಾಜರಿದ್ದರು.

No comments:

Post a Comment