Monday, October 19, 2015

ಮ್ಯಾಗಿ ನೂಡಲ್ಸ್ ಮಾರಾಟದ ಮೇಲಿನ ನಿಷೇಧ ವಾಪಸ್ : ಯು.ಟಿ.ಖಾದರ್



ಬೆಂಗಳೂರು, ಅಕ್ಟೋಬರ್ 19 : ಕೇಂದ್ರ ಸರ್ಕಾರದ ಸೂಚನೆಯಂತೆ ರಾಜ್ಯದಲ್ಲಿ ಮ್ಯಾಗಿ ನೂಡಲ್ಸ್ ಮಾರಾಟದ ಮೇಲೆ ವಿಧಿಸಲಾಗಿದ್ದ ನಿಷೇಧವನ್ನು ಈ ಕೂಡಲೇ ವಾಪಸ್ ಪಡೆಯಲಾಗಿದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಯು. ಟಿ. ಖಾದರ್ ಅವರು ಇಲ್ಲಿ ಇಂದು ಪ್ರಕಟಿಸಿದರು.
ಕೊಲ್ಕತ್ತಾದಲ್ಲಿನ ಕೇಂದ್ರ ಆಹಾರ ಪರೀಕ್ಷಾ ಪ್ರಯೋಗಾಲಯಕ್ಕೆ ನಾಲ್ಕು ತಿಂಗಳ ಹಿಂದೆಯೇ ರಾಜ್ಯದಲ್ಲಿ ಮಾರಾಟವಾಗುತ್ತಿದ್ದ ಮ್ಯಾಗಿ ನೂಡಲ್ಸ್‍ನ ಮಾದರಿಯನ್ನು ಕಳುಹಿಸಿದರೂ, ರಾಜ್ಯಕ್ಕೆ ಈವರೆಗೂ ಪರೀಕ್ಷಾ ವರದಿ ಬಂದಿಲ್ಲ ಎಂದು ಅವರು ಪತ್ರಿಕಾ ಗೋಷ್ಠಿಯಲ್ಲಿ ತಿಳಿಸಿದರು.
ಭಾರತೀಯ ಆಹಾರ ಸುರಕ್ಷತಾ ಪ್ರಾಧಿಕಾರವೂ ಕೂಡಾ ಮ್ಯಾಗಿ ಮೇಲಿನ ನಿಷೇಧದ ಬಗ್ಗೆ ಸ್ಪಷ್ಟವಾದ ಆದೇಶ ಹೊರಡಿಸಿರಲಿಲ್ಲ. ಕೇಂದ್ರ ಸರ್ಕಾರದ ಆದೇಶದಲ್ಲೂ ಯಾವುದೇ ಸ್ಪಷ್ಟತೆ ಇಲ್ಲದ ಹಿನ್ನೆಲೆಯಲ್ಲಿ ಮ್ಯಾಗಿ ನೂಡಲ್ಸ್ ಮೇಲಿನ ನಿಷೇಧವನ್ನು ಅನಿವಾರ್ಯವಾಗಿ ವಾಪಸ್ ಪಡೆಯಲಾಗಿದೆ ಎಂದು ಸಚಿವರು ವಿವರಿಸಿದರು.
ಮ್ಯಾಗಿ ನೂಡಲ್ಸ್‍ನಲ್ಲಿ ಸೀಸದ ಅಂಶ ಎಷ್ಟು ಪ್ರಮಾಣದಲ್ಲಿ ಇದೆ ಅಥವಾ ಇರಬೇಕು ಎಂಬುದನ್ನು ಯಾವುದೇ ಪ್ರಯೋಗಾಲಯವೂ ಸ್ಪಷ್ಟಪಡಿಸಿಲ್ಲ. ಆದರೆ, ಕಂಪನಿಗಳಲ್ಲಿ ಈಗಾಗಲೇ ದಾಸ್ತಾನು ಮಾಡಿರುವ ಮ್ಯಾಗಿ ನೂಡಲ್ಸ್ ಮಾರುಕಟ್ಟೆಗೆ ಬರದಂತೆ ಎಚ್ಚರ ವಹಿಸಲಾಗುವುದು. ಹೊಸದಾಗಿ ತಯಾರಾಗುವ ನೂಡಲ್ಸ್ ಮಾರುಕಟ್ಟೆಗೆ ಪ್ರವೇಶಿಸುವ ಮುನ್ನ ಮತ್ತೊಮ್ಮೆ ಪರೀಕ್ಷೆಗೆ ಒಳಪಡಿಸಿ, ಜನಾರೋಗ್ಯದತ್ತ ವಿಶೇಷ ಗಮನಹರಿಸಲಾಗುವುದು ಎಂದು ಯು. ಟಿ ಖಾದರ್ ಅವರು ಹೇಳಿದರು.
ಕಳೆದ ಜೂನ್ 5 ರಂದು ಕೇಂದ್ರ ಸರ್ಕಾರವು ಹೊರಡಿಸಿದ್ದ ಆದೇಶದಂತೆ ರಾಜ್ಯದಲ್ಲಿ ಮ್ಯಾಗಿ ನೂಡಲ್ಸ್‍ನ ಮಾರಾಟದ ಮೇಲೆ ನಿಷೇಧ ಹೇರಲಾಗಿತ್ತು. ಒಕ್ಕೂಟದ ವ್ಯವಸ್ಥೆಯಲ್ಲಿ ಕೇಂದ್ರ ಸರ್ಕಾರದ ಆದೇಶಗಳನ್ನು ಗೌರವಿಸುವ ಹಾಗೂ ಸಾರ್ವಜನಿಕರ ಆರೋಗ್ಯ ಕಾಯ್ದುಕೊಳ್ಳುವ ದೃಷ್ಟಿಯಿಂದ ಈ ಆದೇಶವನ್ನು ಪಾಲಿಸಲಾಗಿತ್ತು. ಮ್ಯಾಗಿ ನೂಡಲ್ಸ್ ಮಾರಾಟದ ಮೇಲಿನ ನಿಷೇಧದಿಂದಾಗಿ ರಾಜ್ಯದಲ್ಲಿ ಐದು ನೂರು ಮಂದಿಗೆ ಉದ್ಯೋಗವಿಲ್ಲದಂತಾಗಿತ್ತು ಎಂದೂ ಸಚಿವರು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

No comments:

Post a Comment