-ಪಶ್ಚಿಮ ಘಟ್ಟಗಳ ಉದ್ದಕ್ಕೂ 700ಕಿ.ಮೀ ಸೈಕಲ್ ಯಾತ್ರೆಯಲ್ಲಿ ಭಾಗವಹಿಸಲು ಕರೆ
ಬೆಂಗಳೂರು, ಸೆಪ್ಟೆಂಬರ್,30: ಪರಿಸರ ಮತ್ತು ಮಾನವನ ಆರೋಗ್ಯಕ್ಕೆ ಪೂರಕವಾದ ಸೈಕಲ್ ಬಳಕೆಯನ್ನು ಪ್ರೋತ್ಸಾಹ ನೀಡುತ್ತಿರುವ ಐಸೈಕಲ್, ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಸಹಯೋಗದಲ್ಲಿ 'ಗ್ರೇಟ್ ಮಲೆನಾಡು ಚಾಲೆಂಜ್-2015' ವಾರ್ಷಿಕ ಸಾಹಸಮಯ ಸೈಕಲ್ ಯಾತ್ರೆಗೆ ಬುಧವಾರ ಚಾಲನೆ ನೀಡಲಾಯಿತು.
ಭಾರತದ ದೊಡ್ಡ ಸಾಹಸಮಯ ಸೈಕಲ್ ಯಾತ್ರೆಯಲ್ಲಿ ಭಾಗವಹಿಸಲು ದೇಶಾದ್ಯಂತ ಸೈಕ್ಲಿಂಗ್ ಉತ್ಸಾಹಿಗಳನ್ನು ಆಹ್ವಾನಿಸಲಾಗಿದೆ. ಈ ಕಾರ್ಯಕ್ರಮದ 6 ನೇ ಆವೃತ್ತಿಯಲ್ಲಿ ಪಾಲ್ಗೊಳ್ಳುವ ಸೈಕಲ್ ಸವಾರರು ಕರ್ನಾಟಕದ ಪಶ್ಚಿಮ ಘಟ್ಟಗಳ ಒರಟು ರಸ್ತೆಯ 700 ಕಿಲೋಮೀಟರ್ ದೂರವನ್ನು ಕ್ರಮಿಸಲಿದ್ದಾರೆ.
ಈ ರೇಸ್ ಮಡಿಕೇರಿ ಪಟ್ಟಣದಿಂದ ಪ್ರಾರಂಭವಾಗುತ್ತದೆ ಮತ್ತು ಉಡುಪಿ ಬಳಿ ಇರುವ ಮರವಂತೆಯಲ್ಲಿ ಕೊನೆಗೊಳ್ಳುತ್ತದೆ. ಅಕ್ಟೋಬರ್ 31ರಿಂದ ಆರಂಭವಾಗಲಿರುವ ಈ ರೇಸ್, ನವೆಂಬರ್ 7, 2015ರಂದು ಪೂರ್ಣಗೊಳ್ಳಲಿದೆ.
ಕರ್ನಾಟಕದ ಪ್ರಾಕೃತಿಕ ಮತ್ತು ಆಕರ್ಷಕ ಪಶ್ಚಿಮ ಘಟ್ಟಗಳಲ್ಲಿ ಸೈಕ್ಲಿಂಗ್ ಮಹತ್ವವನ್ನು ಮತ್ತು ಪರಿಸರ ಪ್ರವಾಸೋದ್ಯಮದ ಅಗತ್ಯವನ್ನು ಪ್ರಚಾರ ಪಡಿಸುವುದು ಐಸೈಕಲ್ ಚಾಲೆಂಜ್‍ನ ಗುರಿಯಾಗಿದೆ.
ಎಸ್‍ಬಿಐ ಮುಖ್ಯ ಜನರಲ್ ಮ್ಯಾನೇಜರ್ ರಜನಿ ಮಿಶ್ರಾ, ಬೆಂಗಳೂರಿನ ಎಸ್‍ಬಿಐ ಕ್ಯಾಂಪಸ್‍ನಲ್ಲಿ ಈ ಉಪಕ್ರಮಕ್ಕೆ ಚಾಲನೆ ನೀಡಿದರು. ಇದೇ ಸಂದರ್ಭದಲ್ಲಿ ಅವರು ಜಿಎಂಸಿ ಸಂಸ್ಥಾಪಕ ಹಾಗೂ ಈ ಉಪಕ್ರಮಕ್ಕೆ ನಿರಂತರ ಪ್ರೋತ್ಸಾಹ ನೀಡುತ್ತ ಬಂದಿರುವ ಅಮೀತಾ ಬೈಂದೂರ್ ಹಾಗೂ 3 ಬಾರಿ ಜಿಎಂಸಿ ಚಾಂಪಿಯನ್ ಆಗಿ ಹೊರಹೊಮ್ಮಿದ ನವೀನ್ ಶಿವಣ್ಣ ಅವರಿಗೆ ಜರ್ಸಿಗಳನ್ನು ನೀಡಿದರು.
ನಂತರ ಈ ರೇಸ್ ಬಗ್ಗೆ ಮಾತನಾಡಿದ ರಜನಿ ಮಿಶ್ರಾ, `ಇದು ಐಸೈಕಲ್ ವತಿಯಿಂದ ಆಯೋಜಿಸುತ್ತಿರುವ ಒಂದು ಅತ್ಯುತ್ತಮ ಹಾಗೂ ಸಾಮಾಜಿಕ ಕ್ರೀಡಾ ಕಾರ್ಯಕ್ರಮವಾಗಿದೆ. ರಾಜ್ಯದಲ್ಲಿ ಪರಿಸರ ಪ್ರವಾಸವನ್ನು ಉತ್ತೇಜಿಸುವ ಮತ್ತು ಸಾರಿಗೆಯ ಒಂದು ಅಂಗವಾಗಿ ಸೈಕಲ್ ಬಳಕೆಯನ್ನು ಪ್ರೋತ್ಸಾಹಿಸುವ ಒಂದು ಪ್ರಯತ್ನವಾಗಿದೆ. ಇಂತಹ ಒಂದು ಉದಾತ್ತ ಕಾರ್ಯಕ್ರಮದೊಂದಿಗೆ ಎಸ್‍ಬಿಐ ಗುರುತಿಸಿಕೊಳ್ಳುತ್ತಿರುವುದು ಹೆಮ್ಮೆ ತಂದಿದೆ. ಎಸ್‍ಬಿಐ ಈ ಕಾರ್ಯಕ್ರಮಕ್ಕೆ ಎರಡನೇ ಬಾರಿಗೆ ಬೆಂಬಲ ನೀಡುತ್ತಿದೆ' ಎಂದರು.
ಉಪಕ್ರಮಕ್ಕೆ ಚಾಲನೆ ನೀಡುವ ಈ ಸಂದರ್ಭದಲ್ಲಿ ಐಸೈಕಲ್ ಅಧ್ಯಕ್ಷ ಮಂಜೇಶ್ ಚಂದ್ರಶೇಖರನ್ ಹಾಜರಿದ್ದರು. `ಜನರಿಗೆ ಸೈಕ್ಲಿಂಗ್ ತೆಗೆದುಕೊಳ್ಳುವಂತೆ ಪ್ರೋತ್ಸಾಹಿಸುವ ಜೊತೆಗೆ ಪರಿಸರ ಪ್ರವಾಸೋದ್ಯಮಕ್ಕೆ ಉತ್ತೇಜನ ನೀಡುವುದು ಈ ಸೈಕಲ್ ಯಾತ್ರೆಯ ಪ್ರಮುಖ ಉದ್ದೇಶವಾಗಿದೆ. ವರ್ಷದಿಂದ ವರ್ಷಕ್ಕೆ ಈ ಕಾರ್ಯಕ್ರಮದಲ್ಲಿ ಭಾಗವಹಿಸುವ ಸೈಕ್ಲಿಂಗ್ ಉತ್ಸಾಹಿಗಳ ಸಂಖ್ಯೆ ಹೆಚ್ಚುತ್ತಿರುವುದು ನಮಗೆ ಸಂತಸ ತಂದಿದೆ. ಜನರಲ್ಲಿ ಈ ಸೈಕ್ಲಿಂಗ್ ಪ್ರೀತಿಯನ್ನು ಇನ್ನೂ ಹೆಚ್ಚು ಹೆಚ್ಚು ಬೆಳೆಸುವುದು ನಮ್ಮ ಆಶಯವಾಗಿದೆ' ಎಂದರು.
ಸುಮಾರು 100 ಜನ ಸೈಕಲ್ ಉತ್ಸಾಹಿಗಳು ಈ ಸಾಹಸೋಪೇತ ಸೈಕ್ಲಿಂಗ್ ಚಾಲೆಂಜ್ ರೇಸ್‍ನಲ್ಲಿ ಭಾಗವಹಿಸುವ ನಿರೀಕ್ಷೆ ಇದೆ. ಅಲ್ಲದೇ, ಈ ರೇಸ್ ಆಸಕ್ತಿ ಇರುವ ಎಲ್ಲರಿಗೂ ಮುಕ್ತವಾಗಿರುತ್ತದೆ. ಭಾಗವಹಿಸುವವರು ಐಸೈಕಲ್ ಮೂಲಕ ಎಂಟಿಬಿ ಸೈಕಲ್‍ಗಳನ್ನು ಬಾಡಿಗೆ ಪಡೆದುಕೊಳ್ಳಲೂ ಅವಕಾಶವಿದೆ.
No comments:
Post a Comment