Friday, October 30, 2015

ದಕ್ಷಿಣ ಭಾರತ ಸಿನಿಮಾ ನವಶಕೆಗೆ ನಾಂದಿ.. ‘ಐಫಾ ಉತ್ಸವ’

ಬೆಂಗಳೂರು : ಇದೇ ಮೊದಲಬಾರಿ ಡಿಸೆಂಬರ್ 4ರಿಂದ 6ರವರೆಗೆ ಮೂರುದಿನ ತೆಲಂಗಾಣ ರಾಜಧಾನಿ ಹೈದರಾಬಾದ್‍ನಲ್ಲಿ ಅಂತಾರಾಷ್ಟ್ರೀಯ ಭಾರತೀಯ ಚಲನಚಿತ್ರ ಅಕಾಡೆಮಿ(ಐಐಎಫ್‍ಎ)ವತಿಯಿಂದ ಆಯೋಜಿಸಲಾಗುತ್ತಿರುವ ‘ಐಫಾ ಉತ್ಸವ’ ದಕ್ಷಿಣ ಭಾರತದ ಸಿನಿಮಾ ರಂಗಕ್ಕೆ ಜಾಗತಿಕ ಮಟ್ಟದಲ್ಲಿ ಮಾನ್ಯತೆಯನ್ನು ತಂದುಕೊಡುವುದರ ಮುಖಾಂತರ ನವಶಕೆಗೆ ನಾಂದಿಯಾಗಲಿದೆ ಎಂದು ಅಭಿಪ್ರಾಯ ಪಟ್ಟಿದ್ದಾರೆ.
       ನಗರದಲ್ಲಿ ಶುಕ್ರವಾರ ಐಫಾ ಉತ್ಸವ ಪ್ರಶಸ್ತಿಗಳಿಗಾಗಿ ಮತದಾನ ಪ್ರಕ್ರಿಯೆಗೆ ಚಾಲನೆ ನೀಡಲಾಯಿತು. ಈ ಸಂದರ್ಭವಾಗಿ ಆಯೋಜಿಸಲಾಗಿದ್ದ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಶಿವಣ್ಣ ಇದುವರೆಗೆ ಬಾಲಿವುಡ್‍ಗೆ ಮಾತ್ರ ಸೀಮಿತವಾಗಿ ದೇಶ ವಿದೇಶಗಳಲ್ಲಿ ಅದ್ದೂರಿಯಾಗಿ ಆಯೋಜಿಸುತ್ತಾ ಬಂದಿರುವ ಐಫಾ ಪ್ರಶಸ್ತಿ ಕಾರ್ಯಕ್ರಮವನ್ನು ದಕ್ಷಿಣ ಭಾರತ ಚಿತ್ರರಂಗಕ್ಕೂ ವಿಸ್ತರಿಸುತ್ತಿರುವುದು ಸಂತಸದ ವಿಚಾರ. ಇಂತಹ ಕಾರ್ಯಕ್ರಮಗಳಿಂದಾಗಿ ಸೋದರ ಭಾಷೆಗಳ ಹಿರಿಯ ಕಲಾವಿದರು, ನಿರ್ದೇಶಕರು, ತಂತ್ರಜ್ಞರೊಂದಿಗೆ ಬಾಂಧವ್ಯ ವೃದ್ಧಿಗೊಳಿಸಿಕೊಳ್ಳಲು ನಮಗೆ ಸಹಕಾರಿಯಾಗಲಿದೆ ಎಂದು ಹೇಳಿದರು.
       ಕಾರ್ಯಕ್ರಮದ ಆಯೋಜಕ ಸಂಸ್ಥೆಯಾದ ವಿಜ್‍ಕ್ರಾಫ್ಟ್ ಇಂಟರ್‍ನ್ಯಾಷನಲ್‍ನ ನಿರ್ದೇಶಕ ಸುಬ್ಬಾಸ್ ಜೋಸೆಫ್ ಮಾತನಾಡಿ 2000ರಲ್ಲಿ ಪ್ರಾರಂಭಿಸಲಾದ ಐಫಾ ಪ್ರಶಸ್ತಿ ಕಾರ್ಯಕ್ರಮ ಇದುವರೆಗೆ ವಿಶ್ವದ ನಾಲ್ಕು ಖಂಡಗಳಲ್ಲಿನ 11ದೇಶಗಳಲ್ಲಿ ಆಯೋಜಿಸಲಾಗಿದ್ದು, ಹಿಂದಿ ಚಿತ್ರರಂಗಕ್ಕೆ ವಿಶ್ವಮಟ್ಟದಲ್ಲಿ ಮಾನ್ಯತೆಯನ್ನು ದೊರಕಿಸಿ, ಮಾರುಕಟ್ಟೆಯನ್ನು ವಿಸ್ತಾರ ಗೊಳಿಸುವಲ್ಲಿ ಯಶಸ್ವಿಯಾಗಿದೆ. ದಕ್ಷಿಣ ಭಾರತದ ಕನ್ನಡ, ತೆಲುಗು, ತಮಿಳು, ಮಳಯಾಳಂ ಸಿನಿಮಾಗಳು ಸಹ ಕಥೆ, ನಿರ್ದೇಶನ, ತಾಂತ್ರಿಕತೆಯಲ್ಲಿ ಅತ್ಯುತ್ತಮ ಮಟ್ಟದಲ್ಲಿ ಮೂಡಿಬರುತ್ತಿದ್ದು ಈಗಾಗಲೆ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಗುರುತಿಸಿಕೊಂಡಿವೆ. ಐಫಾ ಉತ್ಸವದಿಂದ ಇದನ್ನು ಮತ್ತಷ್ಟು ವಿಸ್ತಾರಗೊಳಿಸುವುದು ನಮ್ಮ ಉದ್ದೇಶವಾಗಿದೆ ಎಂದು ತಿಳಿಸಿದರು. ಐಫಾ ಉತ್ಸವದ ಪ್ರಧಾನ ಪ್ರಾಯೋಜಕತ್ವವನ್ನು ಅದಾನಿ ಗ್ರೂಪ್‍ನ ಫ್ಯೂಚರ್ ಸೂರ್ಯಕಾಂತಿ ಎಣ್ಣೆ ವಹಿಸಿಕೊಂಡಿದ್ದು ಜಿಯೋನಿ ಸ್ಮಾರ್ಟಫೋನ್ ಅದಕ್ಕೆ ಹೆಗಲು ಜೋಡಿಸಿದೆ. ಸನ್ ಟಿವಿ ಪ್ರಚಾರದ ಹೊಣೆ ಹೊತ್ತಿದೆ ಎಂದರು.
      ಕನ್ನಡ ಚಿತ್ರನಟರಾದ ದಿಗಂತ್, ವಿಜಯ ರಾಘವೇಂದ್ರ, ನಟಿಯರಾದ ಐಂದ್ರಿತಾ ರೇ, ನಭಾ ನಟೇಶ್, ಪ್ರಿಯಾಮಣಿ, ಅದಾನಿ ವಿಲ್‍ಮರ್‍ನ ಮಾರುಕಟ್ಟೆ ವಿಭಾಗದ ಜನರಲ್ ಮೇನೇಜರ್ ಕೌಶಲ್ ದೇಸಾಯಿ, ಉದಯ ಟಿವಿ ಹಿರಿಯ ವ್ಯವಸ್ಥಾಪಕರಾದ ಶ್ರೀನಿವಾಸ ಬೆಟಗೇರಿ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

Thursday, October 29, 2015

ಸಿದ್ದು ಸಂಪುಟ ಭರ್ತಿ : ಸಚಿವರಾಗಿ ನಾಲ್ವರ ಪ್ರಮಾಣ ಸ್ವೀಕಾರ

  
ಬೆಂಗಳೂರು : ರಾಜಭವನದ ಗಾಜಿನ ಮನೆಯಲ್ಲಿ ಇಂದು ಸಂಜೆ 4.30ಗಂಟೆಗೆ ನಡೆದ ವಿಶೇಷ ಸಮಾರಂಭದಲ್ಲಿ ರಾಜ್ಯದ ನೂತನ ಸಚಿವರು ಪ್ರಮಾಣ ವಚನ ಸ್ವೀಕರಿಸಿದರು. ರಾಜ್ಯಪಾಲ ವಾಜೂಭಾಯಿ ವಾಲಾ ಅವರು ರಾಜ್ಯ ಸಚಿವ ಸಂಪುಟದ ನಾಲ್ವರು ನೂತನ ಸದಸ್ಯರಿಗೆ ಪ್ರಮಾಣ ವಚನ ಬೋಧಿಸಿದರು.
    ನೂತನ ಸಚಿವರಾಗಿ ರಾಜ್ಯ ವಿಧಾನ ಪರಿಷತ್ತಿನ ಸದಸ್ಯ ಡಾ: ಜಿ. ಪರಮೇಶ್ವರ್, ಅರಕಲಗೂಡು ಶಾಸಕ ಎ. ಮಂಜು, ಧಾರವಾಡ ಗ್ರಾಮಾಂತರ ಶಾಸಕ ವಿನಯ್‍ಕುಲಕರ್ಣಿ ಹಾಗೂ ಹಾನಗಲ್ ಶಾಸಕ ಮನೋಹರ ತಹಸೀಲ್ದಾರ್ ಅಧಿಕಾರ ಹಾಗೂ ಗೌಪ್ಯತೆಯ ಪ್ರಮಾಣ ವಚನ ಸ್ವೀಕರಿಸಿದರು.
     ಪ್ರಮಾಣ ವಚನ ಸ್ವೀಕಾರ ಸಮಾರಂಭದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಸಚಿವರುಗಳಾದ ಡಿ.ಕೆ. ಶಿವಕುಮಾರ್, ಕೆ.ಜೆ. ಜಾರ್ಜ್, ಎಸ್.ಆರ್. ಪಾಟೀಲ್, ಶ್ಯಾಮನೂರು ಶಿವಶಂಕರಪ್ಪ ಸೇರಿದಂತೆ ಸಂಪುಟದ ಹಲವಾರು ಸಚಿವರು, ಹಿರಿಯ ಶಾಸಕರುಗಳು, ರಾಜ್ಯದ ಮುಖ್ಯ ಕಾರ್ಯದರ್ಶಿ ಕೌಶಿಕ್ ಮುಖರ್ಜಿ, ರಾಜ್ಯದ ಪೊಲೀಸ್ ಮಹಾ ನಿರ್ದೇಶಕ ಓಂಪ್ರಕಾಶ್, ಬೆಂಗಳೂರು ನಗರ ಪೊಲೀಸ್ ಆಯುಕ್ತ ನರಸಿಂಹ ಎಸ್. ಮೇಘರಿಕ್ ಸೇರಿದಂತೆ ಹಲವು ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.
1) ಡಾ: ಜಿ. ಪರಮೇಶ್ವರ್
ಡಾ: ಜಿ. ಪರಮೇಶ್ವರ್ ಅವರು ಇಂದು ಸಂಪುಟ ದರ್ಜೆ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದರು. 1951 ರ ಆಗಸ್ಟ್ 6 ರಂದು ಜನಿಸಿದ ಇವರು ತುಮಕೂರಿನ ಪ್ರಖ್ಯಾತ ಸಿದ್ಧಾರ್ಥ ಶಿಕ್ಷಣ ಸಂಸ್ಥೆಯ ದಿವಂಗತ ಹೆಚ್. ಎಂ. ಗಂಗಾಧರಯ್ಯ ಅವರ ಪುತ್ರರು. ಕೃಷಿಯಲ್ಲಿ ಸ್ನಾತಕೋತ್ತರ ವಿಜ್ಞಾನ ಪದವಿ ಹಾಗೂ ಡಾಕ್ಟರೇಟ್ ಗಳಿಸಿದ್ದಾರೆ. ಕೃಷಿ ಮತ್ತು ಶಿಕ್ಷಣ ಕ್ಷೇತ್ರವನ್ನು ವೃತ್ತಿಯಾಗಿ ಸ್ವೀಕರಿಸಿದ್ದಾರೆ. 1989 ರಲ್ಲಿ ವಿಧಾನ ಸಭಾ ಸದಸ್ಯರಾಗಿ ಆಯ್ಕೆಯಾದ ಇವರು ಮತ್ತೆ 1999 ರಲ್ಲಿ ವಿಧಾನ ಸಭಾ ಸದಸ್ಯರಾಗಿದ್ದರು. ಉನ್ನತ ಶಿಕ್ಷಣ, ರೇಷ್ಮೆ, ವಿಜ್ಞಾನ ಮತ್ತು ತ್ರಂತ್ರಜ್ಞಾನ ಹಾಗೂ ವೈದ್ಯಕೀಯ ಶಿಕ್ಷಣ ಸಚಿವರಾಗಿ ಕಾರ್ಯನಿರ್ವಹಿಸಿದ್ದಾರೆ. 2008 ರಲ್ಲಿ ಪುನ: ರಾಜ್ಯ ವಿಧಾನ ಸಭೆಗೆ ಆಯ್ಕೆಯಾಗಿದ್ದರು. 2010 ರಿಂದ ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿಯ ಅಧ್ಯಕ್ಷರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಕರ್ನಾಟಕ ಅಥ್ಲೆಟಿಕ್ಸ್ ಸಂಸ್ಥೆ, ಶ್ರೀರಂಗ ಹವ್ಯಾಸಿ ಕಲಾವಿದರು ಸಂಸ್ಥೆಗಳ ಅಧ್ಯಕ್ಷರಾಗಿ ಕಾರ್ಯ ನಿರ್ವಹಿಸಿದ್ದಾರೆ. 2014 ರಲ್ಲಿ ಕರ್ನಾಟಕ ವಿಧಾನ ಪರಿಷತ್ತಿನ ಸದಸ್ಯರಾದರು. ಇದೀಗ ಡಾ: ಜಿ. ಪರಮೇಶ್ವರ್ ಅವರು ಕರ್ನಾಟಕ ರಾಜ್ಯ ಸಚಿವ ಸಂಪುಟದಲ್ಲಿ ಸಂಪುಟ ದರ್ಜೆ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದ್ದಾರೆ.
2) ಎ. ಮಂಜು
ಎ. ಮಂಜು ಅವರು ಹಾಸನ ಜಿಲ್ಲೆ ಅರಕಲಗೂಡು ಕ್ಷೇತ್ರದ ಶಾಸಕರು. ಹಾಸನ ಜಿಲ್ಲೆಯ ಕೊಣನೂರಿನಲ್ಲಿ 1958 ರ ನವೆಂಬರ್ 1 ರಂದು ದೇವರಹಟ್ಟಿ ಅಣ್ಣೇಗೌಡ ಅವರ ಪುತ್ರರಾಗಿ ಜನಿಸಿದ ಮಂಜು ಅವರು ಕಲಾ ಮ ತ್ತು ಮತ್ತು ಕಾನೂನು ಪದವಿಧರರು. 1999 ಹಾಗೂ 2008 ರಲ್ಲಿ ರಾಜ್ಯ ವಿಧಾನ ಸಭೆಯ ಸದಸ್ಯರಾಗಿದ್ದರು. 1993 ರಲ್ಲಿ ತಂಬಾಕು ಮಂಡಳಿ ಉಪಾಧ್ಯಕ್ಷರಾಗಿ ಬೆಂಗಳೂರು ವಿಶ್ವವಿದ್ಯಾನಿಲಯದ ಸಿಂಡಿಕೇಟ್ ಮತ್ತು ಸೆನೆಟ್ ಸದಸ್ಯರಾಗಿ, ಪಿ.ಎಲ್.ಡಿ. ಬ್ಯಾಂಕ್ ಅಧ್ಯಕ್ಷರಾಗಿ ಕಾರ್ಯನಿರ್ವಹಿಸಿದ್ದಾರೆ. ಎ. ಮಂಜು ಅವರು 2013 ರ ಚುನಾವಣೆಯಲ್ಲಿ ಶಾಸಕರಾಗಿ ಆಯ್ಕೆಯಾಗಿದ್ದಾರೆ. ಅವರು ಇಂದು ಸ್ವತಂತ್ರ ಖಾತೆ ರಾಜ್ಯ ಸಚಿವ ಸಂಪುಟದ ನೂತನ ರಾಜ್ಯ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದ್ದಾರೆ. 
3) ವಿನಯ್‍ಕುಲಕರ್ಣಿ
ವಿನಯ್ ಕುಲಕರ್ಣಿ ಅವರು ಧಾರವಾಡ ಗ್ರಾಮೀಣ ವಿಧಾನ ಸಭಾ ಕ್ಷೇತ್ರದ ಶಾಸಕರು 1968 ರ ನವೆಂಬರ್ 7 ರಂದು ರಾಜಶೇಖರಪ್ಪ ಅವರ ಪುತ್ರರಾಗಿ ಜನಿಸಿದರು. ಕೃಷಿಯಲ್ಲಿ ವಿಜ್ಞಾನ ಪದವಿ ಪಡೆದಿದ್ದಾರೆ. ಅವರು ಇಂದು ರಾಜ್ಯ ಸಚಿವ ಸಂಪುಟದ ನೂತನ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದರು. ಅವರು ಇಂದು ಸ್ವತಂತ್ರ ಖಾತೆ ರಾಜ್ಯ ಸಚಿವ ಸಂಪುಟದ ನೂತನ ರಾಜ್ಯ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದ್ದಾರೆ.
4) ಮನೋಹರ್ ಹೆಚ್. ತಹಸೀಲ್ದಾರ್
ಮನೋಹರ್ ಹೆಚ್. ತಹಸೀಲ್ದಾರ್ ಅವರು ಹಾವೇರಿ ಜಿಲ್ಲೆಯ ಹಾನಗಲ್ ವಿಧಾನ ಸಭಾ ಕ್ಷೇತ್ರದಿಂದ ಆಯ್ಕೆಯಾಗಿದ್ದಾರೆ. 1946 ರ ಜುಲೈ 21 ರಂದು ತಹಸೀಲ್ದಾರ್ ಹನುಮಂತಪ್ಪ ಅವರ ಪುತ್ರರಾಗಿ ಜನಿಸಿದರು. ಮೆಕ್ಯಾನಿಕಲ್‍ ಇಂಜಿನಿಯರಿಂಗ್ ಪದವಿ ಗಳಿಸಿದರುವ ಇವರು ರಾಜ್ಯ ವಿಧಾನ ಸಭೆಗೆ ನಾಲ್ಕು ಬಾರಿ ಶಾಸಕರಾಗಿ ಆಯ್ಕೆಯಾಗಿದ್ದಾರೆ. ಈ ಹಿಂದೆ ಮನೋಹರ ತಹಸೀಲ್ದಾರ್ ಅವರು ರಾಜ್ಯ ವಿಧಾನ ಸಭೆಯ ಉಪಾಧ್ಯಕ್ಷರಾಗಿಯೂ ಸೇವೆ ಸಲ್ಲಿಸಿದ್ದಾರೆ. ಅವರು ಇಂದು ರಾಜ್ಯ ಸಚಿವ ಸಂಪುಟದ ನೂತನ ಸಂಪುಟ ದರ್ಜೆ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದರು.

ಹೊಸ 'ಹೀರೊ'ಗಳಾದ `ಡ್ಯುಯಟ್' ಮತ್ತು `ಮಾಸ್ಟ್ರೊಎಡ್ಜ್' ಬಿಡುಗಡೆ

ಬೆಂಗಳೂರು : ದ್ವಿಚಕ್ರ ವಾಹನ ತಯಾರಕ ಸಂಸ್ಥೆಯಾದ ಹೀರೊ ಮೋಟೊಕಾರ್ಪ್ ಬಹುಕಾತರದಿಂದ ನಿರೀಕ್ಷಿಸುತ್ತಿದ್ದ`ಡ್ಯಯಟ್' ಮತ್ತು`ಮಾಸ್ಟ್ರೊ ಎಡ್ಜ್'ಗಳನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಿದೆ.
   ಹೊಸ ಸ್ಕೂಟರ್‍ಗಳನ್ನು ಅನಾವರಣಗೊಳಿಸಿದ ಹೀರೊ ಮೋಟೊಕಾರ್ಪ್‍ನ ಮಾರಾಟ, ಮಾರುಕಟ್ಟೆ ಮತ್ತುಗ್ರಾಹಕ ಸೇವೆ ಮುಖ್ಯಸ್ಥ ಅಶೋಕ್ ಭಾಸಿನ್ `ಜಗತ್ತಿನಅತಿದೊಡ್ಡ ದ್ವಿಚಕ್ರ ವಾಹನ ತಯಾರಕ ಸಂಸ್ಥೆಯಾಗಿ ನಮ್ಮ ಹೊಸ ಉತ್ಪನ್ನಗಳಾದ ಡ್ಯುಯಟ್ ಮತ್ತು ಮಾಸ್ಟ್ರೊ ಎಡ್ಜ್ ಗಳನ್ನು ಹೆಚ್ಚುತ್ತಿರುವ ನಮ್ಮಗ್ರಾಹಕರ ನಿರೀಕ್ಷೆಗಳನ್ನು ಗಮನದಲ್ಲಿಟ್ಟುಕೊಂಡುರೂಪಿಸಲಾಗಿದೆ. ಎರಡೂ ಸ್ಕೂಟರ್‍ಗಳು ಸ್ಟೈಲಿಶ್ ಆಗಿದ್ದು, ಹೀರೊ ಬ್ರಾಂಡ್‍ಗೆ ಅನುಗುಣವಾಗಿ ಸುರಕ್ಷತೆ ಮತ್ತು ಆರಾಮದಾಯಕ ಅನುಭವ ನೀಡುವ ಹಲವು ಫೀಚರ್‍ಗಳನ್ನು ಹೊಂದಿವೆ. ಎರಡೂ ಸ್ಕೂಟರ್‍ಗಳು ಗ್ರಾಹಕರ ಮನ ಗೆಲ್ಲುತ್ತವೆಎನ್ನುವ ವಿಶ್ವಾಸವಿದೆ'. ಎಂದು ತಿಳಿಸಿದರು.
     ಡ್ಯುಯಟ್ 110 ಸಿಸಿ ಸ್ಕೂಟರ್‍ ಆಗಿದ್ದು, ಪುರುಷ-ಮಹಿಳೆ ಇಬ್ಬರನ್ನೂ ಗಮನದಲ್ಲಿಟ್ಟುಕೊಂಡು ಕುಟುಂಬದ ಸ್ಕೂಟರ್ ಆಗಿ ವಿನ್ಯಾಸಗೊಳಿಸಲಾಗಿದೆ. ಆಕರ್ಷಕ ಮೆಟಲ್ ಬಾಡಿ ಗಟ್ಟಿ ಮತ್ತು ದೀರ್ಘ ಬಾಳಿಕೆಗೆ ಸಹಕಾರಿ. ದ್ವಿಚಕ್ರ ವಾಹನ ಕ್ಷೇತ್ರದಲ್ಲೇ ಮೊದಲು ಎನ್ನಬಹುದಾದ ಇಂಟಿಗ್ರೇಟೆಡ್ ಬ್ರೇಕಿಂಗ್ ಸಿಸ್ಟಮ್, ಮೊಬೈಲ್‍ ಚಾರ್ಜಿಂಗ್ ಪೋರ್ಟ್‍, ಟೆಲಿಸ್ಕೋಪಿಕ್ ಫ್ರಂಟ್ ಸಸ್ಪೆನ್ಶನ್, ಬೂಟ್‍ಲೈಟ್, ಎಕ್ಸಟರ್ನಲ್ ಫ್ಯೂಯಲ್ ಫಿಲ್ಲಿಂಗ್, ಡಿಜಿಟಲ್‍ ಅನಲಾಗ್ ಮೀಟರ್‍ ಕನ್ಸೋಲ್ ಮೊದಲಾದವು ಆರಾಮದಾಯಕ ಸವಾರಿ ಅನುಭವ ನೀಡುತ್ತವೆ.
      ಮಾಸ್ಟ್ರೊಎಡ್ಜ್ ಸಹ ಡೈನಮಿಕ್‍ ಡಿಸೈನ್‍ಜತೆ ಹಲವು ಆಕರ್ಷಕ ಫೀಚರ್‍ಗಳನ್ನು ಹೊಂದಿದೆ.ಜೋಡಿ ಪಾರ್ಕಿಂಗ್ ಲ್ಯಾಂಪ್, ರಿಮೋಟ್ ಫ್ಯುಯಲ್ ಲಿಡ್ ಮತ್ತು ಸೀಟ್ ಓಪನಿಂಗ್, ಡಿಜಿಅನಲಾಗ್‍ ಡ್ಯಾಶ್‍ಬೋರ್ಡ್, ಗ್ರಾಹಕರ ಅಗತ್ಯವಾದ ಟೆಲಿಸ್ಕೋಪಿಕ್ ಫ್ರಂಟ್ ಸಸ್ಪೆನ್ಶನ್, ಎಕ್ಸಟರ್ನಲ್ ಫ್ಯುಯಲ್ ಫಿಲ್ಲಿಂಗ್, ದೊಡ್ಡದಾದ 12" ಫ್ರಂಟ್ ವ್ಹೀಲ್ ಮೊದಲಾದ ಮೌಲ್ಯವರ್ಧಿತ ಫೀಚರ್‍ಗಳು ಸವಾರಿಯಲ್ಲಿ ಹೊಸ ಅನುಭವ ನೀಡಲಿವೆ.
     ಎರಡೂ ಸ್ಕೂಟರ್‍ಗಳು ಸೈಡ್ ಸ್ಟ್ಯಾಂಡ್‍ ಇಂಡಿಕೇಟರ್, ಫ್ರಂಟ್ ಲಗೇಜ್ ಬಾಕ್ಸ್, ಬೂಟ್ ಲೈಟ್, ಥ್ರಾಟಲ್ ಪೊಸಿಶನ್ ಸೆನ್ಸಾರ್ (ಟಿಪಿಎಸ್), ಇಂಟಿಗ್ರೇಟೆಡ್ ಬ್ರೇಕಿಂಗ್ ಸಿಸ್ಟಮ್, ಟ್ಯೂಬ್‍ಲೆಸ್‍ ಟಯರ್ ಸೇರಿದಂತೆ ಬಹುಹಂತದ ಸುರಕ್ಷತೆ ಮತ್ತು ಸವಾರಿಗೆ ಅನುಕೂಲಕರವಾದ ಫೀಚರ್‍ಗಳನ್ನು ಹೊಂದಿವೆ.
     ಮಹಿಳೆಯರಿಗೆಂದೇ ರೂಪಿಸಲಾಗಿರುವ ಹೀರೊದ 100 ಸಿಸಿ ಪ್ಲೆಶರ್ ಮತ್ತು 110 ಸಿಸಿ ಮಾಸ್ಟ್ರೊಗಳು ಭಾರಿಜನಪ್ರಿಯವಾಗಿವೆ ಮತ್ತು ಕಂಪನಿ 2014-15ರಲ್ಲಿ ಅತಿದೊಡ್ಡ ಸ್ಕೂಟರ್‍ ರಫ್ತುದಾರ ಸಂಸ್ಥೆಯಾಗಿ ಹೊರಹೊಮ್ಮಲೂ ಕಾರಣವಾಗಿವೆ. ಎಚ್‍ಎಂಸಿಎಲ್‍ನ ಹಾಲಿ ಸ್ಕೂಟರ್‍ತಯಾರಿಕೆ ಸಾಮರ್ಥ್ಯ ಹತ್ತು ಲಕ್ಷ ಆಗಿದ್ದು, ಹೊಸ ಎರಡು ಸ್ಕೂಟರ್‍ಗಳ ಸೇರ್ಪಡೆಯಿಂದ ಮಾರುಕಟ್ಟೆ ಪಾಲನ್ನುಇನ್ನಷ್ಟು ಹೆಚ್ಚಿಸಿಕೊಳ್ಳಲು ಕಂಪನಿಗೆ ನೆರವಾಗಲಿದೆ ಎಂದು ತಿಳಿಸಿದರು.  
     ಸಂಪೂರ್ಣ ಹೊಸ ತಾಂತ್ರಿಕತೆಯೊಂದಿಗೆ ರೂಪಿಸಿರುವ ಡ್ಯುಯಟ್ ಮತ್ತು ಮಾಸ್ಟ್ರೊ ಎಡ್ಜ್ ವಾಹನಗಳು ಹೀರೊದ ಸ್ವಂತ ತಾಂತ್ರಿಕತೆ ಹೊಂದಿವೆ. ಡ್ಯುಯೆಟ್‍ ಎಲ್‍ಎಕ್ಸ್ ಆವೃತ್ತಿ ಬೆಲೆ ರು. 48,400 ಮತ್ತು ವಿಎಕ್ಸ್ ಆವೃತ್ತಿ ಬೆಲೆ ರು.49.900 ಆಗಿದ್ದು, ಮಾಸ್ಟ್ರೊ ಎಡ್ಜ್ ಎಲ್‍ಎಕ್ಸ್ ಆವೃತ್ತಿ ಬೆಲೆ ರು. 50,500 ಮತ್ತು ವಿಎಕ್ಸ್ ಆವೃತ್ತಿ ಬೆಲೆ ರು.52,000 ಆಗಿದೆ, `ಮಾಸ್ಟ್ರೊಎಡ್ಜ್'ಮತ್ತು`ಡ್ಯಯಟ್'ರಾಜ್ಯಾದ್ಯಂತ ಹೀರೊ ಡೀಲರ್‍ಗಳ ಬಳಿ ನವೆಂಬರ್ ಮಧ್ಯದಿಂದ ಲಭ್ಯವಾಗಲಿವೆ.

Thursday, October 22, 2015

ಉಳಿತಾಯ ಬದುಕಿಗೆ ಸುರಕ್ಷೆಯ ಜೀವವಿಮೆ


ಳಿತಾಯ ಮಾಡಿದ ಹಣ ಗಳಿಸಿದಷ್ಟೇ ಮುಖ್ಯ ಹಾಗೂ ಇಂದಿನ ಉಳಿತಾಯ ನಾಳಿನ ಜೀವನಕ್ಕೆ ಭದ್ರ ಅಡಿಪಾಯ ಎಂಬುದು ಹಿರಿಯರ ಅನುಭವದ ಮಾತು.ಹಣ ಉಳಿಸುವುದರಲ್ಲೂ ಹಲವಾರು ವಿಧಾನಗಳು ಇವೆ. ಅದರಲ್ಲಿ ಜೀವ ವಿಮೆಯು ನಿರಂತರ ಉಳಿತಾಯ ಹಾಗೂ ಜೀವನಕ್ಕೆ ಆರ್ಥಿಕ ಭದ್ರತೆಯನ್ನು ಒದಗಿಸುವಂತಹ ಬಹುಬಗೆ ಪ್ರಯೋಜನ ಕಾರಿ ಯೋಜನೆಯಾಗಿದೆ. ಜತೆಗೆ, ಆದಾಯ ತೆರಿಗೆ ಪಾವತಿಸು ತ್ತಿರುವವರಿಗೆ ತೆರಿಗೆಯನ್ನೂ ಗಮನಾರ್ಹ ಪ್ರಮಾಣದಲ್ಲಿ ಉಳಿಸಿಕೊಡುವ ಉಪಾಯವೂ ಆಗಿದೆ.
       ಒಂದೇ ಕಲ್ಲಿನಲ್ಲಿ ಎರಡು ಮೂರು ಹಣ್ಣುಗಳನ್ನು ಮರದಿಂದ ಬೀಳಿಸಿದಂತೆಯೇ, ಜೀವ ವಿಮೆ ಎಂಬುದೂ ಸಹ ಒಂದೇ ಹೂಡಿಕೆಯಿಂದ ಹಲವಾರು ಅನುಕೂಲಗಳನ್ನು ತಂದುಕೊಡುವಂತಹುದೇ ಆಗಿದೆ.ಜೀವ ವಿಮೆಯಲ್ಲಿ ಅವಧಿಯ ಕೊನೆಗೆ ಸಿಗುವ ಹಣ ಹೂಡಿಕೆದಾರರು ಉಳಿತಾಯ ಮಾಡಿದ (ಪ್ರೀಮಿಯಂ) ಹಣ ಮಾತ್ರವಷ್ಟೇ ಆಗಿರುವುದಿಲ್ಲ. ಪಾಲಿಸಿಯ ಅವಧಿ ಪೂರ್ಣಗೊಂಡ ನಂತರ ಹೂಡಿಕೆ ಮಾಡಿದ ವ್ಯಕ್ತಿಯಾಗಲೀ, ಅವರನ್ನು ಅವಲಂಬಿಸಿದ ಕುಟುಂಬದ ಇತರೆ ಸದಸ್ಯರೇ ಆಗಲೀ ಪ್ರೀಮಿಯಂ ಮತ್ತು ಬೋನಸ್ ಸೇರಿಕೊಂಡು ದೊಡ್ಡದಾದ ಮೊತ್ತವನ್ನೇ ಪಡೆಯುತ್ತಾರೆ.  
       ದೀರ್ಘಾವಧಿ ಹೂಡಿಕೆ: ಮುಂದಿನ 15, 20, 25 ಅಥವಾ 30 ವರ್ಷಗಳಿಗೆ ಅಥವಾ ಮಕ್ಕಳ ಉನ್ನತ ವ್ಯಾಸಂಗ, ಮದುವೆ, ಸ್ವಂತಕ್ಕೊಂದು ಮನೆನಿರ್ಮಿಸಿಕೊಳ್ಳುವ ಹಂತದಲ್ಲಿ ಅಗತ್ಯವಾಗಿ ಬೇಕಾಗುವ ಹಣಕ್ಕೂ ಮುಂಚಿತವಾಗಿಯೇ ಯೋಜಿಸಿ ಹೂಡಿಕೆ ಮಾಡುವ ವ್ಯವಸ್ಥೆಯೂ ವಿಮಾ ಪಾಲಿಸಿಗಳಲ್ಲಿದೆ.ಜೀವ ವಿಮೆ ಮಾಡಿಸಿದ ವ್ಯಕ್ತಿ ಬದುಕಿರುವವರೆಗೆ ಅಥವಾ ಒಂದು ನಿಶ್ಚಿತ ಕಾಲಾವಧಿವರೆಗೆ ಮಾತ್ರ ವಿಮೆಗೆ ಕಂತಿನ ಹಣ ಕಟ್ಟಬೇಕಾಗುತ್ತದೆ. ಒಂದೊಮ್ಮೆ ಹೂಡಿಕೆ ಆರಂಭಿಸಿದ ವ್ಯಕ್ತಿ ದಿಢೀರ್‌ ಎಂದು ಬದುಕಿನಿಂದ ನಿರ್ಗಮಿಸಿದರೆ ಅವರನ್ನು ಅವಲಂಬಿಸಿದ ಕುಟುಂಬದ ಸದಸ್ಯರಿಗೆ ನಿಗದಿತ ಮೊತ್ತ ಸೇರುತ್ತದೆ. ಹಾಗೆ ಅವಲಂಬಿತರಿಗೆ ಸೇರಬೇಕಾದ ಮೊತ್ತಕ್ಕೆ ಹೂಡಿಕೆದಾರರ ಅಕಾಲಿಕ ನಿರ್ಗಮನದಿಂದ ಯಾವುದೇ ನಕಾರಾತ್ಮಕ ಪರಿಣಾಮವೂ ಆಗುವುದಿಲ್ಲ. ಹಾಗಾಗಿ ಇದು ಹಲವು ಬಗೆಯಲ್ಲಿ ಪ್ರಯೋಜನ ಕಾರಿಯಾದ ಉಳಿತಾಯ ಯೋಜನೆಯೂ ಆಗಿದೆ. ಒಂದೇ ಪ್ರಯತ್ನಕ್ಕೆ ಹಲವು ಅನುಕೂಲಗಳನ್ನು ಒದಗಿಸುವಂತಹ ಜೀವ ವಿಮೆಗೆ ಸರಿಸಾಟಿಯಾದ ಬೇರೊಂದು ಯೋಜನೆ ಇಲ್ಲ ಎಂದೇ ಹೇಳಬಹುದು. 
      ಆಸ್ತಿ ಪಾಸ್ತಿಗಳಿಗೆ ಹಣಕಾಸು ನೆರವು ನೀಡಿದ ಹಣಕಾಸು ಸಂಸ್ಥೆಗಳು ತಮ್ಮ ಹಣಕಾಸಿನ ನೆರವು ಸುರಕ್ಷಿತವಾಗಿರುವ ಸಲುವಾಗಿ ಕಡ್ಡಾಯವಾಗಿ ಸಾಮಾನ್ಯ ವಿಮೆಯನ್ನು ಮಾಡಿಸುತ್ತವೆ. ಹಾಗೂ ಒಂದು ನಿರ್ದಿಷ್ಟ ಹಾನಿಯನ್ನು ಅವಲಂಬಿಸಿ ಅಂದರೆ ಒಂದು ವಾಹನದ ಬೆಲೆ ರೂ. 75,000 ಇದ್ದರೆ, ಅದರ ಮೊತ್ತಕ್ಕೆ ಸಾಮಾನ್ಯ ವಿಮೆ (General Insurance) ಮಾಡಿಸುತ್ತಾರೆ.ಆದರೆ ಒಂದು ಕುಟುಂಬಕ್ಕೆ ಆಧಾರ ಸ್ಥಂಭದಂತಿರುವ ವ್ಯಕ್ತಿಯು ಭರವಸೆಯಿಂದ ಹಣ ತೊಡಗಿಸುವ ಜೀವ ವಿಮೆ ಎಂಬುದು ಬೆಲೆ ಕಟ್ಟಲಾಗದಂತಹುದು. ಅದರಲ್ಲಿ ಒಂದಿಡೀ ಕುಟುಂಬದ ಭವಿಷ್ಯ ಅಡಗಿರುತ್ತದೆ ಎಂಬುದನ್ನು ಗಮನಿಸಬೇಕಿದೆ. 
        ಒಂದು ಸರಳ ವಿಧಾನದಿಂದ ಈ ವಿಚಾರವನ್ನು ಮನದಟ್ಟು ಮಾಡಿಕೊಳ್ಳಬಹುದು. ಅದುವೇ ಮಾನವನ ಜೀವದ ಮೌಲ್ಯ (Human Life Value - HLV). ಇದು ಆ ವ್ಯಕ್ತಿಯ ಆದಾಯದ ಮೇಲೆ ಅವಲಂಬಿತವಾಗಿದೆ. ಆ ಕಾರಣದಿಂದ ಜೀವ ವಿಮೆಯನ್ನು ಸರ್ಕಾರ ಕಡ್ಡಾಯಗೊಳಿಸಿಲ್ಲ. ಪ್ರತಿ ವ್ಯಕ್ತಿ ಅಥವಾ ಕುಟುಂಬ ತಮ್ಮ ಆದಾಯಕ್ಕೆ ತಕ್ಕಂತೆ ಜೀವ ವಿಮೆ ಮಾಡಿಸುವುದನ್ನು ಸ್ವಂತ ನಿರ್ಧಾರಕ್ಕೇ ಬಿಡಲಾಗಿದೆ. ಹಾಗಾಗಿ ಪ್ರತಿ ಕುಟುಂಬವೂ ಅದರ ಆದಾಯಕ್ಕೆ ತಕ್ಕಂತೆ ಗರಿಷ್ಠ ಜೀವ ವಿಮಾ ಸುರಕ್ಷೆಯನ್ನು ಹೊಂದುವುದು ಅವಶ್ಯ. ಆದರೆ ವಾರ್ಷಿಕ ಆದಾಯದ ಶೇಕಡ 10, ಶೇ 15, ಶೇ 20 ಮತ್ತು ಶೇ 25ರಷ್ಟನ್ನು ಮಾಸಿಕ ಆದಾಯ ಬೆಳೆದಂತೆ ಅಥವಾ ಆದಾಯಕ್ಕೆ ತಕ್ಕಂತೆ ಶೇಕಡವಾರು ಪ್ರೀಮಿಯಂ ನಿಗದಿ ಪಡಿಸಿಕೊಂಡು ಜೀವ ವಿಮಾ ಯೋಜನೆಗಳಲ್ಲಿ ತೊಡಗಿಸುವುದು ಒಳ್ಳೆಯದು.  
      ಜೀವ ವಿಮೆಯ ಅನುಕೂಲ: ಜೀವ ವಿಮಾ ಪಾಲಿಸಿಯೂ ಒಂದು ಆಸ್ತಿಯೇ ಆಗಿದೆ. ಸ್ಥಿರ, ಚರ ಆಸ್ತಿಗಳಿಗೆ ಸಂಬಂಧಿಸಿದ ಒಡೆತನದ ಪತ್ರಕ್ಕೆ ಎಷ್ಟು ಪ್ರಾಮುಖ್ಯತೆ ಯಿದೆಯೋ ಅಷ್ಟೇ ಪ್ರಾಮುಖ್ಯಗೆ ವಿಮಾ ಪಾಲಿಸಿಯ ಬಾಂಡ್‌ಗೂ ಇರುತ್ತದೆ. ಮನೆಯಲ್ಲಿ ಚಿನ್ನ ಬೆಳ್ಳಿ ಆಭರಣವಿದ್ದರೆ ಆಪತ್ಕಾಲಕ್ಕೆ ಒದಗುತ್ತದೆ ಎಂಬುದು ನೂರಾರು ವರ್ಷಗಳಿಂದಲೂ ಭಾರತೀಯ ಕುಟುಂಬಗಳಲ್ಲಿ ಬೆಳೆದುಬಂದಿರುವ ನಂಬಿಕೆ. ಆಭರಣ ಎಂಬುದು ಮನೆಯ ಹೆಣ್ಣು ಮಕ್ಕಳು ಹಬ್ಬ ಮತ್ತು ಸಮಾರಂಭಗಳಲ್ಲಿ ತೊಟ್ಟುಕೊಂಡು ಆನಂದಿಸಲಷ್ಟೇ ಅಲ್ಲ, ತುರ್ತಾಗಿ ಹಣ ಬೇಕಾದರೆ ಆಭರಣವನ್ನು ಬ್ಯಾಂಕ್‌ನಲ್ಲಿ ಅಡವಿಟ್ಟು ಸಾಲವಾಗಿ ಹಣವನ್ನು ಪಡೆಯಬಹುದು. ಮತ್ತೆ ಹಣ ಒದಗಿಬಂದಾಗ ಅಸಲು ಬಡ್ಡಿ ಕಟ್ಟಿ ಆಭರಣವನ್ನು ಬಿಡಿಸಿಕೊಳ್ಳಬಹುದು.  
       ಇದೇ ರೀತಿಯಲ್ಲಿ ಜೀವ ವಿಮಾ ಪಾಲಿಸಿಯೂ ಸಹ ಅಪತ್ಕಾಲದಲ್ಲಿ, ತುರ್ತು ಸಂದರ್ಭಗಳಲ್ಲಿ ಒದಗುತ್ತದೆ. ಯಾವುದಕ್ಕಾದರೂ ತುರ್ತಾಗಿ ಹಣ ಬೇಕಾದರೆ ಜೀವ ವಿಮೆಯ ಬಾಂಡನ್ನು ಇತರೆ ಹಣಕಾಸು ಸಂಸ್ಥೆಗಳಲ್ಲಿ ಅಡವಿಟ್ಟು ಸಾಲ ಪಡೆಯಬಹುದು.ಹಾಗೆಂದು ಸಾಲ ನೀಡಿದವರು ವಿಮಾ ಹಣದ ಮೇಲೆ ಹಕ್ಕು ಸಾಧಿಸುವಂತಿಲ್ಲ. ಹಾಗೂ ನ್ಯಾಯಾಲಯಗಳ ಜಪ್ತಿ ಮುಂತಾದವುಗಳಿಂದ ವಿಮೆ ಮಾಡಿಸಿದವರಿಗೆ ರಕ್ಷಣೆಯೂ ಇರುತ್ತದೆ. ವಿಮೆಗೆ ತುಂಬುವ ಪ್ರೀಮಿಯಂ ಹಣಕ್ಕೆ ಪ್ರತಿ ಹಣಕಾಸು ವರ್ಷದಲ್ಲಿಯೂ ಆದಾಯ ತೆರಿಗೆ ಹೊರೆಯಿಂದ ವಿನಾಯಿತಿಯೂ ಇದೆ.
         ಕುಟುಂಬದ ಮುಖ್ಯಸ್ಥರು, ದುಡಿಮೆ ಮಾಡುವ ಮುಖ್ಯ ವ್ಯಕ್ತಿಯ ಸಾವಿಗೀಡಾದರೆ ಅವರನ್ನು ಅವಲಂಬಿಸಿದವರಿಗೆ ದಿಕ್ಕೇ ತೋಚದಂತಾಗುತ್ತದೆ. ‘ಮುಂದೇನು ಗತಿಯಪ್ಪಾ?’ ಎಂಬ ಚಿಂತೆ ಆವರಿಸುತ್ತದೆ. ಒಂದೊಮ್ಮೆ ಕುಟುಂಬದ ಆ ಮುಖ್ಯ ವ್ಯಕ್ತಿ ಜೀವ ವಿಮೆ ಮಾಡಿಸಿದ್ದರೆ ಆ ಹಣವು ಕುಟುಂಬದ ಸಂಕಷ್ಟಕ್ಕೆ ಒದಗುತ್ತದೆ.ಜೀವ ವಿಮೆ ಮಾಡಿಸಿದ್ದ ವ್ಯಕ್ತಿ ಅಸುನೀಗಿದರೆ ವಿಮಾ ಯೋಜನೆ ಇತ್ಯರ್ಥ ಈಗಂತೂ ಬಹಳ ಸರಳ. ನಾಮನಿರ್ದೇಶನ (ನಾಮಿನೇಷನ್) ಹಾಗೂ ವರ್ಗಪತ್ರ (ಅಸೈನ್‌ಮೆಂಟ್) ಸೌಲಭ್ಯವೂ ಇರುವುದರಿಂದ ಆ ವ್ಯಕ್ತಿಯ ವಾರಸುದಾರರು ವಿಮಾ ಸಂಸ್ಥೆಯಿಂದ ಬೇಗನೇ ಹಣವನ್ನು ಪಡೆದುಕೊಳ್ಳಬಹುದು. ಈಗ ಇಂತಹ ನಾಮನಿರ್ದೇಶನ, ವರ್ಗಪತ್ರ ಸೌಲಭ್ಯ ಭವಿಷ್ಯ ನಿಧಿ ಹಾಗೂ ಬ್ಯಾಂಕ್ ಖಾತೆಗಳಿಗೂ ಲಭ್ಯವಿದೆ. 
      ಜೀವ ವಿಮೆಗಾಗಿ ಪಾವತಿಸಿದ ಪ್ರೀಮಿಯಂ ಹಣವನ್ನು ವಿಮಾ ಕಂಪೆನಿಗಳು ಭಾರತೀಯ ವಿಮಾ ಕಾಯ್ದೆಯ 1938ರ ಸೆಕ್ಷನ್ 27(ಎ) ಪ್ರಕಾರ ಹೂಡಿಕೆ ಮಾಡಿ ಲಾಭ ಗಳಿಸುತ್ತವೆ. ಆ ಲಾಭದಿಂದಲೇ ವಿಮೆ ಮಾಡಿಸಿದ ವ್ಯಕ್ತಿ ಅಥವಾ ಆತನ ಕುಟುಂಬಕ್ಕೆ ಬೋನಸ್‌ ಅಥವಾ ಪರಿಹಾರ ಸೇರಿದಂತೆ ಒಟ್ಟು ವಿಮಾ ಮೊತ್ತವನ್ನು ಸಕಾಲದಲ್ಲಿ ಪಾವತಿಸುತ್ತವೆ.
      ಜೀವ ವಿಮೆಯನ್ನು ಕುಟುಂಬ ಅಥವಾ ವ್ಯಕ್ತಿಯ ಆದ್ಯತೆಗಳಿಗೆ ತಕ್ಕಂತೆ ಪಡೆಯಬೇಕು. ದೀರ್ಘಕಾಲದ ಉಳಿತಾಯವು ಸುದೀರ್ಘ ಅವಧಿಯ ಉದ್ದೇಶಗಳನ್ನೇ ಹೊಂದಿರುತ್ತದೆ. ಉದಾಹರಣೆಗೆ ಮಕ್ಕಳ ವಿದ್ಯಾಭ್ಯಾಸ ಹಾಗೂ ಮದುವೆಗೆ, ಸ್ವಂತ ಮನೆ ಹೊಂದುವ ಕನಸು ಈಡೇರಿಸಿಕೊಳ್ಳಲು, ವೃದ್ಧಾಪ್ಯದಲ್ಲಿನ ಮಾಸಿಕ ವೆಚ್ಚಕ್ಕೆ ಖಚಿತವಾಗಿ ಹಣ ಪಡೆಯುವ ಯೋಜನೆ, ಅನಾರೋಗ್ಯವಾದಾಗ ಅಗತ್ಯ ಚಿಕಿತ್ಸೆಗೆ... ಹೀಗೆ ವಿವಿಧ ಆದ್ಯತೆಗಳಿಗಾಗಿ ಜೀವ ವಿಮೆಯಲ್ಲಿ ನಿರಂತರ ಉಳಿತಾಯ ಸಹಕಾರಿ.ಮುಖ್ಯವಾದ ಇನ್ನೊಂದು ಸಂಗತಿ ಎಂದರೆ, ಜೀವ ವಿಮೆ ಮಾಡಿಸಿದ ವ್ಯಕ್ತಿ ಪಾಲಿಸಿಯನ್ನು ಆಧರಿಸಿ ಗೃಹ ಸಾಲವನ್ನೂ ಪಡೆಯಲು ಅವಕಾಶವಿರುತ್ತದೆ. 
       ಪ್ರತಿ ಕುಟುಂಬವೂ ಅದರ ಮಾಸಿಕ ಆದಾಯಕ್ಕೆ ತಕ್ಕಂತೆ ಜೀವವಿಮೆಯ ಪಾಲಿಸಿಗಳನ್ನು ಮಾಡಿಸಿಕೊಳ್ಳಬೇಕು. ಅಂದರೆ, ಇಲ್ಲಿ ದುಡಿಮೆಯನ್ನು ಆಧರಿಸಿಯೇ ವಿಮೆಯ ಅವಧಿ, ಪ್ರೀಮಿಯಂ ಮೊತ್ತವನ್ನು ನಿರ್ಧರಿಸುವುದು ಸೂಕ್ತ. 

Tuesday, October 20, 2015

ರಾಜ್ಯದಲ್ಲಿ ಪ್ಲಾಸ್ಟಿಕ್ ನಿಷೇಧಕ್ಕೆ ಸಂಪುಟ ಸಮ್ಮತಿ

ಬೆಂಗಳೂರು: ರಾಜ್ಯದಲ್ಲಿ ಪ್ಲಾಸ್ಟಿಕ್ ತಯಾರಿಕೆ, ಮಾರಾಟ ಮತ್ತು  ಬಳಕೆ ನಿಷೇಧಕ್ಕೆ ರಾಜ್ಯ ಸಚಿವ ಸಂಪುಟ ಸಮ್ಮತಿ ಸೂಚಿಸಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಅಧ್ಯಕ್ಷತೆಯಲ್ಲಿ ಮಂಗಳವಾರ ನಡೆದ ಸಚಿವ ಸಂಪುಟದಲ್ಲಿ ಸಭೆಯಲ್ಲಿ 40 ಮೈಕ್ರಾನ್‍ಗಿಂತಲೂ ಕಡಿಮೆ ಪ್ರಮಾಣದ ಎಲ್ಲಾ ರೀತಿಯ ಪ್ಲಾಸ್ಟಿಕ್ ಉತ್ಪನ್ನಗಳ ತಯಾರಿಕೆ, ಸರಬರಾಜು, ಸಂಗ್ರಹಣೆ, ಸಾಗಾಣಿಕೆ, ಮಾರಾಟ, ವಿತರಣೆ ಹಾಗೂ ಬಳಕೆಯನ್ನು ರಾಜ್ಯಾದ್ಯಂತ ಸಂಪೂರ್ಣ ನಿಷೇಧಿಸಲು ತೀರ್ಮಾನಿಸಲಾಯಿತು ಎಂದು ಪಶುಸಂಗೋಪನಾ ಮತ್ತು ಮುಜರಾಯಿ ಹಾಗೂ ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಶ್ರೀ ಟಿ. ಬಿ. ಜಯಚಂದ್ರ ಅವರು ಪತ್ರಿಕಾಗೋಷ್ಠಿಯಲ್ಲಿ ಪ್ರಕಟಿಸಿದರು.
   ಪ್ಲಾಸ್ಟಿಕ್ ಹಾನಿಕರ. ಅದರ ಬಳಕೆಯಿಂದ ಪರಿಸರದ ಮೇಲೆ ಉಂಟಾಗುತ್ತಿರುವ ದುಷ್ಪರಿಣಾಮದ ಹಿನ್ನೆಲೆಯಲ್ಲಿ ಈ ನಿಷೇಧವನ್ನು ವಿಧಿಸಲಾಗಿದೆ. ರಾಜ್ಯದಲ್ಲಿ 450 ಪ್ಲಾಸ್ಟಿಕ್ ಉತ್ಪಾದನಾ ಕಂಪನಿಗಳಿವೆ. ಈ ಕಂಪನಿಗಳು 40 ಮೈಕ್ರಾನ್‍ಗಿಂತಲೂ ಹೆಚ್ಚು ಪ್ರಮಾಣದ ಪ್ಲಾಸ್ಟಿಕ್ ಉತ್ಪಾದನೆ ಮಾಡಿ ರಫ್ತು ಮಾಡಬಹುದಾಗಿದೆ. ಆದ್ದರಿಂದ, ಸರ್ಕಾರದ ಈ ನಿರ್ಧಾರದಿಂದ ಪ್ಲಾಸ್ಟಿಕ್ ತಯಾರಿಕಾ ಕಂಪನಿಗಳಿಗೆ ಯಾವುದೇ ನಷ್ಟ ಉಂಟಾಗುವುದಿಲ್ಲ. ಜೊತೆಗೆ, ಇಂತಹ ಪ್ಲಾಸ್ಟಿಕ್‍ನಿಂದ ಕೃಷಿ ಕೊಳವೆಗಳು (ಪೈಪುಗಳು) ಮತ್ತು ಸಿಂಪಡಣಾ ಉಪಕರಣಗಳು (ಸ್ಪ್ರಿಂಕ್ಲರ್ ಎಕ್ವಿಪ್‍ಮೆಂಟ್ಸ್) ತಯಾರಿಸಬಹುದಲ್ಲದೆ, ಡಾಂಬರು ರಸ್ತೆಗಳನ್ನು ನಿರ್ಮಿಸಬಹುದು ಎಂದು ಸಚಿವರು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

Monday, October 19, 2015

ಸಗಟು ವ್ಯಾಪಾರದ ಮೇಲೂ ಅಮೆಜಾನ್ ಕಣ್ಣು !



     -ಬೆಂಗಳೂರು, ಮಂಗಳೂರುಗಳಿಗೆ ಅಮೆಜಾನ್ ಬ್ಯುಸಿನೆಸ್.ಇನ್ ಸೇವೆ
     ಬೆಂಗಳೂರು: ಆನ್ ಲೈನ್ ವ್ಯಾಪಾರದಲ್ಲಿ ಈಗಾಗಲೇ ದೇಶದೆಲ್ಲೆಡೆ ತನ್ನ ಕಬಂಧ ಬಾಹುಗಳನ್ನು ವಿಸ್ತರಿಸಿರುವ ಅಮೆಜಾನ್ ಕಂಪನಿ ಇದೀಗ ಸಗಟು(ಹೋಲ್ ಸೇಲ್) ವ್ಯಾಪಾರದ ಮೇಲೂ ಕಣ್ಣು ಹಾಕಿದೆ. ಕಳೆದ ಮೇ ತಿಂಗಳಿನಲ್ಲೆ ಬೆಂಗಳೂರಿನಲ್ಲಿ ಆರಂಭಿಸಲಾದ ಅಮೆಜಾನ್ ಬ್ಯುಸಿನೆಸ್. ಇನ್ ಸದಸ್ಯತ್ವ ನೋಂದಣಿಯನ್ನು ಇಂದಿನಿಂದ ಮಂಗಳೂರಿಗೂ ವಿಸ್ತರಿಸುತ್ತಿರುವುದಾಗಿ ಸಂಸ್ಥೆಯ ಜನರಲ್ ಮೇನೇಜರ್ ಕವೀಶ್ ಚಾವ್ಲಾ ತಿಳಿಸಿದರು. ಸದಸ್ಯರಿಗೆ ಮಾತ್ರ ಇರುವ ಈ ಸೇವೆಯ ಸೌಲಭ್ಯವನ್ನು ನಿರ್ದಿಷ್ಟವಾಗಿ ಕಛೇರಿಗಳು, ಉದ್ಯಮಗಳು, ದಿನಸಿ ಅಂಗಡಿಗಳು, ಕ್ಲಿನಿಕ್, ಆಸ್ಪತ್ರೆಗಳು, ಹೋಟಲ್, ರೆಸ್ಟಾರೆಂಟ್, ಸಣ್ಣ ಮತ್ತು ಮಧ್ಯಮ ಉದ್ಯಮಗಳಿಗಾಗಿ ವಿನ್ಯಾಸಗೊಳಿಸಾಗಿದ್ದು, ಈ ಸಂಸ್ಥೆಗಳು ತಮಗೆ ಅಗತ್ಯವಿರುವ ಉತ್ಪನ್ನಗಳನ್ನು ಸಗಟು ಬೆಲೆಯಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಆನ್ಲೈಲೈನ್ ನಲ್ಲಿ ಖರೀದಿಸಬಹುದಾಗಿದೆ ಎಂದು ಅವರು ಹೇಳಿದರು.
ನೂರಾರು ಬ್ರಾಂಡ್ ಗಳ ಸಾವಿರಾರು ಉತ್ಪನ್ನಗಳನ್ನು ಒಳಗೊಂಡ ವಿಸ್ತಾರವಾದ ಸಂಗ್ರಹವನ್ನು ಅಮೆಜಾನ್ ಬ್ಯುಸಿನೆಸ್.ಇನ್ ಹೊಂದಿದೆ. ಆರೋಗ್ಯ ಮತ್ತು ವೈಯಕ್ತಿಕ ಆರೈಕೆ, ಆಹಾರ ಮತ್ತು ಪೇಯಗಳು, ಶುದ್ಧೀಕರಣ ಉಪಕರಣಗಳು, ಅಡುಗೆಮನೆ ಮತ್ತು ಭೋಜನಗೃಹ, ಸ್ನಾನಗೃಹ ಮತ್ತು ಪೀಠೋಪಕರಣಗಳು, ಕಛೇರಿ ಪರಿಕರಗಳು ಮತ್ತು ಸ್ಟೇಷನರಿ, ಕೊಡುಗೆ ಕಾರ್ಡುಗಳು, ಕಂಪ್ಯೂಟರ್ ಗಳು ಮತ್ತು ಬಿಡಿಭಾಗಗಳು ಇದರಲ್ಲಿ ಸೇರಿವೆ.
 

ಮ್ಯಾಗಿ ನೂಡಲ್ಸ್ ಮಾರಾಟದ ಮೇಲಿನ ನಿಷೇಧ ವಾಪಸ್ : ಯು.ಟಿ.ಖಾದರ್



ಬೆಂಗಳೂರು, ಅಕ್ಟೋಬರ್ 19 : ಕೇಂದ್ರ ಸರ್ಕಾರದ ಸೂಚನೆಯಂತೆ ರಾಜ್ಯದಲ್ಲಿ ಮ್ಯಾಗಿ ನೂಡಲ್ಸ್ ಮಾರಾಟದ ಮೇಲೆ ವಿಧಿಸಲಾಗಿದ್ದ ನಿಷೇಧವನ್ನು ಈ ಕೂಡಲೇ ವಾಪಸ್ ಪಡೆಯಲಾಗಿದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಯು. ಟಿ. ಖಾದರ್ ಅವರು ಇಲ್ಲಿ ಇಂದು ಪ್ರಕಟಿಸಿದರು.
ಕೊಲ್ಕತ್ತಾದಲ್ಲಿನ ಕೇಂದ್ರ ಆಹಾರ ಪರೀಕ್ಷಾ ಪ್ರಯೋಗಾಲಯಕ್ಕೆ ನಾಲ್ಕು ತಿಂಗಳ ಹಿಂದೆಯೇ ರಾಜ್ಯದಲ್ಲಿ ಮಾರಾಟವಾಗುತ್ತಿದ್ದ ಮ್ಯಾಗಿ ನೂಡಲ್ಸ್‍ನ ಮಾದರಿಯನ್ನು ಕಳುಹಿಸಿದರೂ, ರಾಜ್ಯಕ್ಕೆ ಈವರೆಗೂ ಪರೀಕ್ಷಾ ವರದಿ ಬಂದಿಲ್ಲ ಎಂದು ಅವರು ಪತ್ರಿಕಾ ಗೋಷ್ಠಿಯಲ್ಲಿ ತಿಳಿಸಿದರು.
ಭಾರತೀಯ ಆಹಾರ ಸುರಕ್ಷತಾ ಪ್ರಾಧಿಕಾರವೂ ಕೂಡಾ ಮ್ಯಾಗಿ ಮೇಲಿನ ನಿಷೇಧದ ಬಗ್ಗೆ ಸ್ಪಷ್ಟವಾದ ಆದೇಶ ಹೊರಡಿಸಿರಲಿಲ್ಲ. ಕೇಂದ್ರ ಸರ್ಕಾರದ ಆದೇಶದಲ್ಲೂ ಯಾವುದೇ ಸ್ಪಷ್ಟತೆ ಇಲ್ಲದ ಹಿನ್ನೆಲೆಯಲ್ಲಿ ಮ್ಯಾಗಿ ನೂಡಲ್ಸ್ ಮೇಲಿನ ನಿಷೇಧವನ್ನು ಅನಿವಾರ್ಯವಾಗಿ ವಾಪಸ್ ಪಡೆಯಲಾಗಿದೆ ಎಂದು ಸಚಿವರು ವಿವರಿಸಿದರು.
ಮ್ಯಾಗಿ ನೂಡಲ್ಸ್‍ನಲ್ಲಿ ಸೀಸದ ಅಂಶ ಎಷ್ಟು ಪ್ರಮಾಣದಲ್ಲಿ ಇದೆ ಅಥವಾ ಇರಬೇಕು ಎಂಬುದನ್ನು ಯಾವುದೇ ಪ್ರಯೋಗಾಲಯವೂ ಸ್ಪಷ್ಟಪಡಿಸಿಲ್ಲ. ಆದರೆ, ಕಂಪನಿಗಳಲ್ಲಿ ಈಗಾಗಲೇ ದಾಸ್ತಾನು ಮಾಡಿರುವ ಮ್ಯಾಗಿ ನೂಡಲ್ಸ್ ಮಾರುಕಟ್ಟೆಗೆ ಬರದಂತೆ ಎಚ್ಚರ ವಹಿಸಲಾಗುವುದು. ಹೊಸದಾಗಿ ತಯಾರಾಗುವ ನೂಡಲ್ಸ್ ಮಾರುಕಟ್ಟೆಗೆ ಪ್ರವೇಶಿಸುವ ಮುನ್ನ ಮತ್ತೊಮ್ಮೆ ಪರೀಕ್ಷೆಗೆ ಒಳಪಡಿಸಿ, ಜನಾರೋಗ್ಯದತ್ತ ವಿಶೇಷ ಗಮನಹರಿಸಲಾಗುವುದು ಎಂದು ಯು. ಟಿ ಖಾದರ್ ಅವರು ಹೇಳಿದರು.
ಕಳೆದ ಜೂನ್ 5 ರಂದು ಕೇಂದ್ರ ಸರ್ಕಾರವು ಹೊರಡಿಸಿದ್ದ ಆದೇಶದಂತೆ ರಾಜ್ಯದಲ್ಲಿ ಮ್ಯಾಗಿ ನೂಡಲ್ಸ್‍ನ ಮಾರಾಟದ ಮೇಲೆ ನಿಷೇಧ ಹೇರಲಾಗಿತ್ತು. ಒಕ್ಕೂಟದ ವ್ಯವಸ್ಥೆಯಲ್ಲಿ ಕೇಂದ್ರ ಸರ್ಕಾರದ ಆದೇಶಗಳನ್ನು ಗೌರವಿಸುವ ಹಾಗೂ ಸಾರ್ವಜನಿಕರ ಆರೋಗ್ಯ ಕಾಯ್ದುಕೊಳ್ಳುವ ದೃಷ್ಟಿಯಿಂದ ಈ ಆದೇಶವನ್ನು ಪಾಲಿಸಲಾಗಿತ್ತು. ಮ್ಯಾಗಿ ನೂಡಲ್ಸ್ ಮಾರಾಟದ ಮೇಲಿನ ನಿಷೇಧದಿಂದಾಗಿ ರಾಜ್ಯದಲ್ಲಿ ಐದು ನೂರು ಮಂದಿಗೆ ಉದ್ಯೋಗವಿಲ್ಲದಂತಾಗಿತ್ತು ಎಂದೂ ಸಚಿವರು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

Tuesday, October 13, 2015

ಪ್ರೌಢಶಾಲೆ ಶಿಕ್ಷಕರ ಆಯ್ಕೆಪಟ್ಟಿ ಎರಡು ದಿನಗಳಲ್ಲಿ ಬಿಡುಗಡೆ : ಸಚಿವ ಕಿಮ್ಮನೆ ರತ್ನಾಕರ

ಬೆಂಗಳೂರು, ಅಕ್ಟೋಬರ್ 13: ಫ್ರೌಡಶಾಲೆ ಶಿಕ್ಷಕರ ನೇಮಕಾತಿ ಆಯ್ಕೆ ಪಟ್ಟಿಯನ್ನು ಇನ್ನೆರಡು ದಿನಗಳಲ್ಲಿ ಪ್ರಕಟಿಸಲಾಗುವುದು ಎಂದು ಪ್ರಾಥಮಿಕ ಹಾಗೂ ಪ್ರ್ರೌಢ ಶಿಕ್ಷಣ ಸಚಿವ ಕಿಮ್ಮನೆ ರತ್ನಾಕರ್ ಅವರು ತಿಳಿಸಿದರು.
      ವಿಧಾನಸೌಧದ ಕಚೇರಿಯಲ್ಲಿ ಇಂದು ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವರು ಪ್ರೌಢ ಶಾಲೆಯ 1130 ಶಿಕ್ಷಕರ ಹುದ್ದೆಗೆ ನಡೆದ ಆಯ್ಕೆ ಪ್ರಕ್ರಿಯೆ ಪೂರ್ಣಗೊಂಡಿದ್ದು, ಆಯ್ಕೆ ಪಟ್ಟಿಯನ್ನು ಪ್ರಕಟಿಸಲಾಗುವುದು. ಹಾಗೆಯೇ ಪ್ರಾಥಮಿಕ ಶಾಲೆಯ ಶಿಕ್ಷಕರ 9511 ಹುದ್ದೆಗಳಿಗೆ ನಡೆಸಲಾಗಿದ್ದ ಆಯ್ಕೆ ಪ್ರಕ್ರಿಯೆ ಅಂತಿಮ ಹಂತದಲ್ಲಿದ್ದು 9511 ಹುದ್ದೆಗಳ ಆಯ್ಕೆಪಟ್ಟಿಯನ್ನು ಸದ್ಯದಲ್ಲೇ ಬಿಡುಗಡೆ ಮಾಡಲಾಗುವುದು ಎಂದರು.
    ಇಲಾಖೆಯಲ್ಲಿ ಖಾಲಿ ಉಳಿದಿರುವ ಸುಮಾರು 25 ಸಾವಿರ ಶಿಕ್ಷಕರ ಹುದ್ದೆಗಳನ್ನು ಎರಡು ಹಂತಗಳಲ್ಲಿ ಭರ್ತಿಮಾಡಲಾಗುವುದು ಎಂದು ತಿಳಿಸಿದ ಕಿಮ್ಮನೆ ರತ್ನಾಕರ್ ಅವರು ಮುಂದಿನ ಶೈಕ್ಷಣಿಕ ವರ್ಷದಿಂದ ಪ್ರೌಢಶಾಲೆಗಳಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳಿಗೆ ಉಚಿತ ಶೂಗಳನ್ನು ವಿತರಿಸಲು ಚಿಂತಿಸಲಾಗಿದ್ದು, ಈ ಬಗ್ಗೆ ಅಧಿಕಾರಿಗಳೊಂದಿಗೆ ಈಗಾಗಲೇ ಚರ್ಚಿಸಲಾಗಿದೆ ಎಂದರು.
ಶಿಕ್ಷಣ ಹಕ್ಕು ಕಾಯ್ದೆ (ಆರ್.ಟಿ.ಇ) ಯಡಿ ಖಾಸಗಿ ಶಾಲೆಗಳಲ್ಲಿ ಇನ್ನೂ ಸೀಟು ಪಡೆಯಲು ಇನ್ನು ಮುಂದೆ ಬಿ.ಪಿ.ಎಲ್ ಕಾರ್ಡುಗಳನ್ನು ಕಡ್ಡಾಯಗೊಳಿಸಲು ಚಿಂತಿಸಲಾಗಿದೆ ಎಂದು ಇದೇ ಸಂದರ್ಭದಲ್ಲಿ ಕಿಮ್ಮನೆ ರತ್ನಾಕರ್ ಅವರು ತಿಳಿಸಿದರು.

Monday, October 12, 2015

ಅ.14ರಂದು ಕಾಫಿ ಡೇ ಸಾರ್ವಜನಿಕ ಷೇರು ಬಿಡುಗಡೆ


ಬೆಂಗಳೂರು :ಕಾಫಿ ಡೇ ಎಂಟರ್ ಪ್ರೈಸಸ್ ಲಿಮಿಟೆಡ್, ಅಕ್ಟೋಬರ್ 14, 2015ರಂದು ರೂ. 10 ಮುಖ ಬೆಲೆಯ ಈಕ್ವಿಟಿ ಷೇರುಗಳ ಸಾರ್ವಜನಿಕ ವಿತರಣೆಯನ್ನು ಆರಂಭಿಸಲಿದ್ದು, ಇದರಿಂದ ರೂ. 11,500 ಮಿಲಿಯನ್ ಸಂಪನ್ಮೂಲ ಕ್ರೋಡೀಕರಿಸಲು ಉದ್ದೇಶಿಸಲಾಗಿದೆ. ಸಾರ್ವಜನಿಕ ವಿತರಣೆಯಲ್ಲಿ ನಿವ್ವಳ ವಿತರಣೆ ಮತ್ತು ಅರ್ಹ ಸಿಬ್ಬಂದಿಗೆ ಕಾದಿರಿಸಿದ ರೂ. 150 ಮಿಲಿಯನ  ಮೌಲ್ಯದ  ಷೇರುಗಳು ಸೇರಿವೆ. ದರಪಟ್ಟಿಯು ಪ್ರತಿ ಈಕ್ವಿಟಿ ಷೇರಿಗೆ ರೂ. 316ರಿಂದ ರೂ. 328 ಎಂದು ಗುರುತಿಸಲಾಗಿದೆ. ಕನಿಷ್ಠ ಬಿಡ್ ಪ್ರಮಾಣ 45 ಈಕ್ವಿಟಿ ಷೇರುಗಳಾಗಿದ್ದು, ನಂತರ 45ರ ಗುಣಕದಲ್ಲಿ ಖರೀದಿಸಬಹುದು.
       ಕಾಫಿ ಡೇ ಎಂಟರ್ ಪ್ರೈಸಸ್ ಲಿಮಿಟೆಡ್ ಎಂಬುದು ಕಾಫಿ ಡೇ ಗ್ರೂಪ್‍ನ ಮಾತೃ ಸಂಸ್ಥೆಯಾಗಿದ್ದು, ಕಾಫಿ, ಐಟಿ-ಐಟಿಇಎಸ್ ತಾಂತ್ರಿಕ ಉದ್ಯಾನಗಳ ಅಭಿವೃದ್ಧಿ ಮತ್ತು ನಿರ್ವಹಣೆ, ಸಮಗ್ರ ಲಾಗಿಸ್ಟಿಕ್ ಸಲ್ಯೂಷನ್ಸ್, ಹಣಕಾಸು ಸೇವೆ, ಆತಿಥ್ಯ, ಕಾರ್ಯತಂತ್ರ ಕಂಪನಿಗಳ ಮೇಲೆ ಹೂಡಿಕೆಯ ಕಾರ್ಯದಲ್ಲಿ ತೊಡಗಿದೆ. ದೇಶಾದ್ಯಂತ ಕಾಫಿ ಕೆಫೆಗಳಲ್ಲಿಯೂ ತೊಡಗಿಕೊಂಡಿದೆ. ಇದರ ಜತೆಗೆ ಕಾಫಿ ಸಂಸ್ಕರಣೆ, ಸಂಗ್ರಹ, ರೋಸ್ಟಿಗ್, ಬಿಡಿ ವ್ಯಾಪಾರ ಚಟುವಟಿಕೆಯಲ್ಲಿಯೂ ತೊಡಗಿದೆ. ಕಂಪನಿಯು ತನ್ನ ಮೊದಲ ಕೆಫೆ ಕಾಫಿ ಡೇ ಮಳಿಗೆಯನ್ನು 1996ರಲ್ಲಿ ಬೆಂಗಳೂರಿನಲ್ಲಿ ಆರಂಭಿಸಿದ್ದು, ದೇಶಾದ್ಯಂತ 219ನಗರಗಳಲ್ಲಿ 1,538 ಕೆಫೆ ಮಳಿಗೆಗಳನ್ನು ಹೊಂದಿದೆ
     ಕಂಪನಿಯು ಪೂರ್ಣ ಅಂಗ ಸಂಸ್ಥೆಯಾದ ಟ್ಯಾಂಗ್ಲಿನ್ ಡೆವಲಪ್‍ಮೆಂಟ್ ಲಿಮಿಟೆಡ್ ಟೆಕ್ನಾಲಜಿ ಪಾರ್ಕ್ ನಿರ್ವಹಣೆ ಮತ್ತು ಸಂಬಂಧಿತ ಮೂಲಸೌಲಭ್ಯ ವ್ಯವಸ್ಥೆ ನಿರ್ವಹಣೆಯಲ್ಲಿ ತೊಡಗಿದೆ. ಕಂಪನಿಯ ಅಂಗ ಸಂಸ್ಥೆ ಸಿಸ್ಕಲ್ ಲಾಗಿಸ್ಟಿಕ್ ಲಿಮಿಟೆಡ್‍ನಲ್ಲಿ ಸಿಡಿಇಎಲ್ ಶೇ 52.8ರಷ್ಟು ಈಕ್ವಿಟಿ ಹೊಂದಿದ್ದು, ದೇಶದ ಪ್ರಮುಖ ಲಾಗಿಸ್ಟಿಕ್ ಸಲ್ಯೂಷನ್ ಸಂಸ್ಥೆಯಾಗಿದೆ.
ಕಂಪನಿಯ ಅಂಗಸಂಸ್ಥೆಯಾದ ವೇ2ವೆಲ್ತ್ ಸೆಕ್ಯೂರಿಟೀಸ್ ಪ್ರೈವೇಟ್ ಲಿಮಿಟೆಡ್ ಸಂಸ್ಥೆಯಲ್ಲಿ ಸಿಡಿಇಎಲ್ ಒಟ್ಟು ಶೇ 85.53ರಷ್ಟು ಈಕ್ವಿಟಿ ಹೊಂದಿದೆ. ಇದು, ಹೂಡಿಕೆ ಸಲಹಾ ಕಂಪನಿಯಾಗಿ ಕಾರ್ಯ ನಿರ್ವಹಿಸುತ್ತಿದೆ. ಕಂಪನಿಯು ಮೂರು ವಿಲಾಸಿ ರೆಸಾರ್ಟ್‍ಗಳ ಮಾಲೀಕತ್ವ ಹೊಂದಿದ್ದು, ನಿರ್ವಹಣೆ ಮಾಡುತ್ತಿದೆ. ರೆಸಾಟ್ಸ್‍ಗಳು ಕರ್ನಾಟಕದ ಚಿಕ್ಕಮಗಳೂರು, ಬಂಡಿಪುರ, ಕಬಿನಿಯಲ್ಲಿ ಕಾರ್ಯ ತತ್ಪರವಾಗಿವೆ. ಹೆಚ್ಚುವರಿಯಾಗಿ ಇದು ಅಂಡಮಾನ್, ನಿಕೋಬಾರ್ ದ್ವೀಪದಲ್ಲಿ ಇರುವ ಲಕ್ಸುರಿ ರೆಸಾರ್ಟ್‍ಗಳನ್ನು ನಿರ್ವಹಣೆ ಮಾಡುತ್ತಿದೆ.
     ಕಂಪನಿಯು ಇದರ ಜತೆಗೆ ಐಟಿ-ಐಟಿಇಎಸ್ ಮತ್ತು ಇತರೆ ಟೆಕ್ನಾಲಜಿ ಕಂಪನಿಗಳಲ್ಲಿ ಅಂದರೆ ಮೈಡ್‍ಟ್ರೀಯಲ್ಲಿಯೂ ಹೂಡಿಕೆ ಮಾಡಿದ್ದು, ಶೇ 16.75ರಷ್ಟು ಮಾಲೀಕತ್ವ ಹೊಂದಿದೆ. ವಿ.ಜಿ. ಸಿದ್ಧಾರ್ಥ ಇದರ ಪ್ರವರ್ತಕರಾಗಿದ್ದು, ಹೆಚ್ಚುವರಿಯಾಗಿ ಶೇ 3.0ರಷ್ಟು ಷೇರು ಹೊಂದಿದೆ. ಹೂಡಿಕೆ ಮಾಡಿರುವ ಇತರೆ ಕಂಪನಿಗಳಲ್ಲಿ ಇಟ್ಟಿಯಂ, ಮ್ಯಾಗ್ನಸಾಫ್ಟ್ ಮತ್ತು ಗ್ಲೋಬಲ್ ಎಡ್ಜ್ ಕೂಡಾ ಸೇರಿದೆ.

Sunday, October 11, 2015

‘ಪಶುಭಾಗ್ಯ ಯೋಜನೆ’….ಇದು ಏನು?


ಹೆಚ್ಚು ಮಳೆ ಸುರಿದು ಬೆಳೆಗಳು ಕೊಚ್ಚಿ ಹೋದಾಗ ಮತ್ತು ಮಳೆ ಕೈ ಕೊಟ್ಟು ಬರಗಾಲ ಆವರಿಸಿದಾಗ ರೈತರು ಸಂಕಷ್ಟಕ್ಕೆ ಸಿಲುಕುತ್ತಾರೆ. ಇಂತಹ ಸಂದರ್ಭದಲ್ಲಿ ರೈತರಿಗೆ ನೆರವಾಗಲಿ ಎಂಬ ಕಾರಣಕ್ಕಾಗಿ ಕರ್ನಾಟಕ ಸರ್ಕಾರ ಪಶುಭಾಗ್ಯ ಯೋಜನೆಯನ್ನು ಜಾರಿಗೆ ತಂದಿದೆ. ಕೃಷಿಯನ್ನು ಮಾತ್ರ ಅವಲಂಬಿಸಿರುವ ರೈತರಿಗೆ ಈ ಯೋಜನೆ ವರದಾನವಾಗಿದೆ. ಕೃಷಿ ನಷ್ಟದಿಂದಾಗುವ ಸಮಸ್ಯೆಗಳನ್ನು ಎದುರಿಸಲು ಹಾಗೂ ಕೃಷಿಯೇತರ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡು ಬದುಕನ್ನು ಕಂಡುಕೊಳ್ಳಲು ರೈತನಿಗೆ ಪಶುಭಾಗ್ಯ ಯೋಜನೆ ಸಹಕಾರಿಯಾಗಲಿದೆ. ಕೃಷಿಗೆ ಹೊಂದಿಕೊಂಡಂತಹ ಪಶು ಸಂಗೋಪನೆ, ಹೈನುಗಾರಿಕೆಯಿಂದ ರೈತರು ಆರ್ಥಿಕವಾಗಿ ಅಭಿವೃದ್ಧಿ ಸಾಧಿಸಬಹುದಾಗಿದೆ. ಪಶು ಸಾಕಾಣಿಕೆ ಮಾಡುವ ರೈತರಿಗೆ ನೆರವು ಮತ್ತು ಉತ್ತೇಜನವನ್ನು ನೀಡಲು ಪಶುಭಾಗ್ಯ ಯೋಜನೆಯನ್ನು ಜಾರಿಗೆ ತರಲಾಗಿದೆ. ಪಶುಭಾಗ್ಯ ಯೋಜನೆಯಡಿ ಸಣ್ಣ, ಅತಿಸಣ್ಣ ರೈತರಿಗೆ ಪಶು ಸಾಕಾಣಿಕೆಗಾಗಿ ವಾಣಿಜ್ಯ ಬ್ಯಾಂಕ್‌ಗಳಿಂದ ಗರಿಷ್ಠ 1.20 ಲಕ್ಷ ರೂ.ಗಳ ವರೆಗೆ ಸಾಲ ಒದಗಿಸಲಾಗುತ್ತದೆ. ಪರಿಶಿಷ್ಟ ಜಾತಿ ಹಾಗೂ ಪಂಗಡದವರಿಗೆ ಶೇ.50 ಹಾಗೂ ಇತರೆ ಜನಾಂಗದವರಿಗೆ ಶೇ.25ರಷ್ಟು ಬ್ಯಾಂಕ್ ಸಹಾಯಧನ ನೀಡಲಾಗುತ್ತದೆ. ಫಲಾನುಭವಿಗಳ ಆಯ್ಕೆ ವಿಧಾನ : ಪಶುಭಾಗ್ಯ ಯೋಜನೆಗೆ ಹಸು, ಕುರಿ, ಆಡು, ಹಂದಿ, ಕೋಳಿಯನ್ನು ಸಾಕಾಣಿಕೆ ಮಾಡುವ ಸಣ್ಣ, ಅತಿಸಣ್ಣ ರೈತರು ಮಾತ್ರವಲ್ಲ ಕೃಷಿಭಾಗ್ಯ ಯೋಜನೆಗೆ ಅರ್ಹರಲ್ಲದ ಭೂರಹಿತರನ್ನೂ ಫಲಾನುಭವಿಗಳಾಗಿ ಆಯ್ಕೆ ಮಾಡಲಾಗುತ್ತದೆ. ಈ ಯೋಜನೆಗೆ ಆಯ್ಕೆಯಾದ ಎಲ್ಲಾ ಫಲಾನುಭವಿಗಳು ತರಬೇತಿ ಪಡೆಯುವುದು ಕಡ್ಡಾಯ. ಪಶುಭಾಗ್ಯ ಯೋಜನೆಯ ಒಟ್ಟು ಫಲಾನುಭವಿಗಳಲ್ಲಿ ಶೇ.30ರಷ್ಟು ಮಹಿಳೆಯರನ್ನು ಆಯ್ಕೆ ಮಾಡಲಾಗುತ್ತದೆ. ಅಮೃತ ಯೋಜನೆಯನ್ನು ಈ ಯೋಜನೆಗೆ ವಿಲೀನಗೊಳಿಸಿರುವುದರಿಂದ ವಿಧವೆಯರು, ದೇವದಾಸಿಯರು ಹಾಗೂ ಸಂಕಷ್ಟಕ್ಕೊಳಗಾದ ಮಹಿಳೆಯರಿಗೆ ಆದ್ಯತೆ ನೀಡಲಾಗುತ್ತದೆ.