Thursday, November 19, 2015

ಶುದ್ಧ ಮನಸ್ಸಿಗೆ ಭಗವಂತನ ರಕ್ಷೆ : ಸುನೀಲ್ ಗವಾಸ್ಕರ್

ಚಿಕ್ಕಬಳ್ಳಾಪುರ, ನವಂಬರ್ 18: ಪ್ರತಿದಿನ ನಮ್ಮನ್ನು ನಾವು ಸತ್ಕಾರ್ಯದಲ್ಲಿ ತೊಡಗಿಸಿಕೊಂಡರೆ ಆ ಭಗವಂತನು ನಮ್ಮನ್ನು ಸದಾ ಕಾಪಾಡುತ್ತಾ, ಸನ್ಮಾರ್ಗದಲ್ಲಿ ಮುನ್ನಡೆಯಲು ಪ್ರೇರೇಪಿಸುತ್ತಾನೆ. ಇದು ನನ್ನ ಜೀವನದಲ್ಲಿ ಅಕ್ಷರಶಃ ನಡೆದ ಘಟನೆಯಾಗಿದೆ ಎಂದು ಭಾರತೀಯ ಕ್ರಿಕೆಟ್ ರಂಗದ ದಂತಕಥೆ ಸುನೀಲ್ ಗವಾಸ್ಕರ್ ಹೇಳಿದರು. ಮುದ್ದೇನಹಳ್ಳಿಯ ಸತ್ಯಸಾಯಿ ಗ್ರಾಮದಲ್ಲಿ ನೂತನವಾಗಿ ನಿರ್ಮಿಸಲಾಗಿರುವ ಶ್ರೀ ಸತ್ಯಸಾಯಿ ಪ್ರೇಮಾಮೃತಂ ಸಭಾಂಗಣದ ಉದ್ಘಾಟನಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಭವನದ ಉದ್ಘಾಟನೆಗೆ ಆಗಮಿಸಬೇಕಿದ್ದ ಚತ್ತೀಸ್‍ಗಢ ರಾಜ್ಯದ ಮುಖ್ಯಮಂತ್ರಿ ಡಾ. ರಮಣ ಸಿಂಗ್ ಅನಿವಾರ್ಯ ಕಾರಣಗಳಿಂದ ಬರಲಾಗದ ಕಾರಣ ಅವರ ಅನುಪಸ್ಥಿತಿಯಲ್ಲಿ ಶ್ರೀ ಸತ್ಯಸಾಯಿ ಲೋಕಸೇವಾ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷರಾದ ಉಳುವಾನ ಗೋವಿಂದ ಭಟ್ಟರು ಶೀ ಸತ್ಯಸಾಯಿ ಪ್ರೇಮಾಮೃತಂ ಸಭಾಂಗಣದ ಶಿಲಾಫಲಕವನ್ನು ಅನಾವರಣ ಗೊಳಿಸಿ ಲೋಕಾರ್ಪಣೆ ಮಾಡಿದರು.
ಸತ್ಯಸಾಯಿ ಶಿಕ್ಷಣ ಸಂಸ್ಥೆಗಳ ಮಾರ್ಗದರ್ಶಿ ಮತ್ತು ಟ್ರಸ್ಟೀಗಳು ಆದ ಬಿ.ಎನ್.ನರಸಿಂಹಮೂರ್ತಿ ಅವರು ಪ್ರಾಸ್ತಾವಿಕ ಭಾಷಣಮಾಡಿ ಮಾತನಾಡುತ್ತಾ ಸಂಸ್ಥೆಯ ಕಾರ್ಯಸೂಚಿಯನ್ನು ನೆರೆದಿರುವ ಭಕ್ತರ ಮುಂದೆ ಮಂಡಿಸಿದರು. ಇನ್ನೊಬ್ಬ ಅತಿಥಿ ಶ್ರೀನಿವಾಸ್ ಸಾಂದರ್ಭಿಕವಾಗಿ ಮಾತನಾಡಿದರು.
ಈ ವೈವಿಧ್ಯಮಯ ಕಾರ್ಯಕ್ರಮದಲ್ಲಿ ಸಭಾಭವನದ ಕುರಿತಾದ ಸಾಕ್ಷ್ಯಚಿತ್ರವನ್ನು ಬಿಡುಗಡೆ ಮಾಡಲಾಯಿತು. ಸತ್ಯಸಾಯಿ ಚಳುವಳಿಯ ಪಿತಾಮಹನೆಂದೇ ಬಿಂಬಿಸಲ್ಪಡುವ ಇಂದೂಲಾಲ್ ಷಾ ಅವರು ಬರೆದಿರುವ ಅವರ ಆತ್ಮಕಥೆ ‘ಎ ಲೈಫ್ ಇನ್ ಸರ್ವೀಸ್’ ಕೃತಿಯನ್ನು ಭಕ್ತವೃಂದಕ್ಕೆ ಅರ್ಪಿಸಲಾಯಿತು. ‘ಸನಾತನವಾಣಿ’ ಎಂಬ ಅಂತರ್ಜಾಲ ಬಾನುಲಿ ಕೇಂದ್ರಕ್ಕೆ ಇದೇ ಸಂದರ್ಭದಲ್ಲಿ ಚಾಲನೆ ನೀಡಲಾಯಿತು.
ಭವನದ ನಿರ್ಮಾಣದಲ್ಲಿ ಶ್ರಮಿಸಿದ ಪ್ರತಿಯೊಬ್ಬರನ್ನೂ ಸ್ಮರಣಿಕೆಗಳನ್ನು ನೀಡಿ ಸನ್ಮಾನಿಸಲಾಯಿತು. ಈ ಕಾರ್ಯಕ್ರಮವನ್ನು ಖ್ಯಾತ ಕ್ರಿಕೆಟಿಗ ಗುಂಡಪ್ಪ ಆರ್ ವಿಶ್ವನಾಥ್ ಮೊದಲಾದ ಗಣ್ಯರು ನೆರವೇರಿಸಿದರು.
ಪದ್ಮವಿಭೂಷಣ ಡಾ. ಮಂಗಳಂಪಲ್ಲಿ ಬಾಲಮುರಳೀಕೃಷ್ಣ, ಡಾ.ಕೆ.ಕೃಷ್ಣಕುಮಾರ್ ಅವರಿಂದ ಕರ್ಣಾಟಕ ಶಾಸ್ತ್ರೀಯ ಸಂಗೀತದ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.

No comments:

Post a Comment