- ಕನ್ನಲ್ಲಿ, ಸೀಗೇಹಳ್ಳಿ ತ್ಯಾಜ್ಯ ಸಂಸ್ಕರಣಾ ಘಟಕಗಳಿಗೆ ಜನರ ತೀವ್ರ ವಿರೋಧ
- ಡಿ. 21ರಂದು ಭಾರೀ ಪ್ರತಿಭಟನೆಗೆ ಸಜ್ಜು
- ಡಿ. 21ರಂದು ಭಾರೀ ಪ್ರತಿಭಟನೆಗೆ ಸಜ್ಜು
ಬೆಂಗಳೂರು : ಬೆಂಗಳೂರು ನಗರವು ಕಳೆದ ಎರಡು ದಶಕಗಳಿಂದ ಲಂಗೂ ಲಗಾಮು ಇಲ್ಲದೆ ಬೆಳೆಯುತ್ತಿದೆ. ದೇಶದ ಮೂಲೆ ಮೂಲೆಗಳಿಂದ ಲಕ್ಷಾಂತರ ಜನರು ಉದ್ಯೋಗ, ವ್ಯಾಪಾರ ಇನ್ನಿತರೆ ಕಾರಣಗಳಿಂದಾಗಿ ಇಲ್ಲಿಗೆ ಬಂದು ನೆಲೆ ಕಂಡುಕೊಳ್ಳುತ್ತಿದ್ದಾರೆ. ಅದೇ ವೇಗದಲ್ಲಿಯೇ ಇಲ್ಲಿ ಮನೆಗಳು, ವಾಣಿಜ್ಯ ಕಟ್ಟಡಗಳು, ಗಗನ ಚುಂಬಿಗಳು ತಲೆ ಎತ್ತುತ್ತಿವೆ.
ಆದರೆ ಆ ಬೆಳವಣಿಗೆಯ ವೇಗಕ್ಕೆ ನಮ್ಮನ್ನಾಳುವ ಸರ್ಕಾರಗಳು, ಆಡಳಿತ ಸಂಸ್ಥೆಗಳು ಸಜ್ಜು ಗೊಳ್ಳುತ್ತಿಲ್ಲ. ಜನರಿಗೆ ಕನಿಷ್ಟ ಮಟ್ಟದ ಸೌಕರ್ಯಗಳಾದ ಕುಡಿಯುವ ನೀರು, ವಿದ್ಯುತ್ತು, ರಸ್ತೆ, ಚರಂಡಿ ಮೊದಲಾದವುಗಳನ್ನು ಒದಗಿಸಲೇ ಅವು ಹರಸಾಹಸ ಮಾಡುತ್ತಿವೆ. ಇದರ ಜೊತೆಗೆ ಇತ್ತೀಚಿನ ಕೆಲ ವರ್ಷಗಳಿಂದ ಪಾಲಕರಿಗೆ ದೊಡ್ಡ ತಲೆನೋವಾಗಿ ಎದುರಾಗಿದೆ ಕಸದ ಸಮಸ್ಯೆ!.
ಮೊದಲೆಲ್ಲಾ ನಗರದಲ್ಲಿ ಉತ್ಪತ್ತಿ ಆಗುವ ಕಸವನ್ನು ಊರಾಚೆಗೆ ಕೊಂಡೊಯ್ದು ಎಲ್ಲೋ ಖಾಲೀ ಜಾಗದಲ್ಲಿ ಸುರಿದು ಬರುತ್ತಿದ್ದರು. ಅದು ಮಳೆ, ಗಾಳಿಗೆ ಕೊಳೆತು ಗೊಬ್ಬರವಾಗುತ್ತಿತ್ತು. ಆ ಗೊಬ್ಬರವನ್ನು ಅಕ್ಕ ಪಕ್ಕದ ಹಳ್ಳಿಗಳ ರೈತರು ಖರೀದಿಸಿ ತಮ್ಮ ಹೊಲ, ಗದ್ದೆಗಳಿಗೆ ಕೊಂಡೊಯ್ಯುತ್ತಿದ್ದರು. ಹೀಗಾಗಿ ಅದಾಗ ಒಂದು ಸಮಸ್ಯೆ ಆಗಿರಲಿಲ್ಲ.
ಆದರೆ ಪ್ಲಾಸ್ಟಿಕ್ ಎಂಬ ಮಹಮ್ಮಾರಿ ಅದ್ಯಾವಾಗ ಕಾಲಿಟ್ಟಿತೋ ನೋಡಿ, ಅಲ್ಲಿಂದಲೇ ಉದ್ಭವವಾಯಿತು ಸಮಸ್ಯೆ. ಎಲ್ಲ ಬಗೆಯ ಗೃಹ ಬಳಕೆ ಸಾಮಗ್ರಿಗಳು, ಆಟಿಕೆಗಳು, ಎಲ್ಲಕ್ಕಿಂತ ಮುಖ್ಯವಾಗಿ ಪ್ಯಾಕಿಂಗ್‍ಗೆ ಬಳಸುವ ತೆಳುವಾದ ಪ್ಲಾಸ್ಟಿಕ್ ಕವರುಗಳು, ಕ್ಯಾರಿ ಬ್ಯಾಗ್‍ಗಳು, ಹಾಲಿನ ಕವರ್‍ಗಳು, ನೀರಿನ ಬಾಟಲಿಗಳು ಎಲ್ಲವೂ ಪ್ಲಾಸ್ಟಿಕ್ ಮಯವಾಗಿ ಬಿಟ್ಟಿವೆ. ಈ ಎಲ್ಲ ಬಗೆಯ ಪ್ಲಾಸ್ಟಿಕ್‍ಗಳು ಬಳಕೆಯಾದ ನಂತರ ಕಸಕ್ಕೆ ಸೇರುತ್ತಿವೆ. ಇದರಿಂದಾಗಿ ಕಸವು ಕೊಳೆಯದಂತಾಗಿ ಅದರಿಂದ ಬಿಡುಗಡೆ ಆಗುತ್ತಿರುವ ರಾಸಾಯನಿಕ ಅನಿಲಗಳು ಗಾಳಿಗೆ ಸೇರಿ ದುರ್ಗಂಧಕ್ಕೆ ಕಾರಣವಾವುತ್ತಿವೆ ಅಲ್ಲದೆ ಜನರ ಆರೋಗ್ಯಕ್ಕೂ ಮಾರಕವಾಗುತ್ತಿವೆ.
ನಗರವು ವಿಸ್ತಾರವಾಗಿ ಬೆಳೆಯುತ್ತಿದ್ದಂತೆ ಸುತ್ತಮುತ್ತಲಿನ ಹಳ್ಳಿ, ಪಟ್ಟಣಗಳನ್ನೂ ತನ್ನ ತೆಕ್ಕೆಗೆ ಸೇರಿಸಿ ಕೊಳ್ಳುತ್ತಿದೆ. ಅವೂ ಸಹ ನಗರೀಕರಣಗೊಳ್ಳುತ್ತಾ ಅಲ್ಲಿನ ಭೂಮಿಗೆ ಬಂಗಾರದ ಬೆಲೆ ಬಂದು ಬಿಟ್ಟಿದೆ. ಹೀಗಾಗಿ ಬೆಂಗಳೂರಿನ ಸುತ್ತಮುತ್ತಾ 50-60 ಕಿಲೋಮೀಟರ್ ದೂರದವರೆಗೆ ಎಲ್ಲಿಯೂ ಖಾಲಿ ಜಾಗಗಳೇ ಕಾಣುತ್ತಿಲ್ಲ. ಕಸವನ್ನು ಸುರಿಯಲು ಜಾಗ ಸಿಗುತ್ತಿಲ್ಲ. ಅಲ್ಲದೆ ಒಟ್ಟಾದ ಕಸದಲ್ಲಿ ಸಾವಯವ(ಕೊಳೆಯ ಬಹುದಾದ) ಹಸಿಕಸ ಮತ್ತು ಒಣಕಸವನ್ನು ಬೇರ್ಪಡಿಸುವುದೇ ದೊಡ್ಡ ಸವಾಲಾಗಿ ಪರಿಣಮಿಸಿದೆ.
ಈ ಹಿನ್ನೆಲೆಯಲ್ಲಿ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯು ನಗರದ ಹೊರವಲಯದ ಕೆಲವು ಕಡೆಗಳಲ್ಲಿ ಕಸ ವಿಲೇವಾರಿ ಮತ್ತು ಸಂಸ್ಕರಣಾ ಘಟಕಗಳನ್ನು ಸ್ಥಾಪಿಸುತ್ತಿದೆ. ನಗರದ ವ್ಯಾಪ್ತಿಯಲ್ಲಿ ದಿನ ನಿತ್ಯ ಉತ್ಪನ್ನವಾಗುವ ಕಸವನ್ನು ಸಂಗ್ರಹಿಸಿ ಲಾರಿಗಳ ಮುಖಾಂತರ ಸದರಿ ಘಟಕಗಳಿಗೆ ಕೊಂಡೊಯ್ದು ಹಸಿಕಸ ಮತ್ತು ಒಣಕಸಗಳಾಗಿ ಬೇರ್ಪಡಿಸಿ, ಹಸಿಕಸವನ್ನು ಜೈವಿಕ ಅನಿಲ ಮತ್ತು ಕಂಪೋಸ್ಟ್ ಗೊಬ್ಬರವನ್ನಾಗಿ ಮಾರ್ಪಡಿಸಿ, ಪ್ಲಾಸ್ಟಿಕ್ ಆದಿಯಾಗಿ ವಿವಿಧ ಬಗೆಯ ತ್ಯಾಜ್ಯಗಳಿಂದ ಕೂಡಿದ ಒಣಕಸವನ್ನು ಸಂಸ್ಕರಿಸಿ ಮರು ಬಳಕೆ ಮಾಡಲು ಉಪಯೋಗವಾಗುವ ಉತ್ಪನ್ನಗಳನ್ನು ಮಾಡುವುದು ಅದರ ಉದ್ದೇಶವಾಗಿದೆ.
ಮೂಲದಲ್ಲಿಯೇ ಕಸವನ್ನು ಬೇರ್ಪಡಿಸುವಲ್ಲಿ ನಾಗರೀಕರು ಆಸಕ್ತಿ ತೋರದ ಕಾರಣ ನಗರದೆಲ್ಲೆಡೆ ಕಸದ ರಾಶಿಗಳು ಗಬ್ಬೆದ್ದು ನಾರುತ್ತಿದ್ದು, ಅದನ್ನು ಒಟ್ಟುಮಾಡಿ ಸಂಸ್ಕರಣಾ ಘಟಕಗಳಿಗೆ ಸಾಗಿಸುವುದೇ ಬಹಳ ದುಬಾರಿಯ ಮತ್ತು ಪ್ರಯಾಸದ ಕೆಲಸವಾಗಿದೆ. ಮತ್ತೊಂದೆಡೆ ಸಂಸ್ಕರಣಾ ಘಟಕಗಳ ನಿರ್ಮಾಣ ಮತ್ತು ಅವುಗಳಲ್ಲಿ ಬಳಸುತ್ತಿರುವ ಅಸಮರ್ಪಕ ವಿಧಾನಗಳಿಂದಾಗಿ ಸುತ್ತಮುತ್ತಲ ಹಳ್ಳಿಗಳಿಗೆ ಭರಿಸಲು ಅಸಾಧ್ಯವಾದ ದುರ್ಗಂಧ ವ್ಯಾಪಿಸುತ್ತಿದ್ದು ಜನರ ಆರೋಗ್ಯ ಹದಗೆಡಿಸುತ್ತಿರುವುದರ ಜೊತೆಗೆ ನಾನಾ ವಿಧವಾದ ಸಮಸ್ಯೆಗಳನ್ನು ತಂದೊಡ್ಡುತ್ತಿವೆ. ಹೀಗಾಗಿ ಅಲ್ಲಿನ ಜನರು ಕಸ ವಿಲೇವಾರಿ ಮತ್ತು ಸಂಸ್ಕರಣಾ ಘಟಕಳಿಗೆ ತೀವ್ರ ವಿರೋಧವನ್ನು ತೋರುತ್ತಿದ್ದಾರೆ.
ಇದೇ ರೀತಿಯಾಗಿ ಬೆಂಗಳೂರು ಉತ್ತರ ತಾಲ್ಲೂಕು, ಯಶವಂತಪುರ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯ ಮಾಗಡಿ ರಸ್ತೆಗೆ ಹೊಂದಿಕೊಂಡಂತಿರುವ ಕನ್ನಲ್ಲಿ, ಸೀಗೆಹಳ್ಳಿ ಗ್ರಾಮಗಳ ಸೆರಗಿನಲ್ಲಿ ಮತ್ತು ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರವು ನಿರ್ಮಿಸುತ್ತಿರುವ ಪ್ರತಿಷ್ಟಿತ ಕೆಂಪೇಗೌಡ ಬಡಾವಣೆಯ ಪಕ್ಕದಲ್ಲಿಯೇ ಎರಡು ಕಸ ವಿಲೇವಾರಿ ಮತ್ತು ಸಂಸ್ಕರಣಾ ಘಟಕಗಳನ್ನು ಸ್ಥಾಪಿಸಲಾಗಿದೆ. ಸುಮಾರು 30 ಎಕರೆ ವಿಸ್ತೀರ್ಣದಲ್ಲಿ ಸ್ಥಾಪಿಸಿರುವ ಈ ಘಟಕಗಳಿಗೆ ಬಿಬಿಎಂಪಿ ವ್ಯಾಪ್ತಿಯ ಸುಮಾರು 100 ವಾರ್ಡುಗಳಿಂದ ದಿನನಿತ್ಯ ಸುಮಾರು 100ಲಾರಿಗಳಿಗೂ ಹೆಚ್ಚು ಕಸವನ್ನು ಸಾಗಿಸಲಾಗುತ್ತಿದೆ. ಇದರಿಂದಾಗಿ ಆ ಸುತ್ತಲಿನ ಆರು ಗ್ರಾಮ ಪಂಚಾಯತಿಗಳಿಗೆ ಸೇರಿದ ಸುಮಾರು 30 ಹಳ್ಳಿಗಳ ಜನರು ದುರ್ವಾಸನೆ ಮತ್ತಿತರೆ ಸಮಸ್ಯೆಗಳನ್ನು ಎದುರಿಸುವಂತಾಗಿದೆ.
ಕನ್ನಲ್ಲಿ, ಸೀಗೆಹಳ್ಳಿ ಕಸ ವಿಲೇವಾರಿ ಮತ್ತು ಸಂಸ್ಕರಣಾ ಘಟಕಗಳ ಸುತ್ತಮುತ್ತ ಕೊಡಿಗೇಹಳ್ಳಿ, ಸೂಲೀಕೆರೆ, ಚನ್ನೇನಹಳ್ಳಿ, ಕಡಬಗೆರೆ, ಮಾಚೋಹಳ್ಳಿ ಮತ್ತು ಕಾಚೋಹಳ್ಳಿ ಪಂಚಾಯ್ತಿಗಳಿಗೆ ಸೇರಿದ ಸುಮಾರು 30 ಹಳ್ಳಿಗಳಿದ್ದು ಸಾವಿರಾರು ಜನರು ವಾಸಮಾಡುತ್ತಿದ್ದಾರೆ.
ಘಟಕಗಳಿಗದ ಹೊರಬರುತ್ತಿರುವ ದುರ್ವಾಸನೆ ಮತ್ತು ಹೆಚ್ಚುತ್ತಿರುವ ನೊಣ, ಸೊಳ್ಳೆಗಳ ಕಾಟದಿಂದಾಗಿ ಜನರು ಜೀವಿಸುವುದೇ ಕಷ್ಟವಾಗುತ್ತಿದೆ.
ಘಟಕಗಳಿಂದ ಹೊರಬರುವ ವಿಷಕಾರಕ ಗಾಳಿಯ ಸೇವನೆಯಿಂದ ಜನರ ಆರೋಗ್ಯ ಹದಗೆಡುತ್ತಿದ್ದು ಚರ್ಮರೋಗಗಳು, ಉಸಿರಾಟದ ಸಮಸ್ಯೆಗಳು ಹೆಚ್ಚಾಗುತ್ತಿವೆ. ಇಲ್ಲಿನ ಸರ್ಕಾರಿ ಆಸ್ಪತ್ರೆಯ ವೈದ್ಯಾಧಿಕಾರಿಗಳ ಪ್ರಕಾರ ಈ ಕೆಲವು ತಿಂಗಳಲ್ಲಿ ಆಸ್ಪತ್ರೆಗೆ ಬರುವ ರೋಗಿಗಳ ಸಂಖ್ಯೆ ಹತ್ತುಪಟ್ಟು ಹೆಚ್ಚಾಗಿದೆ.
ಘಟಕಗಳಿಂದ ಹೊರಬೀಳುವ ಮಲಿನವಾದ ನೀರು ಭೂಮಿಗೆ ಸೇರಿ ಅಂತರ್ಜಲವನ್ನು ಮಲಿನ ಗೊಳಿಸುತ್ತಿದೆ. ಅದರ ಪರಿಣಾಮಗಳು ಮುಂದಿನ ದಿನಗಳಲ್ಲಿ ಬಹುದೊಡ್ಡ ಸಮಸ್ಯೆಯಾಗಿ ಕಾಡುವುದು ನಿಶ್ಚಿತ.
ಘಟಕಗಳ ಸುತ್ತಮುತ್ತ ಹಲವು ಸರ್ಕಾರಿ ಶಾಲೆಗಳಲ್ಲದೆ ಸುಮಾರು 10 ಪ್ರತಿಷ್ಟಿತ ಖಾಸಗಿ ಶಾಲಾ ಕಾಲೇಜುಗಳಿದ್ದು ಸಾವಿರಾರು ವಿದ್ಯಾರ್ಥಿಗಳು ಅವುಗಳಲ್ಲಿ ಕಲಿಯುತ್ತಿದ್ದಾರೆ.
ಎರಡು ಘಟಕಗಳ ಮಧ್ಯದಲ್ಲಿ ಬಿಎಂಟಿಸಿ ಘಟಕ.35(ಕನ್ನಲ್ಲಿ ಘಟಕ) ಇದ್ದು ಅದರಲ್ಲಿ ಚಾಲಕರು, ನಿರ್ವಾಹಕರು ಸೇರಿ ಸುಮಾರು 700ಮಂದಿ ಸಿಬ್ಬಂದಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಜೊತೆಗೆ ಸಿಬ್ಬಂದಿಗಾಗಿ ಘಟಕದ ಆವರಣದಲ್ಲಿಯೇ ನಿರ್ಮಿಸಿರುವ ಸುಮಾರು 30 ವಸತಿಗೃಹಗಳಲ್ಲಿ ಸುಮಾರು ಸಾವಿರ ಜನ ವಾಸವಾಗಿದ್ದಾರೆ.
ಇಲ್ಲಿನ ಖಾಸಗಿ ಕಂಪನಿಗಳಲ್ಲಿ ಸುಮಾರು 3ಸಾವಿರ ಜನ ಕೆಲಸ ಮಾಡುತ್ತಿದ್ದು, ದುರ್ವಾಸನೆಯನ್ನು ಸಹಿಸಲಾಗದೆ ಕೆಲಸ ತೊರೆಯುತ್ತಿದ್ದಾರೆ. ಹೀಗಾಗಿ ಕಂಪನಿಗಳು ಮುಚ್ಚುವ ಸ್ಥಿತಿ ತಲುಪಿವೆ.
ಬಿಡಿಎ ಸುಮಾರು 4ಸಾವಿರ ಎಕರೆ ಪ್ರದೇಶದಲ್ಲಿ ಪ್ರತಿಷ್ಟಿತವಾಗಿ ನಿರ್ಮಿಸುತ್ತಿರುವ ಏಷ್ಯಾ ಖಂಡದಲ್ಲಿಯೇ ಅತಿದೊಡ್ಡದಾದ ನಾಡಪ್ರಭು ಕೆಂಪೇಗೌಡ ಬಡಾವಣೆಯು ಈ ಘಟಕಗಳಿಂದ ಕೂಗಳತೆ ದೂರದಲ್ಲಿದೆ. ಭವಿಷ್ಯದಲ್ಲಿನ ಅಲ್ಲಿ ಮನೆ ನಿರ್ಮಿಸಿಕೊಳ್ಳುವ ಜನರಿಗೂ ಈ ಘಟಕಗಳಿಂದ ತೊಂದರೆ ತಪ್ಪಿದ್ದಲ್ಲ.
ಈ ಹಿನ್ನೆಲೆಯಲ್ಲಿ ಕನ್ನಲ್ಲಿ, ಸೀಗೇಹಳ್ಳಿ ವ್ಯಾಪ್ತಿಯಲ್ಲಿ ಸ್ಥಾಪನೆ ಮಾಡಿರುವ ಕಸ ವಿಲೇವಾರಿ ಮತ್ತು ಸಂಸ್ಕರಣಾ ಘಟಕಗಳನ್ನು ಕೂಡಲೆ ಮುಚ್ಚುವಂತೆ ಆಗ್ರಹಿಸಿ ಸುತ್ತಮುತ್ತಲಿನ ಗ್ರಾಮಗಳ ಜನರು ಒಂದಾಗಿ ಪರಿಸರ ಸಂರಕ್ಷಣಾ ಸಮಿತಿಯನ್ನು ಏರ್ಪಡಿಸಿಕೊಂಡು ಹೋರಾಟಕ್ಕಿಳಿದಿದ್ದಾರೆ. ಇದೇ ಸೋಮವಾರ ದಿನಾಂಕ: 21-12-2015ರಂದು ತಮ್ಮ ಬೇಡಿಕೆ ಈಡೇರಿಕೆಗೆ ಒತ್ತಾಯಿಸುತ್ತಾ ಸೀಗೇಹಳ್ಳಿ ಗೇಟ್‍ಬಳಿ ಪ್ರತಿಭಟನೆಗೆ ಸಜ್ಜಾಗಿದ್ದು ಸಾವಿರಾರು ಜನರು ಪಾಲ್ಗೊಳ್ಳುವ ನಿರೀಕ್ಷೆಯಿದೆ. ಸರ್ಕಾರ ತಮ್ಮ ಬೇಡಿಕೆಗೆ ಸ್ಪಂದಿಸದಿದ್ದಲ್ಲಿ ಹೋರಾಟವನ್ನು ಯಾವುದೇ ಹಂತಕ್ಕೆ ಕೊಂಡೊಯ್ಯಲು ತಾವೆಲ್ಲರೂ ಸಿದ್ಧವಾಗಿರುವುದಾಗಿ ಪರಿಸರ ಸಂರಕ್ಷಣಾ ಸಮಿತಿಯ ಅಧ್ಯಕ್ಷರಾದ ಚನ್ನಪ್ಪ, ಕಾರ್ಯನಿರ್ವಾಹಕ ಸದಸ್ಯರಾದ ಎಸ್.ಶಾಂತರಾಜು ಎಚ್ಚರಿಸಿದ್ದಾರೆ.
( ಎ.ಸೀತಾರಾಮ ಶಾಸ್ತ್ರಿ. ಮೊಬೈಲ್ ಸಂಖ್ಯೆ- 9481036870
( ಎ.ಸೀತಾರಾಮ ಶಾಸ್ತ್ರಿ. ಮೊಬೈಲ್ ಸಂಖ್ಯೆ- 9481036870