ದೇಶದ ಬೆಳವಣಿಗೆಯಲ್ಲಿ ಸಾರಿಗೆ ವ್ಯವಸ್ಥೆಯು
ಮಹತ್ವದ ಪಾತ್ರವನ್ನು ವಹಿಸುತ್ತಿದೆ. ಅದರಲ್ಲಿ ಭೂ ಸಾರಿಗೆಯು ಅತ್ಯಂತ ಮುಖ್ಯವಾಗಿದ್ದು ಮೋಟಾರು
ವಾಹನಗಳು ಅದರ ಪ್ರಮುಖ ಅಂಗವಾಗಿವೆ.ಈ ವಾಹನಗಳನ್ನು ಚಾಲನೆ ಮಾಡಲು ನಿಪುಣರಾದ ಚಾಲಕರ ಅಗತ್ಯ
ಬಹಳಷ್ಟಿದೆ. ವಾಹನಗಳ ಸಂಖ್ಯೆ ಹೆಚ್ಚಿದಂತೆ ರಸ್ತೆ ಅಪಘಾತಗಳ ಸಂಖ್ಯೆಯೂ
ಹೆಚ್ಚುತಿದ್ದು, ಅವುಗಳಿಂದ ಆಗುತ್ತಿರುವ ಜೀವ ಮತ್ತು ಆಸ್ತಿಹಾನಿಯಿಂದ ತೀವ್ರ
ಹಿನ್ನೆಡೆಯಾಗುತ್ತಿದೆ. ಮೋಟಾರು ವಾಹನ ಕಾಯಿದೆ, ರಸ್ತೆ
ಸುರಕ್ಷತಾ ನಿಯಮಗಳ ಕುರಿತು ಹೆಚ್ಚಿನ ಜ್ಞಾನಹೊಂದಿದ್ದು, ಅದನ್ನು
ಅಳವಡಿಸಿಕೊಂಡು ಶಿಸ್ತುಬದ್ಧವಾಗಿ ಚಾಲನೆಮಾಡಿ ಅಪಘಾತಗಳನ್ನು ಸಾಧ್ಯವಾದಷ್ಟು ತಡೆಯ ಬೇಕಾಗಿರುವುದು
ಚಾಲಕರ ಆದ್ಯ ಕರ್ತವ್ಯವಾಗಿದೆ.
ಮೊದಲೆಲ್ಲ ಚಾಲಕರಿಗೆ ವಾಹನವನ್ನು
ನಡೆಸುವುದು ಮತ್ತು ನಿಯಂತ್ರಿಸುವುದು ತಿಳಿದಿದ್ದರೆ ಸಾಕಾಗುತ್ತಿತ್ತು. ಆದರೆ
ಇಂದಿನ ದಿನಗಳಲ್ಲಿ ರಸ್ತೆ ಮೇಲೆ ವಾಹನಗಳ ದಟ್ಟಣೆ ಮತ್ತು ಅವುಗಳ ವೇಗ ಹೆಚ್ಚುತ್ತಿದ್ದು, ವಾಹನವು
ಎಷ್ಟೇ ಸುರಕ್ಷಿತ ಮತ್ತು ವಿಶ್ವಾಸಾರ್ಹ ವಾಗಿದ್ದರೂ ಚಾಲಕನಾದವನಿಗೆ ಹೆಚ್ಚಿನ ಕುಶಲತೆ ಹೊಂದಿರ ಬೇಕಾಗಿರುವುದು
ಅತ್ಯಗತ್ಯವಾಗಿರುತ್ತದೆ.
ಚಾಲಕರಿಗೆ ಕಾಲಕ್ರಮೇಣ ವಾಹನ ಚಲಿಸುವ
ಅನುಭವ, ಕುಶಲತೆ ತಾನಾಗಿಯೇ ಕರಗತ ವಾಗುತ್ತವೆ.ಆದರೆ
ಉತ್ತಮ ಚಾಲಕನಾಗಲು ಇನ್ನೂ ಹೆಚ್ಚಿನ ಗುಣಗಳನ್ನು ಹೊಂದಿರ ಬೇಕಾಗುತ್ತದೆ. ಚಾಲಕನಾದವನು
ತನ್ನ ಮತ್ತು ತನ್ನ ವಾಹನದಲ್ಲಿರುವ ಪ್ರಯಾಣಿಕರ ಸುರಕ್ಷತೆಯ ಬಗ್ಗೆ ಮಾತ್ರ ಕಾಳಜಿ ಹೊಂದಿದ್ದರೆ ಸಾಲದು. ಪಾದಚಾರಿಗಳು
ಸೇರಿದಂತೆ ರಸ್ತೆಯನ್ನು ಬಳಸುತ್ತಿರುವ ಪ್ರತಿಯೊಬ್ಬರ ಬಗ್ಗೆಯೂ ಅಷ್ಟೇ ಕಾಳಜಿಯನ್ನು ಹೊಂದಿರಬೇಕು. ಪ್ರತಿಯೊಂದು
ಘಳಿಗೆಯೂ ಬದಲಾಗುತ್ತಿರುವ ಸಾರಿಗೆ ಪರಿಸ್ಥಿತಿಯ ಮೇಲೆ ಆತನು ಗಮನವಿಟ್ಟಿದ್ದಾಗ ಮಾತ್ರ ಅದು ಸಾಧ್ಯವಾಗುತ್ತದೆ. ತಾನೇನು
ಮಾಡಬೇಕು ಎಂಬುದನ್ನು ಮುಂಚಿತವಾಗಿಯೇ ಯೋಚಿಸಿದರೆ ಇತರರಿಗೆ ತೊಂದರೆ ಅಥವಾ ಅಪಾಯ ವಾಗುವುದನ್ನು ತಪ್ಪಿಸಬಹುದಾಗಿದೆ. ಚಾಲಕರಿಗೆ
ಏಕಾಗ್ರತೆ ಇರಬೇಕೆನ್ನುವುದು ಬಹುಮುಖ್ಯ ಅಂಶವಾಗಿರುತ್ತದೆ. ಆತನು
ಒಂದು ಕ್ಷಣ ತನ್ನಗಮನವನ್ನು ಬೇರೆಕಡೆ ತಿರುಗಿಸಿದರೂ ಅನಾಹುತ ಸಾಧ್ಯತೆಯಿದೆ. ಆತನ
ದೇಹದ ಆರೋಗ್ಯ ಸರಿಯಿಲ್ಲದಿದ್ದರೆ, ಕೆಲಸದ ಒತ್ತಡದಿಂದ ದಣಿದಿದ್ದರೆ, ಸರಿಯಾಗಿ
ನಿದ್ದೆ ಮಾಡಿಲ್ಲದಿದ್ದರೆ, ಮಾನಸಿಕ ಒತ್ತಡ, ಉದ್ವೇಗ
ಅಥವಾ ಖಿನ್ನತೆಯಿಂದ ಬಳಲುತ್ತಿದ್ದರೆ ಪ್ರತಿಕ್ರಿಯಿಸುವುದು ತಡವಾಗಿ ಅಪಾಯಕ್ಕೆ ದಾರಿಯಾದೀತು. ಅಂತಹ
ಸಂದರ್ಭಗಳಲ್ಲಿ ಚಾಲನೆ ಮಾಡದಿರುವುದೇ ಒಳ್ಳೆಯದು.
ಚಾಲಕರು ತಾವು ಮಾತ್ರ ನಿಯಮಗಳನ್ನು
ಪಾಲನೆ ಮಾಡಿ ಜಾಗರೂಕತೆಯಿಂದ ಚಾಲನೆ ಮಾಡಿದರಷ್ಟೇ ಸಾಲದು. ಇತರರು
ಏನು ಮಾಡುತ್ತಿದ್ದಾರೆ ಎಂಬುದನ್ನು ಗಮನಿಸಿ ಅದಕ್ಕೆ ತಕ್ಕಂತೆ ತತ್ಕ್ಷಣ
ತಮ್ಮ ಕಾರ್ಯವಿಧಾನವನ್ನು ಬದಲಾಯಿಸುವ ಅಗತ್ಯವಿರುತ್ತದೆ. ಅನುಭವ
ಮತ್ತು ಮುಂದಾಲೋಚನೆ ಇದ್ದರೆ ಅಪಾಯ ವಾಗುವುದನ್ನು ಬಹಳಷ್ಟು ತಪ್ಪಿಸ ಬಹುದಾಗಿದೆ. ಇತರೆ
ವಾಹನದ ಚಾಲಕರು ತಪ್ಪು ಮಾಡಿದಾಗ ಅಥವಾ ವಾಹನ ದಟ್ಟಣೆ ಉಂಟಾದಾಗ ತಾಳ್ಮೆ ಕಳೆದುಕೊಳ್ಳಬಾರದು. ಅವರೊಂದಿಗೆ
ಜಗಳಕ್ಕಿಳಿಯುವುದು, ಚಾಲನೆಯಲ್ಲಿ ಪೈಪೋಟಿಗೆ ಇಳಿಯುವುದರಿಂದ ವಿವೇಚನೆ ತಪ್ಪಿ
ಅಪಘಾತಕ್ಕೆ ದಾರಿ ಮಾಡಿಕೊಡಬಹುದು. ಎಂತಹ ನುರಿತ ಚಾಲಕನಿಗಾಗಲಿ ಅತಿಯಾದ ಆತ್ಮವಿಶ್ವಾಸ ತರವಲ್ಲ. ಅದರಿಂದ
ಬೇಜವಾಬ್ದಾರಿಯುತ ಚಾಲನೆ ಮಾಡಿ ಅಪಾಯವನ್ನು ಎದುರಿಸ ಬೇಕಾದೀತು. ಚಾಲಕ
ನಾದವನು ವಾಹನದ ಎಲ್ಲ ಜಟಿಲ ವಿವರಗಳನ್ನು ತಿಳಿದುಕೊಂಡಿರುವ ಅವಶ್ಯಕತೆಯಿಲ್ಲ. ಆದರೆ
ವಾಹನದ ವಿವಿಧ ಭಾಗಗಳು ಹೇಗೆ ಕೆಲಸ ಮಾಡುತ್ತವೆ, ಅವುಗಳನ್ನು
ಬಳಸುವ ಮತ್ತು ನಿಯಂತ್ರಿಸುವ ಸಮರ್ಪಕ ವಿಧಾನವನ್ನು ಅರಿತು ಕೊಂಡಿರಬೇಕಾಗುತ್ತದೆ. ಹಾಗಿದ್ದಾಗ
ಮಾತ್ರ ಕ್ಲಿಷ್ಟಕರ ಸನ್ನಿವೇಶಗಳನ್ನು ನಿಭಾಯಿಸುವುದಲ್ಲದೆ ಸಂಭವಿಸ ಬಹುದಾದ ಅಪಘಾತಗಳನ್ನು ತಡೆದು
ಜನಸ್ನೇಹಿ ಚಾಲಕನಾಗಬಲ್ಲನು.
ಮೇಲಿನ ಎಲ್ಲ ಅಂಶಗಳು ಚಾಲನೆಯಲ್ಲಿ
ಪ್ರಾರಂಭದಿಂದಲೇ ಉತ್ತಮ ಶಿಕ್ಷಣವನ್ನು ಪಡೆದಿರುವುದನ್ನು ಅವಲಂಬಿಸಿರುತ್ತವೆ .ಸಾಮಾನ್ಯವಾಗಿ
ಬಂಧುಗಳಿಂದಲೋ, ಸ್ನೇಹಿತರಿಂದಲೋ ಅಥವಾ ವೃತಿಪರರಲ್ಲದ ತರಬೇತುದಾರರಿಂದಲೋ
ಕಡಿಮೆ ಅವಧಿಯಲ್ಲಿಯೇ ವಾಹನ ಚಾಲನೆ ಕಲಿತು ರಸ್ತೆಗಿಳಿಯುವವರೇ ಹೆಚ್ಚಾಗಿ ಕಂಡು ಬರುತ್ತದೆ. ಆದರೆ
ಉತ್ತಮ ಚಾಲಕರೆಲ್ಲರೂ ಉತ್ತಮ ಶಿಕ್ಷಕರಾಗ ಬೇಕೆಂದಿಲ್ಲ. ಅಂತಹವರಿಂದ
ಚಾಲನೆ ಕಲಿತವರು ಕೆಲವೊಂದು ಅನಿರೀಕ್ಷಿತ ಸಂದರ್ಭಗಳನ್ನು ಹೇಗೆ ನಿಭಾಯಿಸ ಬೇಕೆಂದು ತಿಳಿಯದೆ ಆತ್ಮವಿಶ್ವಾಸ
ಕಳೆದುಕೊಳ್ಳುವ ಸಾಧ್ಯತೆ ಹೆಚ್ಚಿರುತ್ತದೆ. ವೃತ್ತಿಪರರಲ್ಲದವರು ಕೊಡುವ ತರಬೇತಿ ಹೇಗಿರುತ್ತದೆಂದರೆ
ಅವರು ನಡೆಯುವ ಮೊದಲೇ ಓಡುವುದನ್ನು ಕಲಿಸಿರುತ್ತಾರೆ. ಅದರಿಂದ ಭವಿಷ್ಯದಲ್ಲಿ ಸಂಕಷ್ಟವನ್ನು ಎದುರಿಸ ಬೇಕಾದೀತು. ಚಾಲನೆ
ತರಬೇತಿ ಪಡೆಯುವ ಮುಂಚೆ ಈ ಅಂಶವನ್ನು ಗಮನದಲ್ಲಿ ಇರಿಸಿಕೊಳ್ಳುವುದು ಒಳ್ಳೆಯದು.
No comments:
Post a Comment