Friday, October 30, 2015

ದಕ್ಷಿಣ ಭಾರತ ಸಿನಿಮಾ ನವಶಕೆಗೆ ನಾಂದಿ.. ‘ಐಫಾ ಉತ್ಸವ’

ಬೆಂಗಳೂರು : ಇದೇ ಮೊದಲಬಾರಿ ಡಿಸೆಂಬರ್ 4ರಿಂದ 6ರವರೆಗೆ ಮೂರುದಿನ ತೆಲಂಗಾಣ ರಾಜಧಾನಿ ಹೈದರಾಬಾದ್‍ನಲ್ಲಿ ಅಂತಾರಾಷ್ಟ್ರೀಯ ಭಾರತೀಯ ಚಲನಚಿತ್ರ ಅಕಾಡೆಮಿ(ಐಐಎಫ್‍ಎ)ವತಿಯಿಂದ ಆಯೋಜಿಸಲಾಗುತ್ತಿರುವ ‘ಐಫಾ ಉತ್ಸವ’ ದಕ್ಷಿಣ ಭಾರತದ ಸಿನಿಮಾ ರಂಗಕ್ಕೆ ಜಾಗತಿಕ ಮಟ್ಟದಲ್ಲಿ ಮಾನ್ಯತೆಯನ್ನು ತಂದುಕೊಡುವುದರ ಮುಖಾಂತರ ನವಶಕೆಗೆ ನಾಂದಿಯಾಗಲಿದೆ ಎಂದು ಅಭಿಪ್ರಾಯ ಪಟ್ಟಿದ್ದಾರೆ.
       ನಗರದಲ್ಲಿ ಶುಕ್ರವಾರ ಐಫಾ ಉತ್ಸವ ಪ್ರಶಸ್ತಿಗಳಿಗಾಗಿ ಮತದಾನ ಪ್ರಕ್ರಿಯೆಗೆ ಚಾಲನೆ ನೀಡಲಾಯಿತು. ಈ ಸಂದರ್ಭವಾಗಿ ಆಯೋಜಿಸಲಾಗಿದ್ದ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಶಿವಣ್ಣ ಇದುವರೆಗೆ ಬಾಲಿವುಡ್‍ಗೆ ಮಾತ್ರ ಸೀಮಿತವಾಗಿ ದೇಶ ವಿದೇಶಗಳಲ್ಲಿ ಅದ್ದೂರಿಯಾಗಿ ಆಯೋಜಿಸುತ್ತಾ ಬಂದಿರುವ ಐಫಾ ಪ್ರಶಸ್ತಿ ಕಾರ್ಯಕ್ರಮವನ್ನು ದಕ್ಷಿಣ ಭಾರತ ಚಿತ್ರರಂಗಕ್ಕೂ ವಿಸ್ತರಿಸುತ್ತಿರುವುದು ಸಂತಸದ ವಿಚಾರ. ಇಂತಹ ಕಾರ್ಯಕ್ರಮಗಳಿಂದಾಗಿ ಸೋದರ ಭಾಷೆಗಳ ಹಿರಿಯ ಕಲಾವಿದರು, ನಿರ್ದೇಶಕರು, ತಂತ್ರಜ್ಞರೊಂದಿಗೆ ಬಾಂಧವ್ಯ ವೃದ್ಧಿಗೊಳಿಸಿಕೊಳ್ಳಲು ನಮಗೆ ಸಹಕಾರಿಯಾಗಲಿದೆ ಎಂದು ಹೇಳಿದರು.
       ಕಾರ್ಯಕ್ರಮದ ಆಯೋಜಕ ಸಂಸ್ಥೆಯಾದ ವಿಜ್‍ಕ್ರಾಫ್ಟ್ ಇಂಟರ್‍ನ್ಯಾಷನಲ್‍ನ ನಿರ್ದೇಶಕ ಸುಬ್ಬಾಸ್ ಜೋಸೆಫ್ ಮಾತನಾಡಿ 2000ರಲ್ಲಿ ಪ್ರಾರಂಭಿಸಲಾದ ಐಫಾ ಪ್ರಶಸ್ತಿ ಕಾರ್ಯಕ್ರಮ ಇದುವರೆಗೆ ವಿಶ್ವದ ನಾಲ್ಕು ಖಂಡಗಳಲ್ಲಿನ 11ದೇಶಗಳಲ್ಲಿ ಆಯೋಜಿಸಲಾಗಿದ್ದು, ಹಿಂದಿ ಚಿತ್ರರಂಗಕ್ಕೆ ವಿಶ್ವಮಟ್ಟದಲ್ಲಿ ಮಾನ್ಯತೆಯನ್ನು ದೊರಕಿಸಿ, ಮಾರುಕಟ್ಟೆಯನ್ನು ವಿಸ್ತಾರ ಗೊಳಿಸುವಲ್ಲಿ ಯಶಸ್ವಿಯಾಗಿದೆ. ದಕ್ಷಿಣ ಭಾರತದ ಕನ್ನಡ, ತೆಲುಗು, ತಮಿಳು, ಮಳಯಾಳಂ ಸಿನಿಮಾಗಳು ಸಹ ಕಥೆ, ನಿರ್ದೇಶನ, ತಾಂತ್ರಿಕತೆಯಲ್ಲಿ ಅತ್ಯುತ್ತಮ ಮಟ್ಟದಲ್ಲಿ ಮೂಡಿಬರುತ್ತಿದ್ದು ಈಗಾಗಲೆ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಗುರುತಿಸಿಕೊಂಡಿವೆ. ಐಫಾ ಉತ್ಸವದಿಂದ ಇದನ್ನು ಮತ್ತಷ್ಟು ವಿಸ್ತಾರಗೊಳಿಸುವುದು ನಮ್ಮ ಉದ್ದೇಶವಾಗಿದೆ ಎಂದು ತಿಳಿಸಿದರು. ಐಫಾ ಉತ್ಸವದ ಪ್ರಧಾನ ಪ್ರಾಯೋಜಕತ್ವವನ್ನು ಅದಾನಿ ಗ್ರೂಪ್‍ನ ಫ್ಯೂಚರ್ ಸೂರ್ಯಕಾಂತಿ ಎಣ್ಣೆ ವಹಿಸಿಕೊಂಡಿದ್ದು ಜಿಯೋನಿ ಸ್ಮಾರ್ಟಫೋನ್ ಅದಕ್ಕೆ ಹೆಗಲು ಜೋಡಿಸಿದೆ. ಸನ್ ಟಿವಿ ಪ್ರಚಾರದ ಹೊಣೆ ಹೊತ್ತಿದೆ ಎಂದರು.
      ಕನ್ನಡ ಚಿತ್ರನಟರಾದ ದಿಗಂತ್, ವಿಜಯ ರಾಘವೇಂದ್ರ, ನಟಿಯರಾದ ಐಂದ್ರಿತಾ ರೇ, ನಭಾ ನಟೇಶ್, ಪ್ರಿಯಾಮಣಿ, ಅದಾನಿ ವಿಲ್‍ಮರ್‍ನ ಮಾರುಕಟ್ಟೆ ವಿಭಾಗದ ಜನರಲ್ ಮೇನೇಜರ್ ಕೌಶಲ್ ದೇಸಾಯಿ, ಉದಯ ಟಿವಿ ಹಿರಿಯ ವ್ಯವಸ್ಥಾಪಕರಾದ ಶ್ರೀನಿವಾಸ ಬೆಟಗೇರಿ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

No comments:

Post a Comment