Friday, November 20, 2015

ಸ್ಟೀವಿಯಾ ಬೆಳೆಯಿಂದ ರೈತರ ಬಾಳಿಗೆ ಸಿಹಿ


                                                         ಭಾರತ ಕೃಷಿ ಪ್ರಧಾನ ದೇಶವಾಗಿದ್ದು ಶೇ.70ರಷ್ಟು ಜನರು ಪ್ರತ್ಯಕ್ಷವಾಗಿ, ಪರೋಕ್ಷವಾಗಿ ಕೃಷಿ ಮತ್ತು ಕೃಷಿ ಆಧಾರವಾಗಿ ಜೀವನ ಸಾಗಿಸುತ್ತಿದ್ದಾರೆ. ಆದರೆ ನೀರಾವರಿ ಸೌಲಭ್ಯವಿಲ್ಲದೆ ಹೆಚ್ಚಿನ ರೈತರು ಮಳೆಯಾಶ್ರಿತ ಬೆಳೆಗಳನ್ನು ಬೆಳೆಯುತ್ತಿದ್ದು ಸಕಾಲದಲ್ಲಿ ಮಳೆ ಬಾರದೆ ಹೋದಲ್ಲಿ ನಷ್ಟ ಹೊಂದುತ್ತಿದ್ದಾರೆ. ಒಂದುವೇಳೆ ಎಲ್ಲ ಅನುಕೂಲಗಳಿದ್ದರೂ ಯಾವ ಬೆಳೆಯನ್ನು ಬೆಳೆಯುವುದು, ಅದರ ವಿಧಾನ ಏನು, ಬಂದ ಬೆಳೆಯನ್ನು ಎಲ್ಲಿ ಮಾರಾಟ ಮಾಡಬೇಕು, ಅದಕ್ಕೆ ದೊರೆಯಬಹುದಾದ ಬೆಲೆ ಎಷ್ಟು ಎಂಬುದರ ಮಾಹಿತಿ ಇಲ್ಲದೆ ತೊಂದರೆಯನ್ನು ಅನುಭವಿಸುತ್ತಿದ್ದಾರೆ. ಉತ್ತಮ ಬೆಳೆ ಬಂದರೂ ವ್ಯಾಪಾರಿಗಳು, ದಲ್ಲಾಳಿಗಳ ಕೈಚಳಕದಿಂದ ಅದಕ್ಕೆ ತಕ್ಕ ಬೆಲೆ ಸಿಗದೆ ಕೈ ಸುಟ್ಟುಕೊಳ್ಳುತ್ತಿದ್ದಾರೆ. ಹೀಗಾಗಿ ಸಾಲದ ಸುಳಿಗೆ ಸಿಲುಕಿ , ಅದರಿಂದ ಹೊರಬರುವ ದಾರಿ ಕಾಣದೆ ಪ್ರತಿವರ್ಷ ಸಾವಿರಾರು ಸಂಖ್ಯೆಯಲ್ಲಿ ರೈತರು ಆತ್ಮಹತ್ಯೆಗೆ ಶರಣಾಗುತ್ತಿದ್ದಾರೆ. ಇಂತಹ ಪರಿಸ್ಥಿತಿಗಳಲ್ಲಿ ಕೃಷಿಯನ್ನು ಲಾಭದಾಯಕವನ್ನಾಗಿಸಿ ರೈತರ ಬಾಳಿನಲ್ಲಿ ಸಿಹಿಯನ್ನು ತುಂಬಲು ಬಂದಿದೆ ಸ್ಟೀವಿಯಾ!.
        ಇದೇ ವೇಳೆ ಭಾರತವನ್ನು ಮಧುಮೇಹ(ಸಕ್ಕರೆ ಕಾಯಿಲೆ)ದ ರಾಜಧಾನಿ ಎಂದು ಹೇಳಲಾಗುತ್ತಿದ್ದು ಆತಂಕ ತರುವ ರೀತಿಯಲ್ಲಿ ಈ ಕಾಯಿಲೆಯು ವಿಸ್ತರಿಸುತ್ತಿದೆ. ಆಧುನಿಕ ಜೀವನ ಶೈಲಿಯಿಂದ ಕೊಡುಗೆಯಾಗಿ ಬಂದಿರುವ ಈ ಪಿಡುಗಿನಿಂದಾಗಿ ವಿಶ್ವದಾದ್ಯಂತ ಇಂದು ಸುಮಾರು 34ಕೋಟಿ, ಭಾರತದಲ್ಲಿ 6ಕೋಟಿಗೂ ಹೆಚ್ಚು ಜನರು ಬಳಲುತ್ತಿದ್ದಾರೆ. ಚಿಕ್ಕವಯಸ್ಸಿನ ಮಕ್ಕಳಿಂದ ಹಿಡಿದು ಯುವಕರು, ವಯೋವೃದ್ಧರನ್ನು ಕಾಡುತ್ತಿರುವ ಸಕ್ಕರೆ ಕಾಯಿಲೆಯಿಂದಾಗಿ ನಮ್ಮ ದೇಶದಲ್ಲಿ ಪ್ರತಿವರ್ಷ ಸುಮಾರು 10ಲಕ್ಷ ಮಂದಿ ಸಾವಿಗೀಡಾಗುತ್ತಿದ್ದಾರೆ. ಒಮ್ಮೆ ಈ ರೋಗಕ್ಕೆ ತುತ್ತಾದವರು ಸಿಹಿಯನ್ನು ದೂರವಿರಿಸಿ ಬಾಳೆಲ್ಲಾ ಕಹಿಯ ಅನುಭವದಿಂದ ನರಳಬೇಕಾಗಿರುವುದು ಮತ್ತಷ್ಟು ಖೇದ ತರುವ ಸಂಗತಿಯಾಗಿದೆ. ಅಂತಹವರಿಗೆ ಅತ್ಯುತ್ತಮ ಪರ್ಯಾಯ ಸಿಹಿಪದಾರ್ಥವಾಗಿ ಮತ್ತು ಸಕ್ಕರೆ ಕಾಯಿಲೆ, ಸ್ಥೂಲಕಾಯಗಳಿಂದ ದೂರವಿರಲು ಬಯಸುವವರಿಗಾಗಿ ಸ್ಟೀವಿಯಾ ವರದಾಯಿನಿಯಾಗಿದೆ.
          ದಕ್ಷಿಣ ಅಮೆರಿಕದ ಪೆರುಗ್ವೆ ದೇಶದ ಸ್ಟೀವಿಯಾವನ್ನು ಭಾರತದಲ್ಲಿ ಸಿಹಿ ತುಳಸಿ ಅಥವಾ ಮಧು ತುಳಸಿ ಎಂದೂ ಕರೆಯುತ್ತಾರೆ. ಬಹುವಾರ್ಷಿಕ ಬೆಳೆಯಾದ ಸ್ಟೀವಿಯಾ ಸದಾಕಾಲ ಬೆಳೆಯುವ ಉಪೋಷ್ಣ ಗಿಡವಾಗಿದ್ದು ಇದರ ಎಲೆಗಳಲ್ಲಿ ಸ್ಟೀವಿಯಾಲ್ ಗ್ಲೈಕೋಸೈಡ್ ಎಂಬ ಸಿಹಿಯನ್ನು ಉತ್ಪತ್ತಿ ಮಾಡುತ್ತದೆ. ಕ್ಯಾಲರಿ, ಕಾರ್ಬೋಹೈಡ್ರೇಟ್ ಮತ್ತು ಗ್ಲೈಸೇಮಿಕ್ ಸೂಚ್ಯಾಂಕ ರಹಿತವಾದ ಇದು ಆರೋಗ್ಯಕರ ಸಿಹಿಯಾಗಿದ್ದು ಇದನ್ನು ಬಿಸಿ ಮತ್ತು ತಣ್ಣನೆಯ ಪಾನೀಯಗಳು, ಖಾದ್ಯ ಮತ್ತು ಬೇಕಿಂಗ್ ಪದಾರ್ಥಗಳು, ಸಿಹಿತಿಂಡಿಗಳು, ಐಸ್‍ಕ್ರೀಂಗಳು ಮತ್ತು ಮಿಠಾಯಿಗಳಲ್ಲಿ ಬಳಸಬಹುದಾಗಿದೆ.
         ಸಮ ಶೀತೋಷ್ಣ ವಾತಾವರಣ ಇರುವ ಪ್ರದೇಶಗಳಲ್ಲಿ ಕಡಿಮೆ ನೀರಿನ ಬಳಕೆಯೊಂದಿಗೆ ಬೆಳೆಯಬಹುದಾದ, ರಾಸಾಯನಿಕ ಗೊಬ್ಬರಗಳ ಬಳಕೆ ಅಗತ್ಯವಿಲ್ಲದ ಮತ್ತು ಕಡಿಮೆ ಮಾನವ ಶಕ್ತಿಯ ಅವಶ್ಯಕತೆ ಇರುವ ಸ್ಟೀವಿಯಾ ಸಾಗುವಳಿಯಿಂದ ರೈತರು ಪ್ರತಿ ಎಕರೆಗೆ ವಾರ್ಷಿಕ ರೂ. 1 ಲಕ್ಷಕ್ಕೂ ಹೆಚ್ಚು ಆದಾಯ ಗಳಿಸಲು ಸಾಧ್ಯವಾಗಲಿದೆ.
       ರೈತರಿಗೆ ಲಾಭದಾಯಕವಾದ ಸ್ಟೀವಿಯಾ ಬೆಳೆಯನ್ನು ಪರಿಚಯಿಸಲು ಬೆಂಗಳೂರು ಮೂಲದ ಸ್ಟೀವಿಯಾ ವಲ್ರ್ಡ್ ಆಗ್ರೋಟೆಕ್ ಪ್ರೈವೇಟ್ ಲಿಮಿಟೆಡ್ ಕಂಪನಿಯು ತನ್ನ ಎರಡು ವರ್ಷಗಳ ಸತತ ಪರಿಶ್ರಮ ಮತ್ತು ಸಂಶೋಧನೆಗಳಿಂದ ರೈತರಿಗೆ ನೆರವಾಗಲು ಮುಂದೆ ಬಂದಿದೆ. ಸ್ಟೀವಿಯಾ ಸಾಗುವಳಿ, ಸಂಸ್ಕರಣೆ, ಉತ್ಪನ್ನಗಳ ಅಭಿವೃದ್ಧಿ ಮತ್ತು ಮಾರುಕಟ್ಟೆಯ ವಿಸ್ತರಣೆ ಸಂಸ್ಥೆಯ ಗುರಿಯಾಗಿದ್ದು ಪ್ರಧಾನಮಂತ್ರಿ ನರೇಂದ್ರ ಮೋದಿಯವರ ಸಂಕಲ್ಪದಂತೆ ಸ್ವಸ್ಥ ಭಾರತದ ನಿರ್ಮಾಣದಲ್ಲಿ ಭಾಗಿಯಾಗುವುದು ನಮ್ಮ ಆಶಯವಾಗಿದೆ ಎನ್ನುತ್ತಾರೆ ಸಂಸ್ಥೆಯ ನಿರ್ದೇಶಕರಾಗಿರುವ ಮಂಜುನಾಥ ಮಂಡಿಕಲ್ ಮತ್ತು ರಂಗನಾಥ್ ಕ್ರಿಷ್ಣನ್.
        ಸ್ಟೀವಿಯಾ ಕೃಷಿಗಾಗಿ ಸಂಸ್ಥೆಯು ತನ್ನದೇ ಹೊಲಗಳನ್ನು ಹೊಂದಿದೆ ಮತ್ತು ತನ್ನ ಯೋಜನೆಗಳನ್ನು ತ್ವರಿತಗತಿಯಲ್ಲಿ ಅನುಷ್ಟಾನಕ್ಕೆ ತರಲು ಮತ್ತು ದಿನೇದಿನೇ ಹೆಚ್ಚುತ್ತಿರುವ ಬೇಡಿಕೆಯನ್ನು ಪೂರೈಸುವ ಸಲುವಾಗಿ ಪ್ರಗತಿಪರ ರೈತರಿಗೆ ಗುತ್ತಿಗೆ ಬೇಸಾಯದ ಅವಕಾಶಗಳನ್ನೂ ನೀಡುತ್ತಿದೆ. ರೈತರಿಗೆ ಉತ್ತಮವಾದ ತಳಿಗಳನ್ನು ಸರಬರಾಜು ಮಾಡಿ, ತರಬೇತಿ ಹಾಗೂ ಕಾಲಕಾಲಕ್ಕೆ ಸಸ್ಯಗಳ ನಿರ್ವಹಣೆ ಕುರಿತಂತೆ ಸಲಹೆ ಸೂಚನೆಗಳನ್ನು ನೀಡುವುದರ ಜೊತೆಗೆ ಉತ್ತಮ ಗುಣಮಟ್ಟದ ಬೆಳೆಯನ್ನು ಪೂರ್ವ ನಿಗದಿತ ಬೆಲೆಗೆ ತಾನೇ ಖರೀದಿ ಮಾಡುವ ಭರವಸೆಯನ್ನೂ ನೀಡುತ್ತದೆ.
         ಸ್ಟೀವಿಯಾ ಬೆಳೆಗೆ ಉತ್ತಮ ನೀರು ಸರಬರಾಜು ಹಾಗೂ ಸಾವಯವ ಪದಾರ್ಥಗಳನ್ನು ಒಳಗೊಂಡ ಮರಳು ಮಿಶ್ರಿತ ಕೆಂಪು ಮಣ್ಣು ಉತ್ತಮವಾಗಿರುತ್ತದೆ. ಲವಣಯುಕ್ತ ಹಾಗೂ ನೀರು ನಿಲ್ಲುವ ಜೇಡಿ ಮಣ್ಣು ಇದಕ್ಕೆ ಸೂಕ್ತವಲ್ಲ. 25 ರಿಂದ 35 ಡಿಗ್ರಿ ಉಷ್ಣಾಂಶದ ಹವಾಮಾನವಿದ್ದು, ಉತ್ತಮ ಬೆಳಕು ಮತ್ತು ಬೆಚ್ಚಗಿನ ತಾಪಮಾನದಲ್ಲಿ ಹೆಚ್ಚು ಇಳುವರಿಯನ್ನು ನೀಡುವ ಈ ಬೆಳೆಗೆ ಹನಿ ನೀರಾವರಿ ಅಥವಾ ತುಂತುರು ನೀರಾವರಿಯ ವ್ಯವಸ್ಥೆಯನ್ನು ಮಾಡಿದರೆ ಇನ್ನಷ್ಟು ಉತ್ತಮ ಫಲಿತಾಂಶವನ್ನು ಕಾಣಬಹುದಾಗಿದೆ.
ಸಾಗುವಳಿ ವಿಧಾನ
       ಸ್ಟೀವಿಯಾ ಬೆಳೆಯುವ ಮೊದಲು ಮಣ್ಣು, ನೀರಿನ ಪರೀಕ್ಷೆ ಅಗತ್ಯವಾಗಿರುತ್ತದೆ. ಪ್ರಾರಂಭದಲ್ಲಿ ಭೂಮಿಯನ್ನು ಎರಡುಬಾರಿ ಆಳವಾಗಿ ಉಳುಮೆಮಾಡಿ ಕುಂಟೆ ಹೊಡೆಯಬೇಕು. ಕೊನೆಯಸಲ ಉಳುವಾಗ ಎಕರೆಗೆ ಸುಮಾರು ಅರ್ಧ ಟನ್‍ನಷ್ಟು ಸಾವಯವ ಗೊಬ್ಬರ ಹಾಕಬೇಕು. ಗೊಬ್ಬರವನ್ನು ಮಣ್ಣಿನೊಂದಿಗೆ ಚೆನ್ನಾಗಿ ಬೆರೆಯುವಂತೆ ಮಾಡಿ ಕಾಲುವೆಗಳನ್ನು ಮಾಡಿ ಭೂಮಿಯನ್ನು ಅನುಕೂಲಕರವಾದ ಅಳತೆಯಲ್ಲಿ ವಿಭಜನೆ ಮಾಡಬೇಕು. ಎತ್ತರಿಸಿದ ಪಾತಿಗಳು ಸ್ಟೀವಿಯಾ ಬೆಳೆಯಲು ಬಹಳ ಮಿತವ್ಯಯದ ವಿಧಾನ.
       ಹೀಗೆ ಸಿದ್ಧಗೊಳಿಸಿದ ಭೂಮಿಯಲ್ಲಿ 2ಅಡಿ ಅಗಲ ಮತ್ತು ಅರ್ಧಅಡಿ ಎತ್ತರದ ಸಾಲುಗಳನ್ನು ಮಾಡಿ ಗಿಡದಿಂದ ಗಿಡಕ್ಕೆ ಅರ್ಧಅಡಿ ಅಂತರಕೊಟ್ಟು ಎರಡು ಸಾಲುಗಳಲ್ಲಿ ನಾಟಿ ಮಾಡಬೇಕು. ಜನವರಿ ಯಿಂದ ಏಪ್ರಿಲ್ ತಿಂಗಳುಗಳು ನಾಟಿಮಾಡಲು ಸೂಕ್ತವಾದ ಕಾಲವಾಗಿದ್ದು ಎಕರೆಗೆ ಸುಮಾರು 40ಸಾವಿರ ಸಸಿಗಳನ್ನು ನೆಡಬಹುದಾಗಿದೆ. ಬೇಸಿಗೆಯಲ್ಲಿ ದಿನಕ್ಕೆ ಒಂದುಸಲ, ಉಳಿಕೆ ಕಾಲಗಳಲ್ಲಿ 3 ರಿಂದ 5 ದಿನಗಳಿಗೊಮ್ಮೆ ನೀರು ಹರಿಸಬೇಕಾಗಿರುತ್ತದೆ.
         ಒಂದು ಸಲ ನಾಟಿಮಾಡಿದ ಗಿಡವು 5ವರ್ಷ ಇಳುವರಿ ನೀಡಲಿದ್ದು 90 ದಿನಗಳಲ್ಲಿ ಬೆಳೆ ಮೊದಲ ಕೊಯ್ಲಿಗೆ ಸಿದ್ಧವಾಗುತ್ತದೆ. ಗಿಡದ ಎಲೆಗಳು ಬಲಿತು ಹೂವು ಬಿಡುವ ಮುನ್ನ ಗಿಡಗಳನ್ನು ಭೂಮಿಯ ಮಟ್ಟದಿಂದ 2ರಿಂದ 3ಅಂಗುಲದಷ್ಟು ಬುಡವನ್ನು ಬಿಟ್ಟು ಕತ್ತರಿಸಬೇಕು. ಒಂದು ವರ್ಷದಲ್ಲಿ ಒಟ್ಟು 4 ರಿಂದ 5 ಕೊಯ್ಲುಗಳನ್ನು ಮಾಡಬಹುದು. ಮೊದಲವರ್ಷ ಎಕರೆಗೆ ಸುಮಾರು 1.50ಟನ್, ಎರಡನೇ ವರ್ಷ ಸುಮಾರು 2.50ಟನ್, ಮೂರನೇ ವರ್ಷ ಸುಮಾರು 3.0ಟನ್, ನಾಲ್ಕನೇ ವರ್ಷ ಸುಮಾರು 2.50ಟನ್, ಐದನೇ ವರ್ಷ ಸುಮಾರು 2.0ಟನ್, ಹೀಗೆ ಒಟ್ಟಾಗಿ 11.50ಟನ್‍ಗಳಷ್ಟು ಇಳುವರಿಯನ್ನು(ಒಣಗಿದ ಎಲೆ) ಪಡೆಯಬಹುದಾಗಿರುತ್ತದೆ.
           ಪ್ರತಿ ಕಿಲೋಗ್ರಾಂ ಸ್ಟೀವಿಯಾ ಎಲೆಯನ್ನು ಅದರ ಗುಣಮಟ್ಟ ಆಧರಿಸಿ ರೂ.70 ರಿಂದ ರೂ.110 ವರೆಗೆ ಖರೀದಿ ಮಾಡುವುದಾಗಿ ಕರಾರಿನ ಮುಖಾಂತರ ತಮ್ಮ ಸಂಸ್ಥೆಯು ಭರವಸೆ ನೀಡುತ್ತದೆ ಎಂದು ಹೇಳುತ್ತಾರೆ ಮಂಜುನಾಥ ಮಂಡೀಕಲ್. ಈ ಬೆಳೆಯ ಸಾಗುವಳಿಗೆ ಮೊದಲಲ್ಲಿ ಎಕರೆಗೆ ಸುಮಾರು ರೂ.1.20 ಲಕ್ಷ ವೆಚ್ಚವಾಗಲಿದ್ದು ಅದರಲ್ಲಿ ಸುಮಾರು ರೂ.45ಸಾವಿರ ಸಬ್ಸೀಡಿಯನ್ನಾಗಿ ನೀಡಲು ಕೇಂದ್ರ ಸರ್ಕಾರದ ಅಧೀನ ಸಂಸ್ಥೆಯಾಗಿರುವ ರಾಷ್ಟ್ರೀಯ ಔಷಧೀಯ ಸಸ್ಯಗಳ ಮಂಡಳಿಯು ಮುಂದೆ ಬಂದಿದೆ. ಇದಲ್ಲದೆ ರೈತರನ್ನು ಪ್ರೋತ್ಸಾಹಿಸಲು ಸಂಸ್ಥೆಯ ವತಿಯಿಂದ ಎಕರೆಗೆ ರೂ.40ಸಾವಿರ ಮುಂಗಡವಾಗಿ ನೀಡಲಿದ್ದು ಅದನ್ನು ಬೆಳೆಯ ಖರೀದಿ ಸಮಯದಲ್ಲಿ ಹಿಂಪಡೆಯಲಿದೆ. ಹಾಗಾಗಿ ಈ ಬೆಳೆಯನ್ನು ಸಾಗುವಳಿ ಮಾಡುವುದು ಹೆಚ್ಚಿನ ಹೊರೆಯಾಗಲಾರದು ಎಂದು ಅವರು ತಿಳಿಸುತ್ತಾರೆ. ಎಕರೆಗೆ ವಾರ್ಷಿಕ ರೂ.1ಲಕ್ಷಕ್ಕೂ ಹೆಚ್ಚು ರೈತರಿಗೆ ಲಾಭ ಗಳಿಸ ಬಹುದಾಗಿದೆ ಎಂದವರು ತಿಳಿಸುತ್ತಾರೆ.
ಹೆಚ್ಚಿನ ಮಾಹಿತಿಗಾಗಿ 080-23621777,23625888 ಅಥವಾ www.ssteviaworld.com ಅನ್ನು ಸಂಪರ್ಕಿಸಬಹುದು.

ಹೊಸ ತಂತ್ರಜ್ಞಾನವನ್ನು ಕೃಷಿಯಲ್ಲಿ ಬಳಸುವಂತೆ ಕೃಷಿ ಸಚಿವ ಕೃಷ್ಣಭೈರೇಗೌಡ ಕರೆ

ಬೆಂಗಳೂರು, ನವೆಂಬರ್ 19: ರೈತರು ಹೊಸ ವೈಜ್ಞಾನಿಕ ವಿಧಿ ವಿಧಾನಗಳನ್ನು ಕೃಷಿಯಲ್ಲಿ ಅಳವಡಿಸಿ ಹೆಚ್ಚು ಉತ್ಪಾದನೆಗೆ ಒತ್ತು ನೀಡಬೇಕೆಂದು ಕೃಷಿ ಸಚಿವ ಕೃಷ್ಣ ಭೈರೇಗೌಡ ತಿಳಿಸಿದರು. ನಗರದ ಗಾಂಧಿ ಕೃಷಿ ವಿಜ್ಞಾನ ಕೇಂದ್ರ (ಜಿ.ಕೆ.ವಿ.ಕೆ.)ಯಲ್ಲಿ ಕೃಷಿ, ಜಲಾನಯನ, ತೋಟಗಾರಿಕೆ, ಅರಣ್ಯ, ರೇಷ್ಮೆ, ಪಶುಸಂಗೋಪನೆ, ಮೀನುಗಾರಿಕೆ, ಕೃಷಿ ಮಾರುಕಟ್ಟೆ, ಗ್ರಾಮೀಣಾಭಿವೃದ್ಧಿ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಗಳ ಹಾಗೂ ಕರ್ನಾಟಕ ಹಾಲು ಮಹಾಮಂಡಳಿ ವತಿಯಿಂದ ನವೆಂಬರ್ 19 ರಿಂದ 22 ರವರೆಗೆ ಹಮ್ಮಿಕೊಳ್ಳಲಾಗಿರುವ ಕೃಷಿ ಮೇಳ -2015 ರ ಉದ್ಘಾಟನಾ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
        ಈ ವರ್ಷ ದಕ್ಷಿಣ ಭಾಗದ ಜಿಲ್ಲೆಗಳಾದ ಕೋಲಾರ, ಚಿಕ್ಕಬಳ್ಳಾಪುರ, ತುಮಕೂರು, ಚಾಮರಾಜನಗರ, ಚಿತ್ರದುರ್ಗ ಮಂಡ್ಯ ಜಿಲ್ಲೆಗಳು ಬರದಿಂದ ತತ್ತರಿಸಿವೆ. ಉತ್ತರ ಭಾಗದ ಜಿಲ್ಲೆಗಳಲ್ಲೂ ಬರ ತಲೆದೋರಿದೆ. ಈ ಹತ್ತು ದಿನಗಳಲ್ಲಿ ಸುರಿದ ಹಿಂಗಾರು ಮಳೆಯಿಂದ ನೀರಿನ ಕೊರತೆ ಸ್ವಲ್ಪ ಮಟ್ಟಿಗೆ ನೀಗಿದರೂ ಮಳೆಯಿಂದ ಬೆಳೆ ನಾಶ ಕೂಡ ಸಂಭವಿಸಿದೆ ಎಂದರು.
ಮುಂದುವರೆದ ದೇಶಗಳು ಉತ್ಪಾದನೆ, ಉತ್ಪಾದಕತೆ ಎರಡಕ್ಕೂ ಒತ್ತು ನೀಡುತ್ತಿವೆ. ಈಗ ಸ್ವಯಂ ಚಾಲಿತ ಕಾರುಗಳು ಮಾರುಕಟ್ಟೆಗೆ ಬಂದಿದೆ. ಹಸಿರು ಮನೆಯಲ್ಲಿ ವಿದ್ಯುತ್ ದೀಪದ ಬಳಕೆಯನ್ನು ಕಂಡುಕೊಂಡಿದ್ದೇವೆ. ವಿಜ್ಞಾನ ತಂತ್ರಜ್ಞಾನದ ಹೊಸ ಆವಿಷ್ಕಾರಗಳಿಂದ ನಾವು ಸಮಸ್ಯೆಗಳನ್ನು ಬಗೆಹರಿಸಬೇಕು. ಹೊಸ ತಂತ್ರಜ್ಞಾನವನ್ನು ರೈತರಿಗೆ ತಲುಪಿಸಿ ಅವರು ಬಳಸುವಂತೆ ಮಾಡಬೇಕೆಂದರು.
        ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ರಾಜ್ಯಪಾಲರಾದ ವಾಜುಭಾಯಿ ರೂಢಾಬಾಯಿ ವಾಲಾ, ಜ್ಞಾನ ಮತ್ತು
ಈ ಸಂದರ್ಭದಲ್ಲಿ ದಿವಂಗತ ಸಿ. ಭೈರೇಗೌಡ ರಾಜ್ಯ ಮಟ್ಟದ ರೈತ ಪ್ರಶಸ್ತಿಯನ್ನು ಹಾವೇರಿಯ ಹಾನಗಲ್ ತಾಲ್ಲೂಕಿನ ಕಾಮನಹಳ್ಳಿಯ ಪ್ರಗತಿ ರೈತ ಮುತ್ತಣ್ಣ ಬೀರಪ್ಪ ಪೂಜಾರ ಅವರಿಗೆ ಪ್ರದಾನ ಮಾಡಲಾಯಿತು. ಇವರು ಕುರಿ, ಮೇಕೆ ಸಾಕಾಣಿಕೆ, ಇತರ ಕೃಷಿ ಚಟುವಟಿಕೆಗಳಲ್ಲಿ ತೊಡಗಿಕೊಂಡಿದ್ದಾರೆ. ಡಾ: ಎಂ.ಎಚ್. ಮರೀಗೌಡ ರಾಜ್ಯಮಟ್ಟದ ತೋಟಗಾರಿಕಾ ರೈತ ಪ್ರಶಸ್ತಿಯನ್ನು ಹಾಸನ ಜಿಲ್ಲೆ ಸಕಲೇಶಪುರದ ಹಂಜುಗೋಡನಹಳ್ಳಿಯ ಕಾಫಿ ಬೆಳೆಗಾರರಾದ ಪ್ರಗತಿಪರ ರೈತ ಎಚ್.ಎಲ್. ನರೇಶ್ ಅವರಿಗೆ ಹಾಗೂ ಹಾವೇರಿಯ ಶಿಗ್ಗಾಂನ ಇಬ್ರಾಹಿಂಪುರದ ಪ್ರಗತಿಪರ ರೈತ ಸಿದ್ಧಲಿಂಗೇಶ್ವರ ವೀರಪ್ಪ ಕಲಿವಾಳ (ಅಡಿಕೆ, ತೆಂಗು ಬೆಳೆಗಾರರು) ಅವರಿಗೆ ಪ್ರದಾನ ಮಾಡಲಾಯಿತು.
       ಕಾರ್ಯಕ್ರಮದಲ್ಲಿ ಕೃಷಿ ವಿಶ್ವವಿದ್ಯಾನಿಲಯದ ಕುಲಪತಿಗಳಾದ ಡಾ: ಹೆಚ್. ಶಿವಣ್ಣ ಗಣ್ಯರನ್ನು ಸ್ವಾಗತಿಸಿದರು. ಶಾಸಕರು ಜಗಳೂರು ಹಾಗೂ ವಿಶ್ವವಿದ್ಯಾಲಯ ವ್ಯವಸ್ಥಾಪನಾ ಮಂಡಳಿ ಸದಸ್ಯರು ಕೃಷಿ ವಿಶ್ವವಿದ್ಯಾಲಯ ಎಚ್.ಪಿ. ರಾಜೇಶ್, ಕೃಷಿ ಇಲಾಖೆಯ ನಿರ್ದೇಶಕರಾದ ಡಾ: ಸಿ ಎನ್.ಸ್ವಾಮಿ ಕೃಷಿ ವಿಶ್ವವಿದ್ಯಾಲಯದ ವಿಸ್ತರಣಾ ನಿರ್ದೇಶಕರಾದ ಡಾ: ಕೆ. ಜಗದೀಶ್ವರ ಉಪಸ್ಥಿತರಿದ್ದರು. ರಾಜ್ಯದ ವಿವಿದೆಡೆಯಿಂದ ಜನರು, ಕೃಷಿಕರು ಕೃಷಿಮೇಳಕ್ಕೆ ಬಂದು ಇಲ್ಲಿನ ವಿವಿಧ ಸ್ಟಾಲ್‍ಗಳನ್ನು ವೀಕ್ಷಿಸಿ ಮಾಹಿತಿ ಪಡೆದುಕೊಂಡರು.
       ತಂತ್ರಜ್ಞಾನ, ಇವರೆಡೂ ಕೃಷಿಕರನ್ನು ತಲುಪಬೇಕು. ದೇಶದಲ್ಲಿ ಶೇ. 65 ರಷ್ಟು ಜನ ಜೀವನೋಪಾಯಕ್ಕೆ ಕೃಷಿಯನ್ನು ಅವಲಂಭಿಸಿದ್ದಾರೆ. ಈಗ ಕೃಷಿಯನ್ನು ವಿವಿಧ ಕಂಪನಿಗಳು ಜಂಟಿ ಸಹಭಾಗಿತ್ವದಲ್ಲಿ ನಡೆಸುತ್ತಿದೆ. ಕರ್ನಾಟಕದಲ್ಲಿ ಕಾವೇರಿ, ತುಂಗಭದ್ರದಂತಹ ನದಿಗಳು ಹರಿದು ನೆಲದ ಸಿರಿಯನ್ನು ಹೆಚ್ಚಿಸಿದೆ. ಆದರೂ ರಾಜ್ಯಗಳ ನಡುವೆ ನೀರಿನ ಹಂಚಿಕೆ ವಿವಾದ ಬಗೆಹರಿದಿಲ್ಲ. ರೈತರು ಬೆಳೆ ನಷ್ಟದ ಬಗ್ಗೆ ಧೃತಿಗೆಡದೆ, ಯಾವ ಬೆಳೆಗೆ ಹೆಚ್ಚು ಬೇಡಿಕೆ, ಲಾಭ ದೊರೆಯುತ್ತದೆ, ಅಂತಹ ಬೆಳೆಯನ್ನು ಬೆಳೆಯುವುದು ಒಳಿತು. ಗಾಂಧಿ ಕೃಷಿ ವಿಜ್ಞಾನ ಕೇಂದ್ರದಲ್ಲಿ ಈ ನಾಲ್ಕು ದಿವಸಗಳ ಕೃಷಿ ಮೇಳದಲ್ಲಿ ಹೆಚ್ಚು ಜನರು ಭಾಗವಹಿಸಬೇಕೆಂದರು.

Thursday, November 19, 2015

ಸನ್ನಡತೆಯಿಂದ ಜೀವನಕ್ಕೆ ಪರಮಾರ್ಥ: ಶಾಸಕ ಸುಧಾಕರ್


ಚಿಕ್ಕಬಳ್ಳಾಪುರ, ನವಂಬರ್ 19: ವರ್ತಮಾನದ ಮಾನವ ಸಮಾಜ ಸರ್ವರೀತಿಯಲ್ಲೂ ಆಧುನಿಕ ಸೌಲಭ್ಯಗಳನ್ನು ಬಳಸಿಕೊಂಡು ಪ್ರಪಂಚವನ್ನು ಕಿರಿದಾಗಿಸಿದೆ. ಆದರೆ ಎಲ್ಲ ರೀತಿಯ ಅನುಕೂಲತೆಗಳಿದ್ದರೂ ಯಾರೊಬ್ಬರ ಮುಖದಲ್ಲೂ ಸಹಜ ಮುಗುಳ್ನಗೆ ಆಗಲಿ, ಆಂತರಂಗಿಕ ತೃಪ್ತಿಯಾಗಲಿ ಕಂಡು ಬರುತ್ತಿಲ್ಲ. ಕಾರಣ ನಮ್ಮ ಸಂಸ್ಕಾರ, ಸಂಸ್ಕೃತಿಯನ್ನು ಬದಿಗೆ ಸರಿಸಿ ಸ್ವೇಚ್ಚಾಚಾರದ ಜೀವನಕ್ಕೆ ಮಾರುಹೋಗಿ ತಮ್ಮತನವನ್ನು ಕಳೆದುಕೊಂಡಿರುವುದೇ ಆಗಿದೆ. ಇದರಿಂದ ಜೀವನವು ಯಾಂತ್ರಿಕವಾಗಿಯೂ, ಕೃತ್ರಿಮತೆಯಿಂದ ಕೂಡಿರುವುದಾಗಿಯೂ ಆಗಿದೆ. ಅದರಿಂದ ಹೊರ ಬರಬೇಕಾದರೆ ಸಕಾಲದ ಬೋಧನೆ, ಗುರುಹಿರಿಯರಿಗೆ ಗೌರವ, ಸದ್ಭೋಧೆಗಳ ಅಳವಡಿಕೆಯಿಂದ ಜೀವನದಲ್ಲಿ ಅರ್ಥವನ್ನು ಕಂಡುಕೊಳ್ಳ ಬಹುದು ಎಂದು ಸ್ಥಳೀಯ ಶಾಸಕರಾದ ಡಾ. ಕೆ.ಸುಧಾಕರ್ ಅಭಿಪ್ರಾಯ ಪಟ್ಟಿದ್ದಾರೆ.
     ಮುದ್ದೇನಹಳ್ಳಿಯ ಸತ್ಯಸಾಯಿ ಗ್ರಾಮದಲ್ಲಿ ನಡೆಯುತ್ತಿರುವ ಜಾಗತಿಕ ಮಟ್ಟದ ಯುವಜನ ಮೇಳದಲ್ಲಿ ಇಂದು ಸಂಜೆ ಏರ್ಪಡಿಸಲಾಗಿದ್ದ ಮಹಿಳಾದಿನದ ಕಾರ್ಯಕ್ರಮದಲ್ಲಿ ಕರ್ನಾಟಕ ಸರ್ಕಾರದ ಗೃಹ ಸಚಿವ ಜಿ.ಪರಮೇಶ್ವರ್ ಅವರ ಪರವಾಗಿ ಅತಿಥಿಯಾಗಿ ಭಾಗವಹಿಸಿ ಅವರು ಮಾತನಾಡಿದರು.
     ವರ್ಣರಂಜಿತವಾಗಿ ನಡೆದ ಈ ಸಮಾರಂಭದಲ್ಲಿ ಭಗವಾನ್ ಸತ್ಯ ಸಾಯಿಬಾಬಾರವರ ಸಂಕಲ್ಪವನ್ನು ಚತ್ತೀಸ್‍ಗಢದ ರಾಯಪುರದಲ್ಲಿ ಮಕ್ಕಳ ಹೃದಯ ಶಸ್ತ್ರಚಿಕಿತ್ಸಾಲಯದ ರೂವಾರಿಗಳಾದ ಸಿ.ಶ್ರೀನಿವಾಸ್ ಅವರು ಬಾಬಾರವರ ಕಾರ್ಯರೂಪದ ಪ್ರೇಮ ಎಂಬ ವಿಚಾರವಾಗಿ ಉಪನ್ಯಾಸ ಮಾಡಿದರು. ಜಗತ್ತನ್ನೇ ತಲ್ಲಣ ಗೊಳಿಸಿದ ಮಲಾಲಾ ಪ್ರಕರಣದ ಬಗ್ಗೆ ಬೆಳಕುಚೆಲ್ಲಿ ಇಂದಿನ ಆಧಾರ ರಹಿತ ಜೀವನಶೈಲಿ ಯಿಂದಾಗಿ ಇಂತಹ ಘಟನೆಗಳು ನಡೆಯುತ್ತಿವೆ. ಸಂತೃಪ್ತ, ಸಾರ್ಥಕ ಜೀವನವನ್ನು ನಡೆಸಬೇಕಾದರೆ ಮೌಲ್ಯಗಳಿಗೆ ಮಾರುಹೋಗಬೇಕಾದ ಅನಿವಾರ್ಯತೆಯನ್ನು ಆಧಾರ ಸಹಿತವಾಗಿ ಪ್ರಸ್ತುತಪಡಿಸಿ ಯುವಜನರನ್ನು ಹುರಿದುಂಬಿಸಿದರು.
      ಕಾರ್ಯಕ್ರಮದ ಆರಂಭದಲ್ಲಿ ಜಪಾನ್, ಮಲೇಷಿಯಾ, ಸ್ಲೋವೆನಿಯಾ ಮೊದಲಾದ ಐದು ದೇಶಗಳ ವನಿತೆಯರು ವೇದ ಪಠಣಮಾಡಿ ಕಾರ್ಯಕ್ರಮಕ್ಕೆ ವಿದ್ಯುಕ್ತ ಚಾಲನೆಯನ್ನು ಒದಗಿಸಿದ್ದು, ನಮ್ಮ ಸಂಸ್ಕೃತಿಯನ್ನು ಅರ್ಥೈಸಿಕೊಂಡು ಭಾಗಿಯಾಗಿದ್ದು ವಿಶೇಷವಾಗಿತ್ತು.
    ಇದೇ ಸಂದರ್ಭದಲ್ಲಿ ಅನಂತಪುರಂನ ವಿದ್ಯಾನಿಕೇತನದ ಹಿರಿಯ ವಿದ್ಯಾರ್ಥಿನಿಯರ ಬಳಗದಿಂದ ಸಿದ್ಧಪಡಿಸಿದ ಧ್ವನಿಸಾಂದ್ರಿಕೆಯ ಪ್ರಥಮ ಸಂಚಿಕೆಯನ್ನು ಶಾಸಕ ಸುಧಾಕರ್ ಬಿಡುಗಡೆ ಗೊಳಿಸಿದರು.
     ಕಾರ್ಯಕ್ರಮದ ಮುಂದುವರೆದ ಭಾಗವಾಗಿ ಸಾಂಸ್ಕೃತಿಕ ವಿನೋದಾವಳಿಗಳು ಏರ್ಪಡಿಸಲಾಗಿದ್ದು, ಇಟಲಿಯ ಪ್ರಸಿದ್ಧ ನೃತ್ಯಕಲಾವಿದೆ ಕಿಯಾರಾ ಅವರಿಂದ ಒಡಿಸ್ಸೀ ನೃತ್ಯ, ಸಿಂಗಪುರದ ಖ್ಯಾತ ಕಲಾವಿದೆ ರೋಷನಿ ಪಿಳ್ಲೈ ಅವರಿಂದ ಭರತನಾಟ್ಯ, ಅನಂತಪುರಂನ ಹಿರಿಯ ವಿದ್ಯಾರ್ಥಿನಿಯರಿಂದ ನೆರಳು ಬೆಳಕಿನಾಟ ಮೊದಲಾದ ಮನರಂಜನಾ ಕಾರ್ಯಕ್ರಮಗಳನ್ನು ನಡೆಸಿಕೊಡಲಾಯಿತು.
      ಈ ಕಾರ್ಯಕ್ರಮದಲ್ಲಿ ವಿ.ಕುಮಾರ್, ಸಂಸ್ಥೆಯ ಪದಾಧಿಕಾರಿಗಳಾದ ಉಳುವಾನ ಗೋವಿಂದ ಭಟ್, ಮಾದಕಟ್ಟೆ ಈಶ್ವರ ಭಟ್, ಬನ್ಯಂಗಳ ನಾರಾಯಣರಾವ್, ಬಿ.ಎನ್.ನರಸಿಂಹ ಮೂರ್ತಿ, ಸಿ.ಶ್ರೀನಿವಾಸ್, ಸ್ವಾಮಿ ಬೋಧಮಯಾನಂದ, ಇನ್ನಿತರ ಗಣ್ಯರು ಉಪಸ್ಥಿತರಿದ್ದರು. ಕಾರ್ಯಕ್ರಮವನ್ನು ಕುಮಾರಿ ಭುವನಾ ನಿರೂಪಿಸಿದರು.

ದೇಶ ಕಟ್ಟಬಲ್ಲ ಯುವ ನೇತಾರರು ಅಗತ್ಯ

ಚಿಕ್ಕಬಳ್ಳಾಪುರ, ನವಂಬರ್ 19: ಪ್ರಕ್ಷುಬ್ಧ, ವಿಘಟನಕಾರಿ, ಆತಂಕಪೂರಿತ ವಾತಾವರಣದಲ್ಲಿ ಜಾತಿ, ಮತ, ಧರ್ಮ ಮೌಲ್ಯಗಳು ಅಧಃಪತನದತ್ತ ಸಾಗುತ್ತಿವೆ. ಇಂತಹ ಸನ್ನಿವೇಶದಲ್ಲಿ ದೇಶ ಕಟ್ಟಬಲ್ಲ ಯುವ ನೇತಾರರು, ಅವರಿಗೆ ಸನ್ಮಾರ್ಗವನ್ನು ತೋರಿಸಬೇಕಾದ ಧಾರ್ಮಿಕ ಮಾರ್ಗದರ್ಶಕರ ಅಗತ್ಯವಿದೆ ಎಂದು ಸತ್ಯಸಾಯಿ ಶಿಕ್ಷಣ ಸಂಸ್ಥೆಗಳ ಮುಖ್ಯ ಮಾರ್ಗದರ್ಶಕರು, ಧರ್ಮದರ್ಶಿಗಳು ಆದ ಬಿ,ಎನ್.ನರಸಿಂಹ ಮೂರ್ತಿ ಅಭಿಪ್ರಾಯ ಪಟ್ಟಿದ್ದಾರೆ.
ಮುದ್ದೇನಹಳ್ಳಿಯ ಸತ್ಯಸಾಯಿ ಗ್ರಾಮದಲ್ಲಿ ಇಂದು ಏರ್ಪಡಿಸಲಾಗಿದ್ದ ಜಾಗತಿಕ ಯುವ ಸಮ್ಮೇಳನದ ಉದ್ಘಾಟನಾ ಕಾರ್ಯಕ್ರಮದಲ್ಲಿ ಅವರು ಉದ್ದೇಶ ನಿರೂಪಣೆಯನ್ನು ಮಾಡುತ್ತ ಮಾತನಾಡಿದರು.
ಮಂಜು ಮುಸಿಕಿದ ವಾತಾವರಣ, ಜಿನುಗುವ ಮಳೆಯ ನಡುವೆ ಆಗೊಮ್ಮೆ ಈಗೊಮ್ಮೆ ಇಣುಕಿ ಮರೆಯಾಗುತ್ತಿದ್ದ ಸೂರ್ಯನ ಭರವಸೆಯ ಬೆಳಕನ್ನು ಯುವ ನೇತಾರರ ನೇತೃತ್ವದಲ್ಲಿ ಆಶಿಸಿದಂತಿತ್ತು.
ವಿ.ಕುಮಾರ್ ಅವರ ಪ್ರಾಸ್ತಾವಿಕ ಮಾತುಗಳ ನಂತರ ಬೆಂಗಳೂರಿನ ಶ್ರೀ ರಾಮಕೃಷ್ಣ ಮಿಷನ್ ನ ಸ್ವಾಮಿ ಬೋಧಮಯಾನಂದರು ಜ್ಯೋತಿಯನ್ನು ಬೆಳಗಿಸಿ ಯುವ ಸಮ್ಮೇಳನಕ್ಕೆ ಚಾಲನೆ ನೀಡಿದರು.
‘ಎಲ್ಲರೂ ಒಂದಾಗಿ’ ಕಲೆತು ಶಾಂತಿ ಮತ್ತು ಪ್ರೇಮವನ್ನು ಹಂಚಿ ಸಮಾಜದ ಅಭಿವೃದ್ಧಿಗೆ ಶ್ರಮಿಸೋಣ ಎನ್ನುವ ಆಶೋತ್ತರ ದೊಂದಿಗೆ ಆಯೋಜನೆಗೊಂಡ ಯುವ ಸಮ್ಮೇಳನದ ಲಾಂಛನ ಫಲಕವನ್ನು ಸತ್ಯಸಾಯಿ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷರಾದ ಉಳುವಾನ ಗೋವಿಂದ ಭಟ್ಟರು ಅನಾವರಣ ಗೊಳಿಸಿದರು.
ಈ ಕಾರ್ಯಕ್ರಮಕ್ಕೆ ಹಿನ್ನೆಲೆಯಾಗಿ ನಾನಾ ಮತಧರ್ಮಗಳನ್ನು ಪ್ರತಿನಿಧಿಸುವ ರಾಯಭಾರಿಗಳು ಅವರವರ ಸಂಸ್ಕøತಿಯಂತೆ ಪ್ರಾರ್ಥನೆಮಾಡಿ ಕಾರ್ಯಕ್ರಮಕ್ಕೆ ಶುಭವನ್ನು ಕೋರಿದರು.
ಇಪ್ಪತ್ತು ದೇಶಗಳ ಪತಾಕೆಗಳೊಂದಿಗೆ ಎರಡು ಸಾವಿರ ಯುವಕ, ಯುವತಿಯರು ನಿನ್ನೆಯಷ್ಟೇ ಉದ್ಘಾಟನೆಗೊಂಡ ಶ್ರೀ ಸತ್ಯಸಾಯಿ ಪ್ರೇಮಾಮೃತಂ ಸಭಾಂಗಣಕ್ಕೆ ಅತ್ಯಂತ ಶಿಸ್ತುಬದ್ಧವಾಗಿ, ವರ್ಣರಂಜಿತವಾದ ಮೆರವಣಿಗೆಯಲ್ಲಿ ಆಗಮಿಸಿ ಎಲ್ಲರೂ ಎಲ್ಲರನ್ನೂ ಅರ್ಥೈಸಿಕೊಂಡು ಜೀವಿಸುವಂತಾದರೆ ‘ಮಾನವ ಕುಲ ತಾನೊಂದೇ ವಲಂ’ ಎಂಬಂತಾಗಿ ಶಾಂತಿ, ಪ್ರೇಮ ತನ್ನಿಂದ ತಾನೇ ನೆಲೆಯೂರುತ್ತದೆ ಎಂಬ ಸಂದೇಶವನ್ನು ಸಾರಿದರು.
ಈ ಸಮ್ಮೇಳನದಲ್ಲಿ ಕೊಲೆರಡೋದ ಪ್ರತಿನಿಧಿ ಯುವತಿಯರ ಪರವಗಿ ಮಾತನಾಡಿದರೆ, ಗ್ರೀಸ್ ದೇಶದ ಅಶ್ರಫ್ ಯುವಕರ ಪರವಾಗಿ ಮಾತನಾಡಿದರು. ವಿವೇಕಾನಂದ ಯೋಗ ವಿಶ್ವವಿದ್ಯಾಲಯದ ಕುಲಪತಿ ಡಾ.ನಾಗೇಂದ್ರ ಯುವ ಸಮ್ಮೇಳನದ ಅಗತ್ಯದ ಕುರಿತು ಸಾಂದರ್ಭಿಕ ಮಾತುಗಳನ್ನಾಡಿದರೆ, .ಸಮ್ಮೇಳನವನ್ನು ಉದ್ಘಾಟನೆ ಮಾಡಿದ ಸ್ವಾಮಿ ಬೋಧಮಯಾನಂದರು ಮಾತನಾಡುತ್ತಾ ಯುವಕರು ಪರಿವರ್ತನೆಯ ಕಡೆಗೆ ಸಾಗಿ ಸಮಾಜವನ್ನು ಸನ್ಮಾರ್ಗದಲ್ಲಿ ನಡೆಸುವಂತಾಗಬೇಕು ಎಂದು ಕರೆ ನೀಡಿದರು.
ಕಾರ್ಯಕ್ರಮದಲ್ಲಿ ಸತ್ಯಸಾಯಿ ಲೋಕಸೇವಾ ಟ್ರಸ್ಟ್, ಅಳಿಕೆಯ ಧರ್ಮದರ್ಶಿಗಳಾದ ಮಾದಕಟ್ಟೆ ಈಶ್ವರ ಭಟ್, ಸತ್ಯಸಾಯಿ ಲೋಕಸೇವಾ ಟ್ರಸ್ಟ್, ಮುದ್ದೇನಹಳ್ಳಿಯ ಕಾರ್ಯದರ್ಶಿಗಳಾದ ಬನ್ಯಂಗಳ ನಾರಾಯಣ ರಾವ್, ಸತ್ಯಸಾಯಿ ಹೆಲ್ತ್ ಅಂಡ್ ಎಜುಕೇಷನ್ ಟ್ರಸ್ಟ್‍ನ ಅಧ್ಯಕ್ಷರಾದ ಸಿ.ಶ್ರೀನಿವಾಸ್ ಉಪಸ್ಥಿತರಿದ್ದರು.
ಸತ್ಯಸಾಯಿ ಪ್ರೇಮಾಮೃತ ಪ್ರಕಾಶನದ ಮುಖ್ಯಸ್ಥರಲ್ಲಿ ಒಬ್ಬರಾದ ಕುಮಾರಿ ಭುವನ ಕಾರ್ಯಕ್ರಮವನ್ನು ನಿರೂಪಣೆ ಮಾಡಿದರು.

ಶುದ್ಧ ಮನಸ್ಸಿಗೆ ಭಗವಂತನ ರಕ್ಷೆ : ಸುನೀಲ್ ಗವಾಸ್ಕರ್

ಚಿಕ್ಕಬಳ್ಳಾಪುರ, ನವಂಬರ್ 18: ಪ್ರತಿದಿನ ನಮ್ಮನ್ನು ನಾವು ಸತ್ಕಾರ್ಯದಲ್ಲಿ ತೊಡಗಿಸಿಕೊಂಡರೆ ಆ ಭಗವಂತನು ನಮ್ಮನ್ನು ಸದಾ ಕಾಪಾಡುತ್ತಾ, ಸನ್ಮಾರ್ಗದಲ್ಲಿ ಮುನ್ನಡೆಯಲು ಪ್ರೇರೇಪಿಸುತ್ತಾನೆ. ಇದು ನನ್ನ ಜೀವನದಲ್ಲಿ ಅಕ್ಷರಶಃ ನಡೆದ ಘಟನೆಯಾಗಿದೆ ಎಂದು ಭಾರತೀಯ ಕ್ರಿಕೆಟ್ ರಂಗದ ದಂತಕಥೆ ಸುನೀಲ್ ಗವಾಸ್ಕರ್ ಹೇಳಿದರು. ಮುದ್ದೇನಹಳ್ಳಿಯ ಸತ್ಯಸಾಯಿ ಗ್ರಾಮದಲ್ಲಿ ನೂತನವಾಗಿ ನಿರ್ಮಿಸಲಾಗಿರುವ ಶ್ರೀ ಸತ್ಯಸಾಯಿ ಪ್ರೇಮಾಮೃತಂ ಸಭಾಂಗಣದ ಉದ್ಘಾಟನಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಭವನದ ಉದ್ಘಾಟನೆಗೆ ಆಗಮಿಸಬೇಕಿದ್ದ ಚತ್ತೀಸ್‍ಗಢ ರಾಜ್ಯದ ಮುಖ್ಯಮಂತ್ರಿ ಡಾ. ರಮಣ ಸಿಂಗ್ ಅನಿವಾರ್ಯ ಕಾರಣಗಳಿಂದ ಬರಲಾಗದ ಕಾರಣ ಅವರ ಅನುಪಸ್ಥಿತಿಯಲ್ಲಿ ಶ್ರೀ ಸತ್ಯಸಾಯಿ ಲೋಕಸೇವಾ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷರಾದ ಉಳುವಾನ ಗೋವಿಂದ ಭಟ್ಟರು ಶೀ ಸತ್ಯಸಾಯಿ ಪ್ರೇಮಾಮೃತಂ ಸಭಾಂಗಣದ ಶಿಲಾಫಲಕವನ್ನು ಅನಾವರಣ ಗೊಳಿಸಿ ಲೋಕಾರ್ಪಣೆ ಮಾಡಿದರು.
ಸತ್ಯಸಾಯಿ ಶಿಕ್ಷಣ ಸಂಸ್ಥೆಗಳ ಮಾರ್ಗದರ್ಶಿ ಮತ್ತು ಟ್ರಸ್ಟೀಗಳು ಆದ ಬಿ.ಎನ್.ನರಸಿಂಹಮೂರ್ತಿ ಅವರು ಪ್ರಾಸ್ತಾವಿಕ ಭಾಷಣಮಾಡಿ ಮಾತನಾಡುತ್ತಾ ಸಂಸ್ಥೆಯ ಕಾರ್ಯಸೂಚಿಯನ್ನು ನೆರೆದಿರುವ ಭಕ್ತರ ಮುಂದೆ ಮಂಡಿಸಿದರು. ಇನ್ನೊಬ್ಬ ಅತಿಥಿ ಶ್ರೀನಿವಾಸ್ ಸಾಂದರ್ಭಿಕವಾಗಿ ಮಾತನಾಡಿದರು.
ಈ ವೈವಿಧ್ಯಮಯ ಕಾರ್ಯಕ್ರಮದಲ್ಲಿ ಸಭಾಭವನದ ಕುರಿತಾದ ಸಾಕ್ಷ್ಯಚಿತ್ರವನ್ನು ಬಿಡುಗಡೆ ಮಾಡಲಾಯಿತು. ಸತ್ಯಸಾಯಿ ಚಳುವಳಿಯ ಪಿತಾಮಹನೆಂದೇ ಬಿಂಬಿಸಲ್ಪಡುವ ಇಂದೂಲಾಲ್ ಷಾ ಅವರು ಬರೆದಿರುವ ಅವರ ಆತ್ಮಕಥೆ ‘ಎ ಲೈಫ್ ಇನ್ ಸರ್ವೀಸ್’ ಕೃತಿಯನ್ನು ಭಕ್ತವೃಂದಕ್ಕೆ ಅರ್ಪಿಸಲಾಯಿತು. ‘ಸನಾತನವಾಣಿ’ ಎಂಬ ಅಂತರ್ಜಾಲ ಬಾನುಲಿ ಕೇಂದ್ರಕ್ಕೆ ಇದೇ ಸಂದರ್ಭದಲ್ಲಿ ಚಾಲನೆ ನೀಡಲಾಯಿತು.
ಭವನದ ನಿರ್ಮಾಣದಲ್ಲಿ ಶ್ರಮಿಸಿದ ಪ್ರತಿಯೊಬ್ಬರನ್ನೂ ಸ್ಮರಣಿಕೆಗಳನ್ನು ನೀಡಿ ಸನ್ಮಾನಿಸಲಾಯಿತು. ಈ ಕಾರ್ಯಕ್ರಮವನ್ನು ಖ್ಯಾತ ಕ್ರಿಕೆಟಿಗ ಗುಂಡಪ್ಪ ಆರ್ ವಿಶ್ವನಾಥ್ ಮೊದಲಾದ ಗಣ್ಯರು ನೆರವೇರಿಸಿದರು.
ಪದ್ಮವಿಭೂಷಣ ಡಾ. ಮಂಗಳಂಪಲ್ಲಿ ಬಾಲಮುರಳೀಕೃಷ್ಣ, ಡಾ.ಕೆ.ಕೃಷ್ಣಕುಮಾರ್ ಅವರಿಂದ ಕರ್ಣಾಟಕ ಶಾಸ್ತ್ರೀಯ ಸಂಗೀತದ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.

Monday, November 16, 2015

ಮೆಟ್ರೊ ರೀಚ್-2ಗೆ ಸಿಎಂ ಸಿದ್ದರಾಮಯ್ಯ ಚಾಲನೆ


ಬೆಂಗಳೂರು: ಬಹುನಿರೀಕ್ಷಿತ ಮೆಟ್ರೊ ಟರ್ಮಿನಲ್ ರೀಚ್-2 (ಕಡುನೇರಳೆ ಮಾರ್ಗ) ಅನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಕೇಂದ್ರ ನಗರಾಭಿವೃದ್ಧಿ ಸಚಿವ ಎಂ. ವೆಂಕಯ್ಯ ನಾಯ್ಡು ಅವರು ಸೋಮವಾರ ಲೋಕಾರ್ಪಣೆಗೊಳಿಸಿದರು.ಮಾಗಡಿ ರಸ್ತೆಯಿಂದ ಮೈಸೂರು ರಸ್ತೆಗೆ ಸಂಪರ್ಕ ಕಲ್ಪಿಸುವ ಈ ಮೆಟ್ರೋ ಮಾರ್ಗಕ್ಕೆ ಇಂದು ಮಧ್ಯಾಹ್ನ ಸಿಎಂ ಹಸಿರು ನಿಶಾನೆ ತೋರುವ ಮೂಲಕ ಚಾಲನೆ ನೀಡಿದರು. ಇದರೊಂದಿಗೆ ಬಿಎಂಆರ್ ಸಿಎಲ್ ಬೆಂಗಳೂರಿಗೆ `ಮೂರು ಮೆಟ್ರೋ ಮಾರ್ಗಗಳ'ನ್ನು ಸಾರ್ವಜನಿಕ ಸಂಚಾರಕ್ಕೆ ಮುಕ್ತಗೊಳಿಸಿದಂತಾಗಿದೆ. ಮಾಗಡಿ ರಸ್ತೆ, ಮೈಸೂರು ರಸ್ತೆ ಸುರಂಗ ಮಾರ್ಗ ಕಾಮಗಾರಿ ಆರಂಭವಾಗಿದ್ದು 2010ರಲ್ಲಿ. 2013-14ರಲ್ಲಿ ಕಾಮಗಾರಿ ಪೂರ್ಣಗೊಳಿಸುವ ಗುರಿ ಇತ್ತು. ಆದರೆ, ಈ ಮಾರ್ಗದಲ್ಲಿ ಸುರಂಗ ನಿರ್ಮಾಣ ಕಾರ್ಯ ಇದ್ದುದ್ದರಿಂದ ಕಾಮಗಾರಿ 1 ವರ್ಷ ವಿಳಂಬವಾಗಿತ್ತು.

Sunday, November 15, 2015

ಟಿಪ್ಪು ಸುಲ್ತಾನ ಮಾಡಿದ್ದೆಲ್ಲವು ಸರಿ...ತಪ್ಪೆಲ್ಲವು ಹಿಂದುಗಳದ್ದೇ!!

(ಆಂಧ್ರಭೂಮಿ ತೆಲುಗು ದಿನಪತ್ರಿಕೆಯಲ್ಲಿ ದಿನಾಂಕ 14-11-2015 ರಂದು ಮುಖಪುಟದಲ್ಲಿ ಪ್ರಕಟವಾದ ಸಂಪಾದಕ ಎಂ.ವಿ.ಆರ್.ಶಾಸ್ತ್ರಿ ಯವರ ಲೇಖನದ ಅನುವಾದ)


      ಟಿಪ್ಪು ಸುಲ್ತಾನ ಜಾತ್ಯಾತೀತ ಹೌದಾ, ಅಲ್ಲವೇ ಎಂದು ಬೇರಾರನ್ನೋ ಕೇಳಬೇಕಾದ ಕೆಲಸವಿಲ್ಲ.
ಆ ವಿಷಯವನ್ನು ಟಿಪ್ಪು ಸುಲ್ತಾನನೇ ಬಿಡಿಸಿ ಹೇಳುತ್ತಾನೆ.

    “ಮೀರ್ ಹುಸ್ಸೇನ್ ಅಲಿಯೊಂದಿಗೆ ನಮ್ಮವರು ಇಬ್ಬರನ್ನು ಕಳಿಸುತ್ತಿದ್ದೇನೆ. ಅವರ ಸಹಾಯದಿಂದ ನೀನು ಹಿಂದುಗಳೆಲ್ಲರನ್ನು ಹಿಡಿದು ಸಾಯಿಸಬೇಕು. 20ವರ್ಷ ಒಳಗಿರುವವರನ್ನು ಸೆರೆಮನೆಗೆ ತಳ್ಳಬೇಕು. ಉಳಿದವರಲ್ಲಿ 5000 ಮಂದಿಯನ್ನು ಮರಗಳಿಗೆ ನೇಣು ಬಿಗಿದು ಸಾಯಿಸಬೇಕು. ಇದು ನನ್ನ ಆದೇಶ”
‘ಆದರ್ಶ ರಾಜ’ ಟಿಪ್ಪು ಸುಲ್ತಾನ 1788 ಡಿಸೆಂಬರ್ 14ರಂದು ಕಲ್ಲಿಕೋಟೆಯಲ್ಲಿದ್ದ ತನ್ನ ಸೈನ್ಯಾಧಿಪತಿಗೆ ಬರೆದ ಪತ್ರದ ಸಾರಾಂಶ ಇದು.
      “ಹನ್ನೆರಡು ಸಾವಿರಮಂದಿ ಹಿಂದುಗಳು ಇಸ್ಲಾಂ ಮತವನ್ನು ಸ್ವೀಕಾರ ಮಾಡಿದ್ದಾರೆ. ಅವರಲ್ಲಿ ಬಹಳಷ್ಟು ಮಂದಿ ನಂಬೂದ್ರಿ ಬ್ರಾಹ್ಮಣರು ಇದ್ದಾರೆ. ಈ ವಿಷಯವನ್ನು ಹಿಂದುಗಳಲ್ಲಿ ಚೆನ್ನಾಗಿ ಪ್ರಚಾರ ಮಾಡಿಸು. ಆಗ ಹಿಂದುಗಳನ್ನು ನಿನ್ನ ಬಳಿಗೆ ಕರೆಸಿಕೊಂಡು ಇಸ್ಲಾಂಗೆ ಮತಾಂತರ ಮಾಡು. ನಂಬೂದ್ರಿ ಬ್ರಾಹ್ಮಣ ಒಬ್ಬನನ್ನೂ ಬಿಡಬೇಡ.”
1788 ಮಾರ್ಚಿ 22ರಂದು ‘ಮಾಡಲ್ ಕಿಂಗ್’ ಟಿಪ್ಪು ಸುಲ್ತಾನ ಅವರು ಅಬ್ದುಲ್ ಕದೀರ್‍ಗೆ ಬರೆದು ಕಳುಹಿಸಿದ ಸೂಚನೆ ಇದು.

     “ಇತ್ತೀಚೆಗೆ ಕರಾವಳಿಯಲ್ಲಿ ನಾಲ್ಕು ಲಕ್ಷಕ್ಕೂ ಹೆಚ್ಚುಮಂದಿ ಹಿಂದುಗಳನ್ನು ಇಸ್ಲಾಂಗೆ ಬದಲಾಯಿಸಿ ಘನ ವಿಜಯವನ್ನು ಸಾಧಿಸಿರುತ್ತೇನೆ. ಈ ವಿಷಯ ನಿನಗೆ ಗೊತ್ತಿಲ್ಲವೇ?”
1790 ಜನವರಿ 19ರಂದು ಬುದ್ರುಜ್ ಜುಮಾನ್ ಖಾನ್‍ಗೆ ‘ರಾಷ್ಟ್ರೀಯ ವೀರ’ ಟಿಪ್ಪು ಸುಲ್ತಾನ ಬರೆದ ಪತ್ರ ಇದು.

   “ಪ್ರವಾದಿ ಮಹಮ್ಮದ್, ಅಲ್ಲಾಹು ದಯೆಯಿಂದ ಕಲ್ಲಿಕೋಟೆಯಲ್ಲಿನ ಹಿಂದುಗಳೆಲ್ಲರೂ ಇಸ್ಲಾಂಗೆ ಮತಾಂತರ ಮಾಡಲ್ಪಟ್ಟಿದ್ದಾರೆ. ಕೊಚ್ಚಿನ್ ರಾಜ್ಯದ ಗಡಿಯಲ್ಲಿನ ಕೆಲವರು ಮಾತ್ರವೇ ಇನ್ನೂ ಬದಲಾಗದೇ ಉಳಿದುಕೊಂಡಿರುತ್ತಾರೆ. ಅವರನ್ನೂ ಅತಿ ಶೀಘ್ರದಲ್ಲಿಯೇ ಬದಲಾಯಿಸಿ ಬಿಡಬೇಕೆಂದು ನಿರ್ಣಯಿಸಿದ್ದೇನೆ. ಇದನ್ನೇ ‘ಜೀಹಾದ್’ಎಂದು ನಾನು ಅಂದುಕೊಳ್ಳುತ್ತಿದ್ದೇನೆ.”
1790 ಜನವರಿ 18 ರಂದು ಸಯ್ಯದ್ ಅಬ್ದುಲ್ ದುಲಾಯ್‍ಕಿಗೆ ‘ಜಾತ್ಯಾತೀತ ಆಡಳಿತಗಾರ’ ಟಿಪ್ಪು ಸುಲ್ತಾನ ಬರೆದಂತಹ ಪತ್ರ ಇದು.

      ಈ ಪತ್ರಗಳೆಲ್ಲವೂ ನಿನ್ನೆಯೋ ಮೊನ್ನೆಯೋ ನರೇಂದ್ರ ಮೋದಿಯವರ ಬಂಬಲಿಗರು ಬಹಿರಂಗ ಪಡಿಸಿದವು ಅಲ್ಲವೇ ಅಲ್ಲ. ಸುಪ್ರಸಿದ್ದ ಇತಿಹಾಸಕಾರ ಕೆ. ಎಂ. ಪಣಿಕ್ಕರ್ ಕಷ್ಟಪಟ್ಟು ಸಂಗ್ರಹಿಸಿ ಇಂದಿಗೆ ತೊಂಬತ್ತು ವರ್ಷಗಳ ಹಿಂದೆ ‘ಭಾಷಾ ಪೋಷಿಣಿ’ ಪತ್ರಿಕೆ (1923 ಆಗಸ್ಟ್ ಸಂಚಿಕೆ)ಯಲ್ಲಿ ಬಹಿರಂಗಗೊಳಿಸಿದ ಪತ್ರಗಳಿವು. ಅದಕ್ಕೆ ನೂರು ವರ್ಷಗಳ ಹಿಂದೆ William Kirkpatrick 1811ರಲ್ಲಿ ಪ್ರಕಾಶಪಡಿಸಿದ  Selected Letters of Tipoo Sultan ಗ್ರಂಥದಲ್ಲಿಯೂ ಇಂತಹ ಪತ್ರರತ್ನಗಳು ಬಹಳಷ್ಟು ದೊರೆಯುತ್ತವೆ.
    ಪತ್ರಗಳಲ್ಲಿ ಬರೆದುಕೊಂಡಿದ್ದು ಬೊಗಳೆ ಆಗಿರ ಬಹುದಲ್ಲವೇ?. ಆದೇಶಗಳನ್ನು ಕಳುಹಿಸಿದ ಮಾತ್ರಕ್ಕೆ ಅವೆಲ್ಲವೂ ಹಾಗೆಯೇ ಜಾರಿ ಆಗಿರುತ್ತವೆ ಎಂದು ಹೇಗೆ ನಂಬುತ್ತೇವೆ?.

     ನಂಬಬೇಡಿ. 19ನೇ ಶತಮಾನದ ‘ಮೈಸೂರು ಗೆಜೆಟಿಯರ್’ಅನ್ನು ನೋಡಿರಿ. ದಕ್ಷಿಣ ಭಾರತದಲ್ಲಿ ಟಿಪ್ಪುವಿನ ಸೇನೆಗಳು 8000 ದೇವಾಲಯಗಳನ್ನು ಸರ್ವನಾಶ ಮಾಡಿರುವುದು ಕಂಡುಬರುತ್ತದೆ. ಅದರಲ್ಲೂ ಪ್ರಮುಖವಾಗಿ ಕರಾವಳಿ, ಕೊಚ್ಚಿನ್‍ಗಳಲ್ಲಿ ನಡೆದ ದರೋಡೆಗಳಿಗೆ, ದೇವಾಲಯಗಳ ವಿಧ್ವಂಸಗಳಿಗೆ ಎಣೆಯೇ ಇಲ್ಲವೆಂದು ಅರ್ಥವಾಗುತ್ತದೆ.
   ಅದಿರಲಿ, ನಮ್ಮವನಲ್ಲದ Lewis B.Boury ನನ್ನು ಕೆದಕಿನೋಡಿ. ಕರಾವಳಿಯಲ್ಲಿ ಹಿಂದುಗಳ ಮೇಲೆ, ಹಿಂದೂ ದೇವಾಲಯಗಳ ಮೇಲೆ ಟಿಪ್ಪು ಸುಲ್ತಾನ ಮಾಡಿಸಿದ ಭೀಕರ ದುರಾಚಾರಗಳು ಗಜನಿ ಮಹಮ್ಮದ್, ಅಲ್ಲಾಉದ್ದೀನ್ ಖಿಲ್ಜಿ, ನಾದಿರ್‍ಷಾ, ಔರಂಗಜೇಬ್ ಅಂತಹವರ ಪ್ರತಾಪಗಳಿಗೆ ಯಾವುದರಲ್ಲಿಯೂ ತೆಗೆದು ಹಾಕುವಂತಿಲ್ಲ ಎಂದು ಹೇಳುತ್ತಾ ಆತನು ದೊಡ್ಡ ಪುಸ್ತಕವನ್ನೇ ಬರೆದಿದ್ದಾನೆ.
   ‘ಕೇರಳದಲ್ಲಿ ಟಿಪ್ಪು ಸುಲ್ತಾನನ ದಂಡಯಾತ್ರೆಗಳ ದಾರುಣಗಳನ್ನು ನೋಡಿದರೆ ಚೆಂಘೀಜ್‍ಖಾನ್, ತೈಮೂರ್ ಅವರನ್ನು ನೆನಪಿಗೆ ತರುತ್ತವೆ ಎಂದು ಪ್ರಸಿದ್ಧ ಮಹಮ್ಮದೀಯ ಇತಿಹಾಸಕಾರ ಪಿ. ಎಸ್. ಸಯ್ಯದ್ ಮಹಮ್ಮದ್ ‘ಕೇರಳ ಮುಸ್ಲಿಮ್ ಚರಿತ್ರಮ್’ ಗ್ರಂಥದಲ್ಲಿ ವರ್ಣಿಸಿದ್ದಾನೆ.
  ಪುಸ್ತಕಗಳಿಗೇನು? ತಿಳಿದೋ ತಿಳಿಯದೆಯೋ ಯಾರಾದರೂ ಏನಾದರೂ ಬರೆದು ಬಿಸಾಡಬಹುದು...ಎಂದು ಹೊಡೆದುಹಾಕೋಣವೇ?. 

    1783 ರಿಂದ 1791ರ ವರೆಗೆ ಕರಾವಳಿ ಭಾಗದಲ್ಲಿ ಟಿಪ್ಪು ಸುಲ್ತಾನನ ಪೈಶಾಚಿಕ ಕೃತ್ಯಗಳಿಂದಾಗಿ 30,000 ಮಂದಿ ಬ್ರಾಹ್ಮಣರು, ಇನ್ನೂ ಎಷ್ಟೋ ಸಾವಿರಮಂದಿ ನಾಯರ್‍ಗಳು ಮನೆ, ಆಸ್ತಿಪಾಸ್ತಿಗಳನ್ನು ಬಿಟ್ಟು ಪ್ರಾಣಭಯದಿಂದ ತಿರುವಾನ್ಕೂರು ರಾಜ್ಯಕ್ಕೆ ಓಡಿಹೋಗಿದ್ದಾಗಿ ಟಿಪ್ಪು ಮರಣಾನಂತರ ಬ್ರಿಟೀಷ್ ಈಸ್ಟ್ ಇಂಡಿಯಾ ಕಂಪನಿಯವರು ನೇಮಕಮಾಡಿದ ವಿಚಾರಣಾ ಸಮಿತಿ ತನಿಖೆಯಲ್ಲಿ ಬಯಲಾಗಿದೆ. ಆ ವರದಿ ಬ್ರಿಟೀಷ್ ದೊರೆಗಳಿಗೆ ತಿಳಿಯುವುದಕ್ಕೆ ಮಾತ್ರ ತಿಳಿಸಲು ಸಿದ್ಧಪಡಿಸಿದ್ದೇ ಹೊರತು ಪುಸ್ತಕ ಬರೆಯಬೇಕೆಂಬ ಉದ್ದೇಶದಿಂದ ಒಟ್ಟು ಮಾಡಿದ್ದಲ್ಲ. 1866-86 ನಡುವಿನ ಅವಧಿಯಲ್ಲಿ ಆ ಪ್ರದೇಶದಲ್ಲಿ ಕಲೆಕ್ಟರ್ ಆಗಿ ಕೆಲಸ ಮಾಡಿದ William Logan ದಾಖಲೆಗಳನ್ನು ಪರಿಶೀಲನೆ ಮಾಡಿ, ಸಮಗ್ರವಾಗಿ ಸಮಾಚಾರವನ್ನು ಸಂಗ್ರಹಿಸಿ ಹೊರಗೆಡಹಿದ ಮಲಬಾರ್ ಮ್ಯಾನ್ಯುವಲ್‍ನಲ್ಲಿಯೂ ಟಿಪ್ಪು ಮಾಡಿಸಿದ ಅತ್ಯಾಚಾರಗಳು, ಸಾಮೂಹಿಕ ಸುನ್ತಿಗಳು, ‘ಕತ್ತಿ ಇಲ್ಲವೆ ಟೋಪಿ’ ಘೋಷಣೆಯೊಂದಿಗೆ ತಲೆಯ ಮೇಲೆ ಟೋಪಿ ಧರಿಸಲು ಒಪ್ಪದವರನ್ನು ಸಾವಿರಾರು ಸಂಖ್ಯೆಯಲ್ಲಿ ಹತ್ಯೆಗೈದ ಘಟನೆಗಳು, ದೇವಾಲಯಗಳನ್ನು ಮಲಿನಗೊಳಿಸಿ, ಬಲಾತ್ಕಾರವಾಗಿ ದನದ ಮಾಂಸವನ್ನು ಬಾಯಿಗೆ ತುರುಕಿ, ಮಹಿಳೆಯರನ್ನು ಕೆಡಿಸಿ, ಚಿಕ್ಕ ಮಕ್ಕಳನ್ನೂ ಸಾಯಿಸಿದ ಪೈಶಾಚಿಕ ಕೃತ್ಯಗಳನ್ನು ಬಿಡಿಸಿಟ್ಟಿದ್ದಾರೆ. ಅದರ ಇತ್ತೀಚಿನ ಮರು ಮುದ್ರಣನ್ನು ಕೊಚ್ಚಿನ್, ಕೇರಳ ವಿಶ್ವವಿದ್ಯಾಲಯಗಳ ಸಹಕಾರದಿಂದ ಪ್ರಖ್ಯಾತ ಮುಸ್ಲಿಂ ಇತಿಹಾಸಕಾರ ಡಾಕ್ಟರ್ ಸಿ. ಕೆ. ಕರೀಮ್ ಮರು ಪರಿಶೀಲಿಸಿ ಮುದ್ರಿಸಿದ್ದಾನೆ.
    ಅದೂ ಹೋಗಲಿ......ಬ್ರಿಟೀಷರಿಗೆ ಟಿಪ್ಪು ಸುಲ್ತಾನ ಪರಮ ವೈರಿ ಆದ್ದರಿಂದ ಇಂಗ್ಲೀಷರ ಕಣ್ಣಿಗೆ ಆತನಲ್ಲಿ ಎಲ್ಲವೂ ತಪ್ಪುಗಳಾಗಿಯೇ ಕಾಣೀಸಿರ ಬಹುದು. ಆ ‘ಸ್ವಾತಂತ್ರ್ಯ ಸಮರ ಯೋಧ’ನ ಹೆಸರು ಕೆಡಿಸಲಿಕ್ಕೆಂದೇ ಅವರು ಇಲ್ಲಸಲ್ಲದ್ದನ್ನು ಸೃಷ್ಟಿಸಿರಬಹುದು ಎಂದು ಅಂದುಕೊಳ್ಳೋಣವೇ?
     ಇಂಗ್ಲೀಷ್ ನವನಲ್ಲದ ವಿದೇಶಿಯ, 1790ರಲ್ಲಿ ಟಿಪ್ಪು ಸುಲ್ತಾನನ ಯುದ್ಧದ ಭೀಕರತೆಯನ್ನು ಅಲ್ಲಿಯೇ ಇದ್ದು ಕಣ್ಣಾರೆ ಕಂಡಿದ್ದ ಪೋರ್ಚುಗಲ್‍ನ ಯಾತ್ರಿಕ Barthoelomeo ತದನಂತರದ ಕಾಲದಲ್ಲಿ ಬರೆದ 'Voyage to East Indies’ನಲ್ಲಿ ಹೇಳಿರುವುದು ಇದು.
    First a cops of 30,000 barbarians butchered everybody on the way…Tipu was riding an elephant behind which another army of 30,000 soldiers followed. Most of the men and women were hanged in Calicut. First mothers were hanged with their children tied to necks of mothers. That barbarian Tipu Sultan tied the necked Christians and Hindus to the legs of elephants and made the elephants to move around till the bodies of the helpless victims were torn to pceces. Temples and Churches were ordered to be burned down, desecrated and destroyed….
(ಮುಂದೆ 30 ಸಾವಿರ ಸೈನಿಕರು ಹೊರಟು ದಾರಿಯಲ್ಲಿ ಕಾಣಿಸಿದ ಎಲ್ಲರನ್ನೂ ಕತ್ತರಿಸಿ ಹಾಕಿತು....ಟಿಪ್ಪು ಆನೆಯ ಮೇಲೆ ಸವಾರಿ ಮಾಡುತ್ತಿದ್ದಾನೆ. ಇನ್ನೂ 30 ಸಾವಿರ ಸೈನಿಕರು ಆತನ ಹಿಂದೆ ನಡೆದಿದ್ದಾರೆ. ಕಲ್ಲಿಕೋಟೆಯಲ್ಲಿದ್ದ ಸ್ತ್ರೀ ಪುರುಷರಲ್ಲಿ ಅತ್ಯಧಿಕ ಸಂಖ್ಯೆಯಲ್ಲಿ ನೇಣಿಗೆ ಹಾಕಿದ್ದಾರೆ. ಮೊದಲು ತಾಯಂದಿರನ್ನು ನೇಣಿಗೇರಿಸಿ ಮಕ್ಕಳನ್ನೂ ಅವರ ಕುತ್ತಿಗೆಗಳಿಗೆ ಬಿಗಿದಿದ್ದಾರೆ. ಕಿರಾತಕನಾದ ಟಿಪ್ಪು ಸುಲ್ತಾನ ಕ್ರೈಸ್ತರನ್ನು, ಹಿಂದುಗಳನ್ನು ಬೆತ್ತಲೆಯಾಗಿ ಆನೆಗಳ ಕಾಲುಗಳಿಗೆ ಕಟ್ಟಿಹಾಕಿಸಿ, ಅವರು ತುಂಡು ತುಂಡುಗಳಾಗಿ ಆಗುವವರೆಗೆ ಸುತ್ತಲೂ ನಡೆಸಿದ್ದಾನೆÉ. ದೇವಾಲಯಗಳು, ಚರ್ಚ್‍ಗಳನ್ನು ಸುಟ್ಟುಹಾಕಿ, ಮಲಿನ ಮಾಡಿ, ನಾಶ ಮಾಡಿಸಿದ್ದಾನೆ.)
    ಅದು ವಿಷಯ! ಎಲ್ಲ ಮತಗಳನ್ನು ಸಮಾನವಾಗಿ ಕಾಣಬೇಕು ಎನ್ನುವುದು ಜಾತ್ಯಾತೀತವಾದ....ಅಂತೆ ಅಲ್ಲವೇ?. ಮಾರಣಕಾಂಡ ನಡೆಸುವ ವಿಷಯದಲ್ಲಿಯೂ ಹಿಂದು, ಕ್ರೈಸ್ತ ಮತಗಳಿಗೆ ಸೇರಿದವರನ್ನು ಸಮಾನವಾಗಿ ಕಂಡಿದ್ದಾನೆ. ಆ ಕಾರಣವಾಗಿ ಇರಬಹುದು ಕರ್ನಾಟಕದ ಮುಖ್ಯಮಂತ್ರಿ ಸಿದ್ದರಾಮಯ್ಯ ನವರ ಕಾಂಗ್ರೆಸ್ ಕಣ್ಣಿಗೆ ಟಿಪ್ಪು ಸುಲ್ತಾನ ಅಸಲಿಯಾದ ಜಾತ್ಯಾತೀತವಾದಿ ಆಗಿಯೂ, ಮಾದರಿ ರಾಜನಾಗಿಯೂ, ರಾಷ್ಟ್ರೀಯ ಯೋಧನಾಗಿಯೂ ಕಾಣಿಸಿದ್ದು ಇರಬಹುದು.
    ಈ ಹಿಂದೆ ಕಾಂಗ್ರೆಸ್‍ನ ಅಧಿನಾಯಕರು ಆ ಮಹಾ’ಸ್ವಾತಂತ್ರ್ಯ ಸಮರಯೋಧ’ನ, ಸ್ಮರಣಾರ್ಥ ವಿಶೇಷ ಅಂಚೆ ಚೀಟಿಯನ್ನು ಬಿಡುಗಡೆ ಮಾಡಿದ್ದರು. ಜಾತ್ಯಾತೀತ ರಾಜ್ಯದಲ್ಲಿ ಸರ್ಕಾರದ ಅಧೀನದ ದೂರದರ್ಶನ  The Sword of Tipu Sultan ಎಂಬ ಹೆಸರಲ್ಲಿ ಟಿಪ್ಪು ಅವರನ್ನು ಆಕಾಶದ ಎತ್ತರಕ್ಕೆ ಎತ್ತಿತೋರಿಸಿ ಮಹಾವೀರನಾಗಿ, ಸುಗುಣಗಳ ರಾಶಿಯಾಗಿ ಚಿತ್ರಿಸುತ್ತಾ ಶುದ್ಧ ಸುಳ್ಳುಗಳನ್ನು ಹೆಣೆದು ಮೆಗಾ ಧಾರಾವಾಹಿಯನ್ನು ತೋರಿಸಿ ಸರ್ಕಾರದ ರುಣ ಸಂದಾಯ ಮಾಡಿತ್ತು. ಹಾಗಿದ್ದಾಗ ತಾವು ಮಾತ್ರ ಆ ‘ಮೈಸೂರು ಹುಲಿ’ಗೆ ಮರ್ಯಾದೆ ತೋರದೆ ಹೋದರೆ ತಪ್ಪಾಗುವುದೆಂದು ತಿಳಿದು, ಇಷ್ಟು ವರ್ಷಗಳ ನಂತರ ಆ ‘ರಾಷ್ಟ್ರೀಯ ವೀರ’ನ ಜನ್ಮದಿನವನ್ನು ಕನ್ನಡದ ಸಿದ್ದಣ್ಣ ಸರ್ಕಾರದ ವತಿಯಿಂದ ಅದ್ಧೂರಿಯಾಗಿ ನಡೆಸಿದ್ದಾರೆ.
    ಅದನ್ನು ನೋಡಿ ಗಿರೀಶ್ ಕಾರ್ನಾಡ್ ಅನ್ನುವ ‘ಜ್ಞಾನಪೀಠ’ ಹತ್ತಿದ ಮಹಾಜ್ಞಾನಿ ಆನಂದ ಪರವಶರಾಗಿ, ಇಮ್ಮಡಿಸಿದ ಉತ್ಸಾಹದಿಂದ “ಟಿಪ್ಪು ಸುಲ್ತಾನ ಎಂಬಾತ ಶಿವಾಜಿ, ನೇತಾಜಿಗಳ ಪಕ್ಕಕ್ಕೆ ತುರ್ತಾಗಿ ಸೇರ್ಪಡೆ ಗೊಳಿಸ¨ಹುದಾದ ಮಹಾನುಭವ ಎಂದು, ಅಂತಹ ಪುಣ್ಯಾತ್ಮನನ್ನು ಪ್ರತಿದಿನ ನೆನಪಿಸಿಕೊಳ್ಳುವಂತೆ ಬೆಂಗಳೂರು ಅಂತರ ರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಇಟ್ಟಿರುವ ಕೆಂಪೇಗೌಡರ ಹೆಸರನ್ನು ಪಕ್ಕಕ್ಕೆ ತಳ್ಳಿ ಟಿಪ್ಪು ಸುಲ್ತಾನನ ಹೆಸರನ್ನು ತಗುಲಿಸಿದರೆ ಮಾತ್ರ ಜಾತ್ಯಾತೀತ ಭಾರತದ ಕೀರ್ತಿ ಪ್ರತಿಷ್ಟೆಗಳು ಇನ್ನಷ್ಟು ಬೆಳಗಿ ಹೋಗುವುದಿಲ್ಲ'' ಎಂದು ಉದ್ಘಾರ ಮಾಡಿ ತಮ್ಮ ಹೆಚ್ಚುಗಾರಿಕೆಯನ್ನು ಪ್ರದರ್ಶನ ಮಾಡಿಕೊಂಡಿದ್ದಾನೆ.
   ಹಿಂದುಗಳನ್ನು ಹಿಂಸೆಮಾಡಿದ ಯಾರೇ ಆಗಲಿ ಅಂತಹವನು ಜಾತ್ಯಾತೀತ ಆಗಿರುತ್ತಾನೆ. ಆದುದರಿಂದ ನಮ್ಮ ಪುಣ್ಯಭೂಮಿಯಲ್ಲಿನ ಸಮಸ್ತ ವಾಮಪಕ್ಷ, ಪ್ರಗತಿಪರ, ಪ್ರಜಾತಂತ್ರ ಮೇಧಾವಿಗಳೆಲ್ಲರೂ ಸಹ ಆನಂದ ಪರವಶರಾಗಿದ್ದಾರೆ. ಹಾಗಿರುವಾಗ ಮತೋನ್ಮಾದಿಗಳಾಗಿರುವ ಹಿಂದುಗಳೇ ಆ ಮಹಾಪುರುಷನ ಜನ್ಮದಿನದ ಆಚರಣೆ ಅದ್ಧೂರಿಯಾಗಿ ನಡೆಯದಂತೆ ವರಾತ ತೆಗೆದಿದ್ದಾರೆ.
    ಅವರಿಗೆಲ್ಲೋ ಬುದ್ಧಿ ಭ್ರಮಣೆ ಯಾಗಿರಬೇಕು ಅಷ್ಟೇ. ‘ನಮ್ಮ ದೇಶದ ಮೇಲೆ ದಾಳಿಗೆ ಬನ್ನಿ. ನಿಮ್ಮೊಂದಿಗೆ ಕೈ ಜೋಡಿಸುತ್ತೇನೆ’ ಎಂದು ಟಿಪ್ಪು ಸುಲ್ತಾನ ಫ್ರೆಂಚರಿಗೆ ಕರೆಹೇಳಿ, ದೇಶದ್ರೋಹ ಎಸಗಿದರೇನಂತೆ? ಇಂಗ್ಟೀಷರನ್ನು ತೀವ್ರವಾಗಿ ವಿರೋಧಿಸಿದ್ದ. ಆದ ಕಾರಣ ಆತನನ್ನು ಸ್ವಾತಂತ್ರ್ಯ ಯೋಧ, ರಾಷ್ಟ್ರೀಯ ವೀರ ಎಂದು ಹೊಗಳಿ ಜಾತ್ಯಾತೀತ ಬುದ್ದಿಜೀವಿಗಳೊಂದಿಗೆ ಹಿಂದುಗಳು ಸಹ ಉಬ್ಬಿ ಹೋಗಿರ ಬಹುದಿತ್ತಲ್ಲವೆ?. ಶೃಂಗೇರಿ ಮಠಕ್ಕೆ ಮಾಡಿದ ಸಹಾಯವನ್ನಷ್ಟೇ ನೆನಪಿನಲ್ಲಿ ಇಟ್ಟುಕೊಳ್ಳ ಬಹುದಲ್ಲವೇ?. ಉತ್ತರ ಕರ್ನಾಟಕದಲ್ಲಿ, ಕೊಡಗಿನಲ್ಲಿ ಸಾವಿರಾರು ಹಿಂದುಗಳನ್ನು ಕೊಂದು, ಲಕ್ಷಾಂತರ ಮಂದಿಯನ್ನು ಬಲವಂತವಾಗಿ ಮತಾಂತರ ಗೊಳಿಸಿ, ನೂರಾರು ದೇವಾಲಯಗಳನ್ನು ನೆಲಕ್ಕುರುಳಿಸಿದ   ‘ಟೈಗರ್’ನ ಕಾರ್ಯಗಳನ್ನು ನಮ್ಮ ಜಾತ್ಯಾತೀತ ಮೇಧಾವಿಗಳಂತೆಯೇ ಅವರೂ ಮರೆತು ಹೋಗಬಹುದಲ್ಲವೇ?.
     ಅದರಲ್ಲಿಯೂ ‘ಮಹಾ ಜಯಂತಿ’ಗೆ ಸಿದ್ದರಾಮಯ್ಯ ಆಯ್ದುಕೊಂಡ ದಿನಾಂಕವಾದರೂ ಯಾವುದು? ಟಿಪ್ಪು ಸುಲ್ತಾನ ಹುಟ್ಟಿದ ನವಂಬರ್ 20ರಂದೇ? ಅಲ್ಲವೇ ಅಲ್ಲ. ಮೇಲುಕೋಟೆಯಲ್ಲಿ ಒಂದೇ ದಿನ 700 ಮಂದಿ ಅಯ್ಯಂಗಾರ್‍ಗಳನ್ನು ಟಿಪ್ಪು ಸಾಹೇಬರು ನೇಣಿಗೇರಿಸಿದ ನವಂಬರ್ 10 ಅನ್ನು!. ಆ ಭಯಾನಕ ದುರ್ದಿನವನ್ನು ಮರೆತು ಹೋಗಲಾರದೆ ಮೇಲುಕೋಟೆಯ ಅಯ್ಯಂಗಾರ್‍ಗಳು ಇಂದಿಗೂ ದೀಪಾವಳಿ ಹಬ್ಬವನ್ನೇ ಮಾಡಿಕೊಳ್ಳುವುದಿಲ್ಲವಂತೆ. ಅದು ಅವರ ಕರ್ಮ. ಇತರೆ ಊರುಗಳಲ್ಲಿನ ಹಿಂದುಗಳಿಗೆ ಏನಾಗಿದೆ? ಸಿದ್ದರಾಮಯ್ಯನ ಜಾತ್ಯಾತೀತ ಸರ್ಕಾರ ಮಿಕ್ಕೆಲ್ಲಾ ಕೆಲಸಗಳನ್ನು ಬದಿಗಿಟ್ಟು ಓರ್ವ ಜಾತ್ಯಾತೀತವಾದಿ ಮಹಾವೀರನನ್ನು-ಆತ ಸತ್ತ ಎರಡು ಶತಮಾನಗಳಿಗೆ ಗೋರಿಯಿಂದ ಎಬ್ಬಿಸಿ ‘ಜನ್ಮದಿನ’ವನ್ನು ಅದ್ಧೂರಿಯಾಗಿ ನಡೆಸುತ್ತಾ...ಹುಣ್ಣಿನ ಮೇಲೆ ಬರೆ ಎಳೆಯುವಂತೆ ಟಿಪ್ಪುವಿನಿಂದ ನೋವಿಗೆ ಒಳಗಾದ ಕೊಡಗು ಜಿಲ್ಲೆಯಲ್ಲಿ ಕೇರಳದಿಂದ ಕರೆತಂದ ಬಾಡಿಗೆ ಜನಗಳಿಂದÀ ದೊಡ್ಡದಾದ ಮೆರವಣಿಗೆಯನ್ನು ಹೊರಡಿಸಿದರೆ ಹಿಂದುಗಳು ಬಾಯಿ ಮುಚ್ಚಿಕೊಂಡು ತೆಪ್ಪಗೆ ಬಿದ್ದಿರ ಬಹುದಿತ್ತಲ್ಲವೇ?.
     ಶಾಂತಿಯುತವಾಗಿ ಪ್ರತಿಭಟನೆ ಮಾಡುವ ಹಕ್ಕನ್ನು ಸಂವಿಧಾನ ದೇಶದ ಎಲ್ಲ ನಾಗರೀಕರಿಗೂ ಕೊಟ್ಟಿರ ಬಹುದು. ಹಾಗೆಂದ ಮಾತ್ರಕ್ಕೇ ವಿಶ್ವ ಹಿಂದೂ ಪರಿಷತ್, ಭಜರಂಗದಳ ಮೊದಲಾದ ಹಿಂದೂ ಮತೋನ್ಮಾದ ಫಾಸಿಸ್ಟ್ ಸಂಸ್ಥೆಗಳು ಅಂತಹ ಮೂಲಭೂತ ಹಕ್ಕನ್ನು ತಮ್ಮ ಕೈಗಳಲ್ಲಿ ತೆಗೆದುಕೊಂಡರೆ ಹೇಗೆ ಸಹಿಸಿಕೊಂಡಿರುತ್ತೇವೆ? ಹಿಂದುತ್ವವಾದಿಗಳು ಶಾಂತಿಯುತವಾಗಿಯೇ ಗುಂಪುಸೇರಿ ಘೋಷಣೆಗಳನ್ನು ಕೂಗುತ್ತಾ ಇರಬಹುದು. ಅವರ ಕೈಗಳಲ್ಲಿ ಯಾವುದೇ ಆಯುಧಗಳೂ ಇಲ್ಲದೆ ಇರಬಹುದು. ಕೇರಳದಿಂದ ವಿಶೇಷ ವಾಹನಗಳಲ್ಲಿ ವಿಶೇಷ ಕಾರ್ಯಕ್ಕಾಗಿ ಕರೆಸಿಕೊಂಡಿದ್ದ ಬಾಂಗ್ಲಾದೇಶಿ ಮುಸಲ್ಮಾನರು, ಇತರೆ ದುಷ್ಕರ್ಮಿಗಳೇ ಅವರ ಮೇಲೆ ವಿನಾಕಾರಣವಾಗಿ ಮುಗಿಬಿದ್ದು ಕಾಲುಕೆರೆದು ಜಗಳಕ್ಕೆ ಕಾಲು ಕೆರೆದಿರಬಹುದು. ಆ ದಾಳಿಗಳಲ್ಲಿ 70ವರ್ಷ ಆಸುಪಾಸಿನ ವಯಸ್ಸಿನ ಒಬ್ಬ ಗೌರವಾನ್ವಿತ ವಿಹೆಚ್‍ಪಿ ಮುಖಂಡನ ಪ್ರಾಣ ಹೋಗಿರಬಹುದು.
      ಆದರೂ – ದಾಳಿ ನಡೆದಿದ್ದು ಹಿಂದುಗಳ ಮೇಲೆ ಆದಾಗ ಅದನ್ನು ‘ಎರಡು ಗುಂಪುಗಳ ನಡುವಿನ ಘರ್ಷಣೆ’ ಎಂದಾಗಿ ನೋಡಬೇಕು ಎಂದು ಜಾತ್ಯಾತೀತ ತತ್ವ ಹೇಳುವುದಿಲ್ಲವೇ? ಹಿಂದೂ ಸಂಸ್ಥೆಗಳವರು ಪ್ರತಿಭಟನೆಗೆ ಇಳಿದಿದ್ದರಿಂದಲೇ ನಡು ರಸ್ತೆಯಮೇಲೆ ಒಬ್ಬ ಹಿರಿಯ ವ್ಯಕ್ತಿಯ ಕೊಲೆ ನಡೆದಿದೆ ಆದ್ದರಿಂದ ತಪ್ಪೆಲ್ಲವೂ ಆ ಸಂಸ್ಥೆಗಳದ್ದೇ. ಕೆಣಕಿರುವ ಬಿಸಿರಕ್ತದ ಯುವಕರ ಕಣ್ಣಿಗೆ ಬಿದ್ದಿದ್ದರಿಂದಲೇ ಅಲ್ಲವೇ ದುರಾದೃಷ್ಟದಿಂದ ಆತನ ಪ್ರಾಣ ಹೋಗಿದ್ದು.
       ಒಂದುವೇಳೆ ಅಲ್ಪಸಂಖ್ಯಾತರ ಮೇಲೆ ಇಂತಹ ದಾಳಿ ನಡೆದಿದ್ದರೆ ಇಷ್ಟು ಹೊತ್ತಿಗೆ ಜಾತ್ಯಾತೀತ ಮೇಧಾವಿಗಳು ಬೊಬ್ಬೆ ಹೊಡೆಯುತ್ತಿದ್ದರು. ಸಾಹಿತಿಗಳು ಸವೆದು ಹೋದ ಕೆಲಸಕ್ಕೆ ಬಾರದ ಪ್ರಶಸ್ತಿಗಳನ್ನು ವಾಪಸ್ ಮಾಡುತ್ತಿದ್ದರು. ನ್ಯೂಯಾರ್ಕ್ ಟೈಮ್ಸ್ ಪತ್ರಿಕೆಯಲ್ಲಿ ಹಿಂದು ಫಾಸಿಜಂ ಅನ್ನು ಖಂಡಿಸುತ್ತಾ ಸಂಪಾದಕೀಯ ಬರೆದಿರುತ್ತಿದ್ದರು. ದಾಳಿ ನಡೆದಿದ್ದು ಹಿಂದುಗಳ ಮೇಲೆ ಆದ್ದರಿಂದ, ಮೃತಪಟ್ಟವನು ಹಿಂದೂ ಸಂಸ್ಥೆಯ ಮುಖಂಡನಾದ್ದರಿಂದ ಅದರ ಕುರಿತು ಮಾತನಾಡುವುದು ಮರ್ಯಾದಸ್ಥರಿಗೆ ನಿಷಿದ್ಧ. ಟಿಪ್ಪುವನ್ನು ಒಪ್ಪದ ಹಿಂದುಗಳ ಅಸಹಿಷ್ಣುತೆಯನ್ನೇ ಪವಿತ್ರರಾದ ಜಾತ್ಯಾತೀತವಾದಿಗಳು ಖಂಡನೆ ಮಾಡಬೇಕು. ಹಿಂದುಗಳು ಪ್ರತಿಭಟನೆ ಮಾಡಲೂ ಆಸ್ಪದ ನೀಡದ ಅನ್ಯರ ಅಸಹನೆಯನ್ನು ಹಿಡಿಸಿಕೊಂಡರೆ ಅವರ ಜಾತ್ಯಾತೀತವಾದಕ್ಕೆ ಭಂಗ ಉಂಟಾಗುತ್ತದೆ. ಗಿರೀಶ್ ಕಾರ್ನಾಡ್ ಎಂಬ ಜಾತ್ಯಾತೀತ ದೇಶಭಕ್ತನನ್ನು ಯಾರೋ ಹೊಟ್ಟೆಯುರಿದವನು ಟ್ವಿಟ್ಟರ್‍ನಲ್ಲಿ ಬೆದರಿಸಿದ್ದಾನೆಂಬ ಸುದ್ದಿಯೇ ಈ ಒಟ್ಟು ಘಟನೆಯಲ್ಲಿ ಪತ್ರಿಕೆಗಳಿಗೆ ತಲೆಬರಹ.
ಇಂಡಿಯನ್ ಬ್ರಾಂಡ್ ಸೆಕ್ಯುಲರಿಜಂ ಜಿಂದಾಬಾದ್!