Thursday, October 29, 2015

ಸಿದ್ದು ಸಂಪುಟ ಭರ್ತಿ : ಸಚಿವರಾಗಿ ನಾಲ್ವರ ಪ್ರಮಾಣ ಸ್ವೀಕಾರ

  
ಬೆಂಗಳೂರು : ರಾಜಭವನದ ಗಾಜಿನ ಮನೆಯಲ್ಲಿ ಇಂದು ಸಂಜೆ 4.30ಗಂಟೆಗೆ ನಡೆದ ವಿಶೇಷ ಸಮಾರಂಭದಲ್ಲಿ ರಾಜ್ಯದ ನೂತನ ಸಚಿವರು ಪ್ರಮಾಣ ವಚನ ಸ್ವೀಕರಿಸಿದರು. ರಾಜ್ಯಪಾಲ ವಾಜೂಭಾಯಿ ವಾಲಾ ಅವರು ರಾಜ್ಯ ಸಚಿವ ಸಂಪುಟದ ನಾಲ್ವರು ನೂತನ ಸದಸ್ಯರಿಗೆ ಪ್ರಮಾಣ ವಚನ ಬೋಧಿಸಿದರು.
    ನೂತನ ಸಚಿವರಾಗಿ ರಾಜ್ಯ ವಿಧಾನ ಪರಿಷತ್ತಿನ ಸದಸ್ಯ ಡಾ: ಜಿ. ಪರಮೇಶ್ವರ್, ಅರಕಲಗೂಡು ಶಾಸಕ ಎ. ಮಂಜು, ಧಾರವಾಡ ಗ್ರಾಮಾಂತರ ಶಾಸಕ ವಿನಯ್‍ಕುಲಕರ್ಣಿ ಹಾಗೂ ಹಾನಗಲ್ ಶಾಸಕ ಮನೋಹರ ತಹಸೀಲ್ದಾರ್ ಅಧಿಕಾರ ಹಾಗೂ ಗೌಪ್ಯತೆಯ ಪ್ರಮಾಣ ವಚನ ಸ್ವೀಕರಿಸಿದರು.
     ಪ್ರಮಾಣ ವಚನ ಸ್ವೀಕಾರ ಸಮಾರಂಭದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಸಚಿವರುಗಳಾದ ಡಿ.ಕೆ. ಶಿವಕುಮಾರ್, ಕೆ.ಜೆ. ಜಾರ್ಜ್, ಎಸ್.ಆರ್. ಪಾಟೀಲ್, ಶ್ಯಾಮನೂರು ಶಿವಶಂಕರಪ್ಪ ಸೇರಿದಂತೆ ಸಂಪುಟದ ಹಲವಾರು ಸಚಿವರು, ಹಿರಿಯ ಶಾಸಕರುಗಳು, ರಾಜ್ಯದ ಮುಖ್ಯ ಕಾರ್ಯದರ್ಶಿ ಕೌಶಿಕ್ ಮುಖರ್ಜಿ, ರಾಜ್ಯದ ಪೊಲೀಸ್ ಮಹಾ ನಿರ್ದೇಶಕ ಓಂಪ್ರಕಾಶ್, ಬೆಂಗಳೂರು ನಗರ ಪೊಲೀಸ್ ಆಯುಕ್ತ ನರಸಿಂಹ ಎಸ್. ಮೇಘರಿಕ್ ಸೇರಿದಂತೆ ಹಲವು ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.
1) ಡಾ: ಜಿ. ಪರಮೇಶ್ವರ್
ಡಾ: ಜಿ. ಪರಮೇಶ್ವರ್ ಅವರು ಇಂದು ಸಂಪುಟ ದರ್ಜೆ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದರು. 1951 ರ ಆಗಸ್ಟ್ 6 ರಂದು ಜನಿಸಿದ ಇವರು ತುಮಕೂರಿನ ಪ್ರಖ್ಯಾತ ಸಿದ್ಧಾರ್ಥ ಶಿಕ್ಷಣ ಸಂಸ್ಥೆಯ ದಿವಂಗತ ಹೆಚ್. ಎಂ. ಗಂಗಾಧರಯ್ಯ ಅವರ ಪುತ್ರರು. ಕೃಷಿಯಲ್ಲಿ ಸ್ನಾತಕೋತ್ತರ ವಿಜ್ಞಾನ ಪದವಿ ಹಾಗೂ ಡಾಕ್ಟರೇಟ್ ಗಳಿಸಿದ್ದಾರೆ. ಕೃಷಿ ಮತ್ತು ಶಿಕ್ಷಣ ಕ್ಷೇತ್ರವನ್ನು ವೃತ್ತಿಯಾಗಿ ಸ್ವೀಕರಿಸಿದ್ದಾರೆ. 1989 ರಲ್ಲಿ ವಿಧಾನ ಸಭಾ ಸದಸ್ಯರಾಗಿ ಆಯ್ಕೆಯಾದ ಇವರು ಮತ್ತೆ 1999 ರಲ್ಲಿ ವಿಧಾನ ಸಭಾ ಸದಸ್ಯರಾಗಿದ್ದರು. ಉನ್ನತ ಶಿಕ್ಷಣ, ರೇಷ್ಮೆ, ವಿಜ್ಞಾನ ಮತ್ತು ತ್ರಂತ್ರಜ್ಞಾನ ಹಾಗೂ ವೈದ್ಯಕೀಯ ಶಿಕ್ಷಣ ಸಚಿವರಾಗಿ ಕಾರ್ಯನಿರ್ವಹಿಸಿದ್ದಾರೆ. 2008 ರಲ್ಲಿ ಪುನ: ರಾಜ್ಯ ವಿಧಾನ ಸಭೆಗೆ ಆಯ್ಕೆಯಾಗಿದ್ದರು. 2010 ರಿಂದ ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿಯ ಅಧ್ಯಕ್ಷರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಕರ್ನಾಟಕ ಅಥ್ಲೆಟಿಕ್ಸ್ ಸಂಸ್ಥೆ, ಶ್ರೀರಂಗ ಹವ್ಯಾಸಿ ಕಲಾವಿದರು ಸಂಸ್ಥೆಗಳ ಅಧ್ಯಕ್ಷರಾಗಿ ಕಾರ್ಯ ನಿರ್ವಹಿಸಿದ್ದಾರೆ. 2014 ರಲ್ಲಿ ಕರ್ನಾಟಕ ವಿಧಾನ ಪರಿಷತ್ತಿನ ಸದಸ್ಯರಾದರು. ಇದೀಗ ಡಾ: ಜಿ. ಪರಮೇಶ್ವರ್ ಅವರು ಕರ್ನಾಟಕ ರಾಜ್ಯ ಸಚಿವ ಸಂಪುಟದಲ್ಲಿ ಸಂಪುಟ ದರ್ಜೆ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದ್ದಾರೆ.
2) ಎ. ಮಂಜು
ಎ. ಮಂಜು ಅವರು ಹಾಸನ ಜಿಲ್ಲೆ ಅರಕಲಗೂಡು ಕ್ಷೇತ್ರದ ಶಾಸಕರು. ಹಾಸನ ಜಿಲ್ಲೆಯ ಕೊಣನೂರಿನಲ್ಲಿ 1958 ರ ನವೆಂಬರ್ 1 ರಂದು ದೇವರಹಟ್ಟಿ ಅಣ್ಣೇಗೌಡ ಅವರ ಪುತ್ರರಾಗಿ ಜನಿಸಿದ ಮಂಜು ಅವರು ಕಲಾ ಮ ತ್ತು ಮತ್ತು ಕಾನೂನು ಪದವಿಧರರು. 1999 ಹಾಗೂ 2008 ರಲ್ಲಿ ರಾಜ್ಯ ವಿಧಾನ ಸಭೆಯ ಸದಸ್ಯರಾಗಿದ್ದರು. 1993 ರಲ್ಲಿ ತಂಬಾಕು ಮಂಡಳಿ ಉಪಾಧ್ಯಕ್ಷರಾಗಿ ಬೆಂಗಳೂರು ವಿಶ್ವವಿದ್ಯಾನಿಲಯದ ಸಿಂಡಿಕೇಟ್ ಮತ್ತು ಸೆನೆಟ್ ಸದಸ್ಯರಾಗಿ, ಪಿ.ಎಲ್.ಡಿ. ಬ್ಯಾಂಕ್ ಅಧ್ಯಕ್ಷರಾಗಿ ಕಾರ್ಯನಿರ್ವಹಿಸಿದ್ದಾರೆ. ಎ. ಮಂಜು ಅವರು 2013 ರ ಚುನಾವಣೆಯಲ್ಲಿ ಶಾಸಕರಾಗಿ ಆಯ್ಕೆಯಾಗಿದ್ದಾರೆ. ಅವರು ಇಂದು ಸ್ವತಂತ್ರ ಖಾತೆ ರಾಜ್ಯ ಸಚಿವ ಸಂಪುಟದ ನೂತನ ರಾಜ್ಯ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದ್ದಾರೆ. 
3) ವಿನಯ್‍ಕುಲಕರ್ಣಿ
ವಿನಯ್ ಕುಲಕರ್ಣಿ ಅವರು ಧಾರವಾಡ ಗ್ರಾಮೀಣ ವಿಧಾನ ಸಭಾ ಕ್ಷೇತ್ರದ ಶಾಸಕರು 1968 ರ ನವೆಂಬರ್ 7 ರಂದು ರಾಜಶೇಖರಪ್ಪ ಅವರ ಪುತ್ರರಾಗಿ ಜನಿಸಿದರು. ಕೃಷಿಯಲ್ಲಿ ವಿಜ್ಞಾನ ಪದವಿ ಪಡೆದಿದ್ದಾರೆ. ಅವರು ಇಂದು ರಾಜ್ಯ ಸಚಿವ ಸಂಪುಟದ ನೂತನ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದರು. ಅವರು ಇಂದು ಸ್ವತಂತ್ರ ಖಾತೆ ರಾಜ್ಯ ಸಚಿವ ಸಂಪುಟದ ನೂತನ ರಾಜ್ಯ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದ್ದಾರೆ.
4) ಮನೋಹರ್ ಹೆಚ್. ತಹಸೀಲ್ದಾರ್
ಮನೋಹರ್ ಹೆಚ್. ತಹಸೀಲ್ದಾರ್ ಅವರು ಹಾವೇರಿ ಜಿಲ್ಲೆಯ ಹಾನಗಲ್ ವಿಧಾನ ಸಭಾ ಕ್ಷೇತ್ರದಿಂದ ಆಯ್ಕೆಯಾಗಿದ್ದಾರೆ. 1946 ರ ಜುಲೈ 21 ರಂದು ತಹಸೀಲ್ದಾರ್ ಹನುಮಂತಪ್ಪ ಅವರ ಪುತ್ರರಾಗಿ ಜನಿಸಿದರು. ಮೆಕ್ಯಾನಿಕಲ್‍ ಇಂಜಿನಿಯರಿಂಗ್ ಪದವಿ ಗಳಿಸಿದರುವ ಇವರು ರಾಜ್ಯ ವಿಧಾನ ಸಭೆಗೆ ನಾಲ್ಕು ಬಾರಿ ಶಾಸಕರಾಗಿ ಆಯ್ಕೆಯಾಗಿದ್ದಾರೆ. ಈ ಹಿಂದೆ ಮನೋಹರ ತಹಸೀಲ್ದಾರ್ ಅವರು ರಾಜ್ಯ ವಿಧಾನ ಸಭೆಯ ಉಪಾಧ್ಯಕ್ಷರಾಗಿಯೂ ಸೇವೆ ಸಲ್ಲಿಸಿದ್ದಾರೆ. ಅವರು ಇಂದು ರಾಜ್ಯ ಸಚಿವ ಸಂಪುಟದ ನೂತನ ಸಂಪುಟ ದರ್ಜೆ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದರು.

No comments:

Post a Comment