Saturday, September 26, 2015

ಜೀವವಿಮೆ ಅನಿವಾರ್ಯ ಯಾವಾಗ?





ಜೀವ ವಿಮೆ ಮಾಡಿಕೊಳ್ಳುವುದು ಕಡ್ಡಾಯವೇನೂ ಅಲ್ಲ. ಆದರೆ, ಜೀವನದ ಕೆಲವೊಂದು ಸಂದರ್ಭ ಮತ್ತು ಪರಿಸ್ಥಿತಿಗಳಲ್ಲಿ ಜೀವವಿಮೆ ಅನಿವಾರ್ಯವಾಗಿ ಬಿಡುತ್ತದೆ. ಆ ಕುರಿತು ಇಲ್ಲಿದೆ ಒಂದಷ್ಟು ಮಾಹಿತಿ.

 

ಪೋಷಕರು ಅವಲಂಬಿತರಾಗಿದ್ರೆ 
ಕುಟುಂಬದಲ್ಲಿ ದುಡಿಯುವವರು ನೀವೊಬ್ಬರೆ ಆಗಿದ್ದರೆ ಮತ್ತು ಹಣಕಾಸು ವಿಚಾರದಲ್ಲಿ ಪೋಷಕರು ನಿಮ್ಮ ಮೇಲೆಯೇ ಅವಲಂಬಿತರಾಗಿದ್ದರೆ ಜೀವ ವಿಮೆ ಮಾಡಿಸಿಕೊಳ್ಳುವ ಕುರಿತು ಯೋಚಿಸುವುದು ಒಳಿತು. ನಿಮ್ಮ ಜೀವಕ್ಕೆ ಎದುರಾಗುವ ಅನಿರೀಕ್ಷಿತ ಆಘಾತ ಪೋಷಕರನ್ನು ಮಾನಸಿಕವಾಗಿ ಅಷ್ಟೇ ಅಲ್ಲದೆ ಆರ್ಥಿಕವಾಗಿಯೂ ಕುಗ್ಗಿ ಹೋಗುವಂತೆ ಮಾಡಬಹುದು. ದೊಡ್ಡ ಮೊತ್ತದ ಜೀವ ವಿಮೆ ಮಾಡಿಸಿಕೊಂಡಿದ್ದರೆ ನಿಮ್ಮ ನಂತರವೂ ಅವರನ್ನು ಆರ್ಥಿಕ ಅಭದ್ರತೆ ಕಾಡದು.

ಹೊಸದಾಗಿ ಮದುವೆಯಾಗಿದ್ರೆ
ಮದುವೆ ಅನ್ನುವುದು ಒಂದು ಸುಂದರ ಬಂಧವಷ್ಟೇ ಅಲ್ಲ ಅದೊಂದು ಹೊಸ ಜವಾಬ್ದಾರಿ. ನಿಮ್ಮ ಪತ್ನಿಯನ್ನು ಭವಿಷ್ಯದಲ್ಲಿ ಹಣಕಾಸು ವಿಚಾರವಾಗಿ ಸುರಕ್ಷಿತವಾಗಿಡಬೇಕಾದರೆ ಜೀವವಿಮೆ ಮಾಡಿಕೊಳ್ಳುವುದು ಅತ್ಯಗತ್ಯ. ಮದುವೆಯ ನಿಶ್ಚಿತಾರ್ಥದ ದಿನದಿಂದಲೇ ಜೀವ ವಿಮೆ ಕುರಿತು ಯೋಚಿಸಿ.

ಮಕ್ಕಳಾದಾಗ
ಮಕ್ಕಳಾದಾಗಲೂ ಇನ್ಷೂರೆನ್ಸ್ ಮಾಡಿಸಿಕೊಳ್ಳಬಹುದು. ಮಕ್ಕಳ ಭವಿಷ್ಯವನ್ನು ಹಣಕಾಸು ವಿಚಾರದಲ್ಲಿ ಸುರಕ್ಷಿತವಾಗಿಡಲು ಇನ್ಛೂರೆನ್ಸ್ ಸೂಕ್ತ ಆಯ್ಕೆ. ನಿಮಗೇನಾದರೂ ತೊಂದರೆಯಾದರೂ ಮಕ್ಕಳ ಭವಿಷ್ಯಕ್ಕೆ ಯಾವುದೇ ಸಮಸ್ಯೆಯಾಗದಂತೆ ಇನ್ಷೂರೆನ್ಸ್ ರಕ್ಷಣೆ ನೀಡುತ್ತದೆ. ಈ ಕುರಿತು ನಿಮ್ಮ ಪತ್ನಿ ಗರ್ಭಿಣಿಯಾಗಿರುವಾಗಲೇ ನಿರ್ಧಾರಕ್ಕೆ ಬರುವುದು ಒಳಿತು.

ಹೊಸ ಮನೆಗೆ ಸಾಲ ಮಾಡಿದ್ರೆ
ಹೊಸದಾಗಿ ಮನೆ ಕೊಂಡು ಕೊಂಡಿರುತ್ತೀರಿ. ಅದಕ್ಕಾಗಿ ಮೈತುಂಬಾ ಸಾಲ ಬೇರಿ ಮಾಡಿಕೊಂಡಿರುತ್ತೀರಿ. ನಿಮ್ಮ ಜೀವಕ್ಕೇನಾದರೂ ತೊಂದರೆಯಾದರೆ ಈ ಸಾಲದ ಹೊರೆ ಕುಟುಂಬದ ಮೇಲೆಯೇ ಬೀಳುತ್ತದೆ. ನಿಮ್ಮ ಕಳೆದುಕೊಂಡ ನೋವಿನ ಜತೆಗೆ ಈ ಸಾಲ ತೀರಿಸುವ ಹೊಣೆಯೂ ಅವರ ಮೇಲೆ ಬೀಳುತ್ತದೆ. ಇಂಥ ಪರಿಸ್ಥಿತಿ ನಿಮ್ಮ ಕುಟುಂಬಕ್ಕೆ ಬರಬಾರದು ಅಂತಿದ್ದರೆ ಜೀವ ವಿಮೆ ಮಾಡಿಸಿಕೊಳ್ಳಿ. ನಿಮ್ಮ ನಂತರವೂ ಹೊಸ ಮನೆ ನಿಮ್ಮ ಕುಟುಂಬದ ಪಾಲಿಗೆ ನೆಮ್ಮದಿಯ ತಾಣವಾಗಿಯೇ ಉಳಿಯುವಂತೆ ನೋಡಿಕೊಳ್ಳಿ.

ಬಡ್ತಿ ಸಿಕ್ಕಾಗ 
ಕೆಲಸದಲ್ಲಿ ಬಡ್ತಿ ಸಿಕ್ಕಿತೆಂದರೆ ನಿಮ್ಮ ಆದಾಯವೂ ಹೆಚ್ಚಾಯಿತೆಂದೇ ಅರ್ಥ. ಅದರ ಜತೆಗೆ ನಿಮ್ಮ ಕುಟುಂಬದ ಜೀವನ ಶೈಲಿಯೂ ಬದಲಾಗುತ್ತದೆ. ಈ ಬದಲಾದ ಜೀವನ ಶೈಲಿ ನಿಮ್ಮ ನಂತರವೂ ಅದೇ ರೀತಿ ಮುಂದುವರಿಯಬೇಕು ಅನ್ನುವಂತಿದ್ದರೆ ಜೀವವಿಮೆಯ ಮೊತ್ತ ಹೆಚ್ಚಿಸಿಕೊಳ್ಳುವುದು ಒಳಿತು.

ಹೊಸದಾಗಿ ಸಾಲ ಮಾಡಿದಾಗ
ಕಾರು, ವೈಯಕ್ತಿಕ ಸಾಲ ಮಾಡಿದಾಗ ನಿಮ್ಮ ಮೇಲಿನ ಇನ್ಷೂರೆನ್ಸ್ ಕವರೇಜ್ ಕೂಡ ಹೆಚ್ಚಾಗಲಿ. ನಿಮ್ಮ ನಂತರ ಕುಟುಂಬಕ್ಕೆ ಆಸ್ತಿಯನ್ನು ಬಿಟ್ಟುಹೋಗುತ್ತಿದ್ದೀರಿಯೇ ಹೊರತು ಸಾಲವನ್ನಲ್ಲ ಎನ್ನುವುದು ನಿಮ್ಮ ಗಮನದಲ್ಲಿರಲಿ.



No comments:

Post a Comment