Friday, November 20, 2015

ಸ್ಟೀವಿಯಾ ಬೆಳೆಯಿಂದ ರೈತರ ಬಾಳಿಗೆ ಸಿಹಿ


                                                         ಭಾರತ ಕೃಷಿ ಪ್ರಧಾನ ದೇಶವಾಗಿದ್ದು ಶೇ.70ರಷ್ಟು ಜನರು ಪ್ರತ್ಯಕ್ಷವಾಗಿ, ಪರೋಕ್ಷವಾಗಿ ಕೃಷಿ ಮತ್ತು ಕೃಷಿ ಆಧಾರವಾಗಿ ಜೀವನ ಸಾಗಿಸುತ್ತಿದ್ದಾರೆ. ಆದರೆ ನೀರಾವರಿ ಸೌಲಭ್ಯವಿಲ್ಲದೆ ಹೆಚ್ಚಿನ ರೈತರು ಮಳೆಯಾಶ್ರಿತ ಬೆಳೆಗಳನ್ನು ಬೆಳೆಯುತ್ತಿದ್ದು ಸಕಾಲದಲ್ಲಿ ಮಳೆ ಬಾರದೆ ಹೋದಲ್ಲಿ ನಷ್ಟ ಹೊಂದುತ್ತಿದ್ದಾರೆ. ಒಂದುವೇಳೆ ಎಲ್ಲ ಅನುಕೂಲಗಳಿದ್ದರೂ ಯಾವ ಬೆಳೆಯನ್ನು ಬೆಳೆಯುವುದು, ಅದರ ವಿಧಾನ ಏನು, ಬಂದ ಬೆಳೆಯನ್ನು ಎಲ್ಲಿ ಮಾರಾಟ ಮಾಡಬೇಕು, ಅದಕ್ಕೆ ದೊರೆಯಬಹುದಾದ ಬೆಲೆ ಎಷ್ಟು ಎಂಬುದರ ಮಾಹಿತಿ ಇಲ್ಲದೆ ತೊಂದರೆಯನ್ನು ಅನುಭವಿಸುತ್ತಿದ್ದಾರೆ. ಉತ್ತಮ ಬೆಳೆ ಬಂದರೂ ವ್ಯಾಪಾರಿಗಳು, ದಲ್ಲಾಳಿಗಳ ಕೈಚಳಕದಿಂದ ಅದಕ್ಕೆ ತಕ್ಕ ಬೆಲೆ ಸಿಗದೆ ಕೈ ಸುಟ್ಟುಕೊಳ್ಳುತ್ತಿದ್ದಾರೆ. ಹೀಗಾಗಿ ಸಾಲದ ಸುಳಿಗೆ ಸಿಲುಕಿ , ಅದರಿಂದ ಹೊರಬರುವ ದಾರಿ ಕಾಣದೆ ಪ್ರತಿವರ್ಷ ಸಾವಿರಾರು ಸಂಖ್ಯೆಯಲ್ಲಿ ರೈತರು ಆತ್ಮಹತ್ಯೆಗೆ ಶರಣಾಗುತ್ತಿದ್ದಾರೆ. ಇಂತಹ ಪರಿಸ್ಥಿತಿಗಳಲ್ಲಿ ಕೃಷಿಯನ್ನು ಲಾಭದಾಯಕವನ್ನಾಗಿಸಿ ರೈತರ ಬಾಳಿನಲ್ಲಿ ಸಿಹಿಯನ್ನು ತುಂಬಲು ಬಂದಿದೆ ಸ್ಟೀವಿಯಾ!.
        ಇದೇ ವೇಳೆ ಭಾರತವನ್ನು ಮಧುಮೇಹ(ಸಕ್ಕರೆ ಕಾಯಿಲೆ)ದ ರಾಜಧಾನಿ ಎಂದು ಹೇಳಲಾಗುತ್ತಿದ್ದು ಆತಂಕ ತರುವ ರೀತಿಯಲ್ಲಿ ಈ ಕಾಯಿಲೆಯು ವಿಸ್ತರಿಸುತ್ತಿದೆ. ಆಧುನಿಕ ಜೀವನ ಶೈಲಿಯಿಂದ ಕೊಡುಗೆಯಾಗಿ ಬಂದಿರುವ ಈ ಪಿಡುಗಿನಿಂದಾಗಿ ವಿಶ್ವದಾದ್ಯಂತ ಇಂದು ಸುಮಾರು 34ಕೋಟಿ, ಭಾರತದಲ್ಲಿ 6ಕೋಟಿಗೂ ಹೆಚ್ಚು ಜನರು ಬಳಲುತ್ತಿದ್ದಾರೆ. ಚಿಕ್ಕವಯಸ್ಸಿನ ಮಕ್ಕಳಿಂದ ಹಿಡಿದು ಯುವಕರು, ವಯೋವೃದ್ಧರನ್ನು ಕಾಡುತ್ತಿರುವ ಸಕ್ಕರೆ ಕಾಯಿಲೆಯಿಂದಾಗಿ ನಮ್ಮ ದೇಶದಲ್ಲಿ ಪ್ರತಿವರ್ಷ ಸುಮಾರು 10ಲಕ್ಷ ಮಂದಿ ಸಾವಿಗೀಡಾಗುತ್ತಿದ್ದಾರೆ. ಒಮ್ಮೆ ಈ ರೋಗಕ್ಕೆ ತುತ್ತಾದವರು ಸಿಹಿಯನ್ನು ದೂರವಿರಿಸಿ ಬಾಳೆಲ್ಲಾ ಕಹಿಯ ಅನುಭವದಿಂದ ನರಳಬೇಕಾಗಿರುವುದು ಮತ್ತಷ್ಟು ಖೇದ ತರುವ ಸಂಗತಿಯಾಗಿದೆ. ಅಂತಹವರಿಗೆ ಅತ್ಯುತ್ತಮ ಪರ್ಯಾಯ ಸಿಹಿಪದಾರ್ಥವಾಗಿ ಮತ್ತು ಸಕ್ಕರೆ ಕಾಯಿಲೆ, ಸ್ಥೂಲಕಾಯಗಳಿಂದ ದೂರವಿರಲು ಬಯಸುವವರಿಗಾಗಿ ಸ್ಟೀವಿಯಾ ವರದಾಯಿನಿಯಾಗಿದೆ.
          ದಕ್ಷಿಣ ಅಮೆರಿಕದ ಪೆರುಗ್ವೆ ದೇಶದ ಸ್ಟೀವಿಯಾವನ್ನು ಭಾರತದಲ್ಲಿ ಸಿಹಿ ತುಳಸಿ ಅಥವಾ ಮಧು ತುಳಸಿ ಎಂದೂ ಕರೆಯುತ್ತಾರೆ. ಬಹುವಾರ್ಷಿಕ ಬೆಳೆಯಾದ ಸ್ಟೀವಿಯಾ ಸದಾಕಾಲ ಬೆಳೆಯುವ ಉಪೋಷ್ಣ ಗಿಡವಾಗಿದ್ದು ಇದರ ಎಲೆಗಳಲ್ಲಿ ಸ್ಟೀವಿಯಾಲ್ ಗ್ಲೈಕೋಸೈಡ್ ಎಂಬ ಸಿಹಿಯನ್ನು ಉತ್ಪತ್ತಿ ಮಾಡುತ್ತದೆ. ಕ್ಯಾಲರಿ, ಕಾರ್ಬೋಹೈಡ್ರೇಟ್ ಮತ್ತು ಗ್ಲೈಸೇಮಿಕ್ ಸೂಚ್ಯಾಂಕ ರಹಿತವಾದ ಇದು ಆರೋಗ್ಯಕರ ಸಿಹಿಯಾಗಿದ್ದು ಇದನ್ನು ಬಿಸಿ ಮತ್ತು ತಣ್ಣನೆಯ ಪಾನೀಯಗಳು, ಖಾದ್ಯ ಮತ್ತು ಬೇಕಿಂಗ್ ಪದಾರ್ಥಗಳು, ಸಿಹಿತಿಂಡಿಗಳು, ಐಸ್‍ಕ್ರೀಂಗಳು ಮತ್ತು ಮಿಠಾಯಿಗಳಲ್ಲಿ ಬಳಸಬಹುದಾಗಿದೆ.
         ಸಮ ಶೀತೋಷ್ಣ ವಾತಾವರಣ ಇರುವ ಪ್ರದೇಶಗಳಲ್ಲಿ ಕಡಿಮೆ ನೀರಿನ ಬಳಕೆಯೊಂದಿಗೆ ಬೆಳೆಯಬಹುದಾದ, ರಾಸಾಯನಿಕ ಗೊಬ್ಬರಗಳ ಬಳಕೆ ಅಗತ್ಯವಿಲ್ಲದ ಮತ್ತು ಕಡಿಮೆ ಮಾನವ ಶಕ್ತಿಯ ಅವಶ್ಯಕತೆ ಇರುವ ಸ್ಟೀವಿಯಾ ಸಾಗುವಳಿಯಿಂದ ರೈತರು ಪ್ರತಿ ಎಕರೆಗೆ ವಾರ್ಷಿಕ ರೂ. 1 ಲಕ್ಷಕ್ಕೂ ಹೆಚ್ಚು ಆದಾಯ ಗಳಿಸಲು ಸಾಧ್ಯವಾಗಲಿದೆ.
       ರೈತರಿಗೆ ಲಾಭದಾಯಕವಾದ ಸ್ಟೀವಿಯಾ ಬೆಳೆಯನ್ನು ಪರಿಚಯಿಸಲು ಬೆಂಗಳೂರು ಮೂಲದ ಸ್ಟೀವಿಯಾ ವಲ್ರ್ಡ್ ಆಗ್ರೋಟೆಕ್ ಪ್ರೈವೇಟ್ ಲಿಮಿಟೆಡ್ ಕಂಪನಿಯು ತನ್ನ ಎರಡು ವರ್ಷಗಳ ಸತತ ಪರಿಶ್ರಮ ಮತ್ತು ಸಂಶೋಧನೆಗಳಿಂದ ರೈತರಿಗೆ ನೆರವಾಗಲು ಮುಂದೆ ಬಂದಿದೆ. ಸ್ಟೀವಿಯಾ ಸಾಗುವಳಿ, ಸಂಸ್ಕರಣೆ, ಉತ್ಪನ್ನಗಳ ಅಭಿವೃದ್ಧಿ ಮತ್ತು ಮಾರುಕಟ್ಟೆಯ ವಿಸ್ತರಣೆ ಸಂಸ್ಥೆಯ ಗುರಿಯಾಗಿದ್ದು ಪ್ರಧಾನಮಂತ್ರಿ ನರೇಂದ್ರ ಮೋದಿಯವರ ಸಂಕಲ್ಪದಂತೆ ಸ್ವಸ್ಥ ಭಾರತದ ನಿರ್ಮಾಣದಲ್ಲಿ ಭಾಗಿಯಾಗುವುದು ನಮ್ಮ ಆಶಯವಾಗಿದೆ ಎನ್ನುತ್ತಾರೆ ಸಂಸ್ಥೆಯ ನಿರ್ದೇಶಕರಾಗಿರುವ ಮಂಜುನಾಥ ಮಂಡಿಕಲ್ ಮತ್ತು ರಂಗನಾಥ್ ಕ್ರಿಷ್ಣನ್.
        ಸ್ಟೀವಿಯಾ ಕೃಷಿಗಾಗಿ ಸಂಸ್ಥೆಯು ತನ್ನದೇ ಹೊಲಗಳನ್ನು ಹೊಂದಿದೆ ಮತ್ತು ತನ್ನ ಯೋಜನೆಗಳನ್ನು ತ್ವರಿತಗತಿಯಲ್ಲಿ ಅನುಷ್ಟಾನಕ್ಕೆ ತರಲು ಮತ್ತು ದಿನೇದಿನೇ ಹೆಚ್ಚುತ್ತಿರುವ ಬೇಡಿಕೆಯನ್ನು ಪೂರೈಸುವ ಸಲುವಾಗಿ ಪ್ರಗತಿಪರ ರೈತರಿಗೆ ಗುತ್ತಿಗೆ ಬೇಸಾಯದ ಅವಕಾಶಗಳನ್ನೂ ನೀಡುತ್ತಿದೆ. ರೈತರಿಗೆ ಉತ್ತಮವಾದ ತಳಿಗಳನ್ನು ಸರಬರಾಜು ಮಾಡಿ, ತರಬೇತಿ ಹಾಗೂ ಕಾಲಕಾಲಕ್ಕೆ ಸಸ್ಯಗಳ ನಿರ್ವಹಣೆ ಕುರಿತಂತೆ ಸಲಹೆ ಸೂಚನೆಗಳನ್ನು ನೀಡುವುದರ ಜೊತೆಗೆ ಉತ್ತಮ ಗುಣಮಟ್ಟದ ಬೆಳೆಯನ್ನು ಪೂರ್ವ ನಿಗದಿತ ಬೆಲೆಗೆ ತಾನೇ ಖರೀದಿ ಮಾಡುವ ಭರವಸೆಯನ್ನೂ ನೀಡುತ್ತದೆ.
         ಸ್ಟೀವಿಯಾ ಬೆಳೆಗೆ ಉತ್ತಮ ನೀರು ಸರಬರಾಜು ಹಾಗೂ ಸಾವಯವ ಪದಾರ್ಥಗಳನ್ನು ಒಳಗೊಂಡ ಮರಳು ಮಿಶ್ರಿತ ಕೆಂಪು ಮಣ್ಣು ಉತ್ತಮವಾಗಿರುತ್ತದೆ. ಲವಣಯುಕ್ತ ಹಾಗೂ ನೀರು ನಿಲ್ಲುವ ಜೇಡಿ ಮಣ್ಣು ಇದಕ್ಕೆ ಸೂಕ್ತವಲ್ಲ. 25 ರಿಂದ 35 ಡಿಗ್ರಿ ಉಷ್ಣಾಂಶದ ಹವಾಮಾನವಿದ್ದು, ಉತ್ತಮ ಬೆಳಕು ಮತ್ತು ಬೆಚ್ಚಗಿನ ತಾಪಮಾನದಲ್ಲಿ ಹೆಚ್ಚು ಇಳುವರಿಯನ್ನು ನೀಡುವ ಈ ಬೆಳೆಗೆ ಹನಿ ನೀರಾವರಿ ಅಥವಾ ತುಂತುರು ನೀರಾವರಿಯ ವ್ಯವಸ್ಥೆಯನ್ನು ಮಾಡಿದರೆ ಇನ್ನಷ್ಟು ಉತ್ತಮ ಫಲಿತಾಂಶವನ್ನು ಕಾಣಬಹುದಾಗಿದೆ.
ಸಾಗುವಳಿ ವಿಧಾನ
       ಸ್ಟೀವಿಯಾ ಬೆಳೆಯುವ ಮೊದಲು ಮಣ್ಣು, ನೀರಿನ ಪರೀಕ್ಷೆ ಅಗತ್ಯವಾಗಿರುತ್ತದೆ. ಪ್ರಾರಂಭದಲ್ಲಿ ಭೂಮಿಯನ್ನು ಎರಡುಬಾರಿ ಆಳವಾಗಿ ಉಳುಮೆಮಾಡಿ ಕುಂಟೆ ಹೊಡೆಯಬೇಕು. ಕೊನೆಯಸಲ ಉಳುವಾಗ ಎಕರೆಗೆ ಸುಮಾರು ಅರ್ಧ ಟನ್‍ನಷ್ಟು ಸಾವಯವ ಗೊಬ್ಬರ ಹಾಕಬೇಕು. ಗೊಬ್ಬರವನ್ನು ಮಣ್ಣಿನೊಂದಿಗೆ ಚೆನ್ನಾಗಿ ಬೆರೆಯುವಂತೆ ಮಾಡಿ ಕಾಲುವೆಗಳನ್ನು ಮಾಡಿ ಭೂಮಿಯನ್ನು ಅನುಕೂಲಕರವಾದ ಅಳತೆಯಲ್ಲಿ ವಿಭಜನೆ ಮಾಡಬೇಕು. ಎತ್ತರಿಸಿದ ಪಾತಿಗಳು ಸ್ಟೀವಿಯಾ ಬೆಳೆಯಲು ಬಹಳ ಮಿತವ್ಯಯದ ವಿಧಾನ.
       ಹೀಗೆ ಸಿದ್ಧಗೊಳಿಸಿದ ಭೂಮಿಯಲ್ಲಿ 2ಅಡಿ ಅಗಲ ಮತ್ತು ಅರ್ಧಅಡಿ ಎತ್ತರದ ಸಾಲುಗಳನ್ನು ಮಾಡಿ ಗಿಡದಿಂದ ಗಿಡಕ್ಕೆ ಅರ್ಧಅಡಿ ಅಂತರಕೊಟ್ಟು ಎರಡು ಸಾಲುಗಳಲ್ಲಿ ನಾಟಿ ಮಾಡಬೇಕು. ಜನವರಿ ಯಿಂದ ಏಪ್ರಿಲ್ ತಿಂಗಳುಗಳು ನಾಟಿಮಾಡಲು ಸೂಕ್ತವಾದ ಕಾಲವಾಗಿದ್ದು ಎಕರೆಗೆ ಸುಮಾರು 40ಸಾವಿರ ಸಸಿಗಳನ್ನು ನೆಡಬಹುದಾಗಿದೆ. ಬೇಸಿಗೆಯಲ್ಲಿ ದಿನಕ್ಕೆ ಒಂದುಸಲ, ಉಳಿಕೆ ಕಾಲಗಳಲ್ಲಿ 3 ರಿಂದ 5 ದಿನಗಳಿಗೊಮ್ಮೆ ನೀರು ಹರಿಸಬೇಕಾಗಿರುತ್ತದೆ.
         ಒಂದು ಸಲ ನಾಟಿಮಾಡಿದ ಗಿಡವು 5ವರ್ಷ ಇಳುವರಿ ನೀಡಲಿದ್ದು 90 ದಿನಗಳಲ್ಲಿ ಬೆಳೆ ಮೊದಲ ಕೊಯ್ಲಿಗೆ ಸಿದ್ಧವಾಗುತ್ತದೆ. ಗಿಡದ ಎಲೆಗಳು ಬಲಿತು ಹೂವು ಬಿಡುವ ಮುನ್ನ ಗಿಡಗಳನ್ನು ಭೂಮಿಯ ಮಟ್ಟದಿಂದ 2ರಿಂದ 3ಅಂಗುಲದಷ್ಟು ಬುಡವನ್ನು ಬಿಟ್ಟು ಕತ್ತರಿಸಬೇಕು. ಒಂದು ವರ್ಷದಲ್ಲಿ ಒಟ್ಟು 4 ರಿಂದ 5 ಕೊಯ್ಲುಗಳನ್ನು ಮಾಡಬಹುದು. ಮೊದಲವರ್ಷ ಎಕರೆಗೆ ಸುಮಾರು 1.50ಟನ್, ಎರಡನೇ ವರ್ಷ ಸುಮಾರು 2.50ಟನ್, ಮೂರನೇ ವರ್ಷ ಸುಮಾರು 3.0ಟನ್, ನಾಲ್ಕನೇ ವರ್ಷ ಸುಮಾರು 2.50ಟನ್, ಐದನೇ ವರ್ಷ ಸುಮಾರು 2.0ಟನ್, ಹೀಗೆ ಒಟ್ಟಾಗಿ 11.50ಟನ್‍ಗಳಷ್ಟು ಇಳುವರಿಯನ್ನು(ಒಣಗಿದ ಎಲೆ) ಪಡೆಯಬಹುದಾಗಿರುತ್ತದೆ.
           ಪ್ರತಿ ಕಿಲೋಗ್ರಾಂ ಸ್ಟೀವಿಯಾ ಎಲೆಯನ್ನು ಅದರ ಗುಣಮಟ್ಟ ಆಧರಿಸಿ ರೂ.70 ರಿಂದ ರೂ.110 ವರೆಗೆ ಖರೀದಿ ಮಾಡುವುದಾಗಿ ಕರಾರಿನ ಮುಖಾಂತರ ತಮ್ಮ ಸಂಸ್ಥೆಯು ಭರವಸೆ ನೀಡುತ್ತದೆ ಎಂದು ಹೇಳುತ್ತಾರೆ ಮಂಜುನಾಥ ಮಂಡೀಕಲ್. ಈ ಬೆಳೆಯ ಸಾಗುವಳಿಗೆ ಮೊದಲಲ್ಲಿ ಎಕರೆಗೆ ಸುಮಾರು ರೂ.1.20 ಲಕ್ಷ ವೆಚ್ಚವಾಗಲಿದ್ದು ಅದರಲ್ಲಿ ಸುಮಾರು ರೂ.45ಸಾವಿರ ಸಬ್ಸೀಡಿಯನ್ನಾಗಿ ನೀಡಲು ಕೇಂದ್ರ ಸರ್ಕಾರದ ಅಧೀನ ಸಂಸ್ಥೆಯಾಗಿರುವ ರಾಷ್ಟ್ರೀಯ ಔಷಧೀಯ ಸಸ್ಯಗಳ ಮಂಡಳಿಯು ಮುಂದೆ ಬಂದಿದೆ. ಇದಲ್ಲದೆ ರೈತರನ್ನು ಪ್ರೋತ್ಸಾಹಿಸಲು ಸಂಸ್ಥೆಯ ವತಿಯಿಂದ ಎಕರೆಗೆ ರೂ.40ಸಾವಿರ ಮುಂಗಡವಾಗಿ ನೀಡಲಿದ್ದು ಅದನ್ನು ಬೆಳೆಯ ಖರೀದಿ ಸಮಯದಲ್ಲಿ ಹಿಂಪಡೆಯಲಿದೆ. ಹಾಗಾಗಿ ಈ ಬೆಳೆಯನ್ನು ಸಾಗುವಳಿ ಮಾಡುವುದು ಹೆಚ್ಚಿನ ಹೊರೆಯಾಗಲಾರದು ಎಂದು ಅವರು ತಿಳಿಸುತ್ತಾರೆ. ಎಕರೆಗೆ ವಾರ್ಷಿಕ ರೂ.1ಲಕ್ಷಕ್ಕೂ ಹೆಚ್ಚು ರೈತರಿಗೆ ಲಾಭ ಗಳಿಸ ಬಹುದಾಗಿದೆ ಎಂದವರು ತಿಳಿಸುತ್ತಾರೆ.
ಹೆಚ್ಚಿನ ಮಾಹಿತಿಗಾಗಿ 080-23621777,23625888 ಅಥವಾ www.ssteviaworld.com ಅನ್ನು ಸಂಪರ್ಕಿಸಬಹುದು.

No comments:

Post a Comment