Sunday, October 11, 2015

‘ಪಶುಭಾಗ್ಯ ಯೋಜನೆ’….ಇದು ಏನು?


ಹೆಚ್ಚು ಮಳೆ ಸುರಿದು ಬೆಳೆಗಳು ಕೊಚ್ಚಿ ಹೋದಾಗ ಮತ್ತು ಮಳೆ ಕೈ ಕೊಟ್ಟು ಬರಗಾಲ ಆವರಿಸಿದಾಗ ರೈತರು ಸಂಕಷ್ಟಕ್ಕೆ ಸಿಲುಕುತ್ತಾರೆ. ಇಂತಹ ಸಂದರ್ಭದಲ್ಲಿ ರೈತರಿಗೆ ನೆರವಾಗಲಿ ಎಂಬ ಕಾರಣಕ್ಕಾಗಿ ಕರ್ನಾಟಕ ಸರ್ಕಾರ ಪಶುಭಾಗ್ಯ ಯೋಜನೆಯನ್ನು ಜಾರಿಗೆ ತಂದಿದೆ. ಕೃಷಿಯನ್ನು ಮಾತ್ರ ಅವಲಂಬಿಸಿರುವ ರೈತರಿಗೆ ಈ ಯೋಜನೆ ವರದಾನವಾಗಿದೆ. ಕೃಷಿ ನಷ್ಟದಿಂದಾಗುವ ಸಮಸ್ಯೆಗಳನ್ನು ಎದುರಿಸಲು ಹಾಗೂ ಕೃಷಿಯೇತರ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡು ಬದುಕನ್ನು ಕಂಡುಕೊಳ್ಳಲು ರೈತನಿಗೆ ಪಶುಭಾಗ್ಯ ಯೋಜನೆ ಸಹಕಾರಿಯಾಗಲಿದೆ. ಕೃಷಿಗೆ ಹೊಂದಿಕೊಂಡಂತಹ ಪಶು ಸಂಗೋಪನೆ, ಹೈನುಗಾರಿಕೆಯಿಂದ ರೈತರು ಆರ್ಥಿಕವಾಗಿ ಅಭಿವೃದ್ಧಿ ಸಾಧಿಸಬಹುದಾಗಿದೆ. ಪಶು ಸಾಕಾಣಿಕೆ ಮಾಡುವ ರೈತರಿಗೆ ನೆರವು ಮತ್ತು ಉತ್ತೇಜನವನ್ನು ನೀಡಲು ಪಶುಭಾಗ್ಯ ಯೋಜನೆಯನ್ನು ಜಾರಿಗೆ ತರಲಾಗಿದೆ. ಪಶುಭಾಗ್ಯ ಯೋಜನೆಯಡಿ ಸಣ್ಣ, ಅತಿಸಣ್ಣ ರೈತರಿಗೆ ಪಶು ಸಾಕಾಣಿಕೆಗಾಗಿ ವಾಣಿಜ್ಯ ಬ್ಯಾಂಕ್‌ಗಳಿಂದ ಗರಿಷ್ಠ 1.20 ಲಕ್ಷ ರೂ.ಗಳ ವರೆಗೆ ಸಾಲ ಒದಗಿಸಲಾಗುತ್ತದೆ. ಪರಿಶಿಷ್ಟ ಜಾತಿ ಹಾಗೂ ಪಂಗಡದವರಿಗೆ ಶೇ.50 ಹಾಗೂ ಇತರೆ ಜನಾಂಗದವರಿಗೆ ಶೇ.25ರಷ್ಟು ಬ್ಯಾಂಕ್ ಸಹಾಯಧನ ನೀಡಲಾಗುತ್ತದೆ. ಫಲಾನುಭವಿಗಳ ಆಯ್ಕೆ ವಿಧಾನ : ಪಶುಭಾಗ್ಯ ಯೋಜನೆಗೆ ಹಸು, ಕುರಿ, ಆಡು, ಹಂದಿ, ಕೋಳಿಯನ್ನು ಸಾಕಾಣಿಕೆ ಮಾಡುವ ಸಣ್ಣ, ಅತಿಸಣ್ಣ ರೈತರು ಮಾತ್ರವಲ್ಲ ಕೃಷಿಭಾಗ್ಯ ಯೋಜನೆಗೆ ಅರ್ಹರಲ್ಲದ ಭೂರಹಿತರನ್ನೂ ಫಲಾನುಭವಿಗಳಾಗಿ ಆಯ್ಕೆ ಮಾಡಲಾಗುತ್ತದೆ. ಈ ಯೋಜನೆಗೆ ಆಯ್ಕೆಯಾದ ಎಲ್ಲಾ ಫಲಾನುಭವಿಗಳು ತರಬೇತಿ ಪಡೆಯುವುದು ಕಡ್ಡಾಯ. ಪಶುಭಾಗ್ಯ ಯೋಜನೆಯ ಒಟ್ಟು ಫಲಾನುಭವಿಗಳಲ್ಲಿ ಶೇ.30ರಷ್ಟು ಮಹಿಳೆಯರನ್ನು ಆಯ್ಕೆ ಮಾಡಲಾಗುತ್ತದೆ. ಅಮೃತ ಯೋಜನೆಯನ್ನು ಈ ಯೋಜನೆಗೆ ವಿಲೀನಗೊಳಿಸಿರುವುದರಿಂದ ವಿಧವೆಯರು, ದೇವದಾಸಿಯರು ಹಾಗೂ ಸಂಕಷ್ಟಕ್ಕೊಳಗಾದ ಮಹಿಳೆಯರಿಗೆ ಆದ್ಯತೆ ನೀಡಲಾಗುತ್ತದೆ.

No comments:

Post a Comment