Tuesday, December 15, 2015

ಪಾವಗಡ ತಾಲೂಕಿನಲ್ಲಿ ಶೈಕ್ಷಣಿಕ ಪ್ರಗತಿಗೆ ಧನ ಸಹಾಯ ಅಗತ್ಯ

ಪಾವಗಡ ತಾಲ್ಲೂಕು ಕ್ಷೇಮಾಭಿವೃದ್ಧಿ ಮತ್ತು ಸಾಂಸ್ಕೃತಿಕ ಸಂಸ್ಥೆಯ ವತಿಯಿಂದ ಭಾನುವಾರ ನಡೆದ 12ನೇ ವಾರ್ಷಿಕ ಸರ್ವ ಸದಸ್ಯರ ಸಭೆಯಲ್ಲಿ ಲಂಡನ್‍ನ ಸುಪ್ರಸಿದ್ದ ವೈದ್ಯ ಡಾ|| ಪ್ರಭಾಕರ್ ರೆಡ್ಡಿ ಅವರನ್ನು ಸನ್ಮಾನಿಸಲಾಯಿತು. ಸಂಸ್ಥೆಯ ಅಧ್ಯಕ್ಷ ಕೆ.ಬಿ.ವಿ. ಪತಿ, ಕಾರ್ಯದರ್ಶಿ ವೆಂಕಟರೆಡ್ಡಿ, ಸಂಘಟನಾ ಕಾರ್ಯದರ್ಶಿ ಆರ್.ಪಿ.ಎಸ್. ರೆಡ್ಡಿ, ಡಾ. ಪರಮೇಶ್ ನಾಯಕ್,  ಸದಸ್ಯರಾದ ಕೃಷ್ಣಪ್ಪ, ಸುಬ್ಬರಾಯಪ್ಪ ಮುಂತಾದವರು ಚಿತ್ರದಲ್ಲಿದ್ದಾರೆ.
--------------------------------------------------------------------------------------------------------------------------
ಬೆಂಗಳೂರು: ಶೈಕ್ಷಣಿಕ ಪ್ರಗತಿ ಸಾಧಿಸಲು ಉದಾರವಾದ ಧನ ಸಹಾಯ ಮಾಡುವ ಮೂಲಕ ಕೇರಳದಂತೆ ಪಾವಗಡವನ್ನು ಮಾದರಿ ತಾಲ್ಲೂಕನ್ನಾಗಿ ಪರಿವರ್ತನೆ ಮಾಡುವಲ್ಲಿ ಸಹೃದಯ ದಾನಿಗಳು ಮುಂದಾಗಬೇಕು ಎಂದು ಲಂಡನ್‍ನ ಸುಪ್ರಸಿದ್ದ ವೈದ್ಯ ಡಾ|| ಪ್ರಭಾಕರ್ ರೆಡ್ಡಿ ಕರೆ ನೀಡಿದರು.
ಪಾವಗಡ ತಾಲ್ಲೂಕು ಕ್ಷೇಮಾಭಿವೃದ್ಧಿ ಮತ್ತು ಸಾಂಸ್ಕೃತಿಕ ಸಂಸ್ಥೆಯ 12ನೇ ವಾರ್ಷಿಕ ಸರ್ವ ಸದಸ್ಯರ ಸಭೆಯ ಮುಖ್ಯ ಅತಿಥಿಯಾಗಿ ಮಾತನಾಡಿದ ಅವರು ಪಾವಗಡ ತಾಲ್ಲೂಕಿನಲ್ಲಿ ತುಂಬಿರುವ ಅನಕ್ಷರತೆಯನ್ನು ತೊಡೆದು ಹಾಕುವಲ್ಲಿ ನಾವೆಲ್ಲರೂ ಉದಾರವಾಗಿ ಧನ ಸಹಾಯ ಮಾಡಬೇಕು ಎಂದು ಮನವಿಮಾಡಿದರು. 
ಅನಾಥನಾಗಿದ್ದ ನನ್ನನ್ನು ಈ ಮಟ್ಟಕ್ಕೆ ಬೆಳೆಸಿದವರು ಅನೇಕರಿದ್ದಾರೆ.  ಅದರಲ್ಲಿ ನಿಲ್ಲುವ ಮೊದಲಿಗರೆಂದರೆ ಪಾವಗಡ ಸುಬ್ಬರಾಯಪ್ಪ  ನನ್ನನ್ನು ಮನೆಯಲ್ಲಿ ಇರಿಸಿಕೊಂಡು ಓದಿಸಿ ವಿದ್ಯೆ ಕಲಿಯಲು ಸಹಾಯಮಾಡಿದ್ದಾರೆ. ಇಂಥವರನೇಕರಿಂದ ನಾನು ಹಿಮಾಲಯದಷ್ಟು ಬೆಳೆದಿದ್ದೇನೆ. ಅವರ ಋಣ ತೀರಿಸಲು ಅವರ ಹೆಸರಿನಲ್ಲಿ 1 ಲಕ್ಷ.ರೂ ದೇಣಿಗೆ ನೀಡುತ್ತಿದ್ದೇನೆ ಎಂದರು.
ನನ್ನ ವಿನಂತಿಯೆಂದರೆ ಧನ ಸಹಾಯ ಪಡೆದುಕೊಂಡು ಜೀವನ ಕಟ್ಟಿಕೊಂಡವರು ಅವರ ಸಂಪಾದನೆಯ ಸ್ವಲ್ಪ ಭಾಗವನ್ನು ಬಡ ವಿದ್ಯಾರ್ಥಿಗಳಿಗೆ ವಿದ್ಯಾಭ್ಯಾಸ ಮಾಡಲು ಸಹಾಯಮಾಡಿ ಆ ಮೂಲಕ ದೇಶದ ಅಭಿವೃದ್ಧಿಯಲ್ಲಿ ಪಾಲ್ಗೊಳ್ಳುವಂತೆ ನೆರೆದಿದ್ದ ಸದಸ್ಯರು ಮತ್ತು ಪ್ರತಿಭಾ ಪುರಸ್ಕಾರ ಪಡೆದ ವಿದ್ಯಾರ್ಥಿಗಳಲ್ಲಿ ಮನವಿ ಮಾಡಿದರು.
ಪಾವಗಡ ಮೂಲದವರಾದ ಬೆಂಗಳೂರು ಮಹಾನಗರ ಪಾಲಕೆಯ ನೂತನ ಸದಸ್ಯರಾಗಿ ಆಯ್ಕೆಯಾಗಿರುವ ನರಸಿಂಹನಾಯಕ್ ಅವರು ಮಾತನಾಡಿ, ಸಮಾಜ ಸೇವೆ ಮಾಡಬೇಕೆಂದೆ ಸ್ಥಾಪನೆಯಾಗಿರುವ ಈ ಸಂಸ್ಥೆಗೆ ಶಾಶ್ವತ ಕಟ್ಟಡದ ಅಗತ್ಯವಿದೆ ಅದಕ್ಕಾಗಿ ನಿವೇಶನ ಪಡೆಯಲು ಸಂಸ್ಥೆ ಪ್ರಯತ್ನ ಪಟ್ಟರೆ  ನಾನೂ ಸಹ ಸಹಕರಿಸಿವುದಾಗಿ ಭರವಸೆ ನೀಡಿದರು.
ಈ ಸಂಸ್ಥೆಯು ಪ್ರತಿವರ್ಷ ಪ್ರತಿಭಾ ಪುರಸ್ಕಾರ, ವಿದ್ಯಾರ್ಥಿವೇತನ, ಉದ್ಯೋಗ ಮೇಳ ಹಾಗೂ ಉಚಿತ ಆರೋಗ್ಯ ತಪಾಸಣಾ ಶಿಬಿರ ಮುಂತಾದ ಜನಪರ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಿದೆ. ನೀವು ಮಾಡುತ್ತಿರುವ ಈ ಕೈಂಕರ್ಯಕ್ಕೆ ನನ್ನ ಬೆಂಬಲ ಸದಾ ಇರುತ್ತದೆ.  ಅತಿ ಹಿಂದುಳಿದಿರುವ ಪಾವಗಡ ತಾಲ್ಲೂಕು ಎದುರಿಸುತ್ತಿರುವ ಕುಡಿಯುವ ನೀರಿನ ಸಮಸ್ಯೆಯನ್ನು ನೀಗಿಸಲು ಮತ್ತು ಪ್ಲೋರೈಡ್ ಅಂಶವುಳ್ಳ ನೀರಿನ್ನು ಸಂಸ್ಕರಿಸುವ ವಿಧಾನಗಳನ್ನು ಅಭಿವೃದ್ಧಿ ಪಡಿಸುವ ಅಗತ್ಯವಿದೆ.  ಇದಕ್ಕೆ ನನ್ನ ಸಂಪೂರ್ಣ ಬೆಂಬಲವಿದೆ ಎಂದರು.
ಈ ಸಂದರ್ಭದಲ್ಲಿ ಡಾ: ಪ್ರಭಾಕರ ರೆಡ್ಡಿ ರವರ ಕಷ್ಟಕಾಲದಲ್ಲಿ ಸಹಾಯ ಮಾಡಿದ ನಿವೃತ್ತ ನ್ಯಾಯಾದೀಶ ಟಿ.ಜೆ. ಮರಿಯಪ್ಪ, ಉದ್ಯಮಿ ಡಿ.ಕೆ. ರೆಡ್ಡಿ, ವೈದ್ಯಕೀಯ ಕಾಲೇಜಿನ ಪ್ರಾಂಶುಪಾಲರಾದ ಡಾ| ವಿ.ಆರ್. ನಾಯ್ಡು ಅವರ ಹೆಸರಿನಲ್ಲಿ ತಲಾ ಒಂದು ಲಕ್ಷ ದೇಣಿಗೆ ನೀಡಿದ್ದಕ್ಕೆ ಅವರೆಲ್ಲರನ್ನೂ ಸಂಸ್ಥೆಯ ಮಹಾಪೋಷಕರನ್ನಾಗಿ ಹಾಗೂ ಡಾ| ಕೆ.ವಿ. ಶಶಿಕಲಾ ಮತ್ತು ನರಸಿಂಹಪ್ಪ ರವರುಗಳು ತಲಾ ರೂ 50000 ನೀಡಿದ್ದಕ್ಕೆ ಪೋಷಕನ್ನಾಗಿ ಗೌರವಿಸಲಾಯಿತು
ಇದೇ ಸಂದರ್ಭದಲ್ಲಿ ಕರ್ನಾಟಕ ಮಾಧ್ಯಮ ಅಕಾಡೆಮಿ ಪ್ರಶಸ್ತಿ ಪುರಷ್ಕøತರಾಗಿರುವ ಆರ್.ಪಿ.ಎಸ್. ರೆಡ್ಡಿ, ಬಿಬಿಎಂಪಿ ಸದಸ್ಯ ನರಸಿಂಹನಾಯಕ್ ಹಾಗೂ ಹೋಂಗಾಡ್ರ್ಸ್ ಸೇವೆಯಲ್ಲಿ ರಾಷ್ಟ್ರಪತಿ ಪದಕ ಪಡೆದ ಅಂಜಿನಪ್ಪ ಅವರನ್ನು ಸನ್ಮಾನಿಸಲಾಯಿತು.  ಸದಸ್ಯರ ಪ್ರತಿಭಾವಂತ ಮಕ್ಕಳಿಗೆ ಪ್ರೋತ್ಸಾಹ ಧನ ವಿತರಿಸಲಾಯಿತು.
ಸಮಾರಂಭದ ಅದ್ಯಕ್ಷತೆಯನ್ನು ಕೆ.ಬಿ.ವಿ ಪತಿ ವಹಿಸಿದ್ದರು. ಸಂಘಟನಾ  ಕಾರ್ಯದರ್ಶಿ ಆರ್.ಪಿ. ಸಾಂಬಸದಾಶಿವ ರೆಡ್ಡಿ ಸ್ವಾಗತಿಸಿದರು.  ಕಾರ್ಯದರ್ಶಿ ವೆಂಕಟರೆಡ್ಡಿ ಪ್ರಾಸ್ತಾವಿಕ ಭಾಷಣ ಮಾಡಿದರು. ಉಪಾದ್ಯಕ್ಷ ಡಾ: ಎ ಪ್ರಭಾಕರ, ಖಜಾಂಚಿ ಬಾಲಪ್ಪ ಉಪಸ್ಥಿತರಿದ್ದರು. ಕಾರ್ಯಕಾರಿ ಸಮಿತಿ ಸದಸ್ಯರಾದ ಡಾ. ಪರಮೇಶ್ವರ್ ನಾಯಕ್ ನಿರೂಪಿಸಿದರು.  ಆರ್. ಕೃಷ್ಣಪ್ಪ ವಂದಿಸಿದರು.

No comments:

Post a Comment